ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಹೊಸದಿಲ್ಲಿ : ದೇಶವ್ಯಾಪಿ ಲಾಕ್‌ಡೌನ್‌ನಿಂದಾಗಿರುವ ಆರ್ಥಿಕ ನಷ್ಟವನ್ನು ಭರಿಸಿಕೊಳ್ಳುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಲ್ಲಿ ಭಾರಿ ಹೆಚ್ಚಳ ಮಾಡಿದೆ.

ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 10 ರೂ. ಹೆಚ್ಚಿದ್ದರೆ, ಡೀಸೆಲ್ ಮೇಲಿನ ಸುಂಕ 13 ರೂ. ಹೆಚ್ಚಳವಾಗಿದೆ. ಈ ಬದಲಾವಣೆಗಳು ಮೇ 6ರಿಂದಲೇ ಜಾರಿಗೆ ಬಂದಿವೆ. ಆದರೆ ಅಬಕಾರಿ ಸುಂಕ ಹೆಚ್ಚಳದಿಂದಾಗಿ ಇವುಗಳ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಸುಂಕ ಹೆಚ್ಚಳದಿಂದ ಬಂದ ಹಣವನ್ನು ಮೂಲ ಸೌಕರ್ಯ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯನ್ನು 1 ರೂ. ನಂತೆ ಹೆಚ್ಚಿಸಿದರೆ, ಸರ್ಕಾರಿ ಬೊಕ್ಕಸಕ್ಕೆ ವಾರ್ಷಿಕ 14,500 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರುತ್ತದೆ. ಆದರೆ ಲಾಕ್‌ಡೌನ್ ವಿಸ್ತರಣೆಯಿಂದ ಕುಂಠಿತಗೊಂಡಿರುವ ಬೇಡಿಕೆ ಹೆಚ್ಚಿದಲ್ಲಿ ಮಾತ್ರ ಇದರ ಪ್ರಯೋಜನ ಸಿಗಲಿದೆ.

ದೆಹಲಿಯ ಎಎಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಏರಿಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಾರ್ಚ್ 14ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 3ರೂ. ಹೆಚ್ಚಿಸಲಾಗಿತ್ತು. ಇದರಿಂದಾಗಿ ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆ ಲೀಟರ್‌ಗೆ 22.98 ರೂಪಾಯಿ ಹಾಗೂ ಡೀಸೆಲ್ ಮೇಲಿನ ತೆರಿಗೆ 18.83 ರೂ. ಆಗಿತ್ತು.

Please follow and like us:
error