fbpx

ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್‌ರವರು ಬೆಲೆ ತೆರಬೇಕಾಗುತ್ತದೆ: ಸಿದ್ದರಾಮಯ್ಯ

 

ಉತ್ತರಪ್ರದೇಶದ ಪೊಲೀಸರು ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ಈ ಇಬ್ಬರು ನಾಯಕರ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್ ಅವರು ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ಅಡ್ಡಹಾಕಿದ್ದಾರೆ. ಪಟ್ಟು ಬಿಡದೇ ಮುಂದೆ ಸಾಗಿದಾಗ ರಾಹುಲ್ ಗಾಂಧಿಯನ್ನು ಪೊಲೀಸರು ತಳ್ಳಾಡಿದ್ದರಿಂದ ರಾಹುಲ್ ಕುಸಿದು ಬಿದ್ದ ಘಟನೆ ಜರುಗಿದೆ. ನಿಷೇದಾಜ್ಞೆ ಆದೇಶದ ಉಲ್ಲಂಘನೆ ಆರೋಪದ ಮೇಲೆ ಬಂಧಿಸುವುದಾಗಿ ಹೇಳಿ ಸೆಕ್ಷನ್ 188 ಐಪಿಸಿ ಅಡಿಯಲ್ಲಿ ರಾಹುಲ್ ಗಾಂಧಿ  ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದ ಬಣ್ಣ ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಆ ಕುಟುಂಬದ ಭೇಟಿಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಉತ್ತರಪ್ರದೇಶದ ಪೊಲೀಸ್ ರಾಜ್ಯದಲ್ಲಿ‌ ಸಂಸದ ರಾಹುಲ್ ಗಾಂಧಿ ಮತ್ತು ನಮ್ಮ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರೇ ಸುರಕ್ಷಿತರಲ್ಲ ಎಂದ‌ ಮೇಲೆ ಅಲ್ಲಿನ‌ ದಲಿತರು,‌ ಮಹಿಳೆಯರು, ರೈತರು, ಕಾರ್ಮಿಕರು ಹೇಗೆ ಸುರಕ್ಷಿತರಾಗಿರಲು ಸಾಧ್ಯ? ಯೋಗಿ ಆದಿತ್ಯನಾಥ್ ಸರ್ಕಾರ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಅವರು ತಿಳಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಬಂಧನವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

 

Please follow and like us:
error
error: Content is protected !!