ಪೀರನವಾಡಿಯ ಈ ಪ್ರತಿಮೆ ಇತಿಹಾಸದ ಪುಟ ಸೇರಿಹೋಯಿತು

ಪೀರನವಾಡಿಯ ಈ ಪ್ರತಿಮೆ ಇತಿಹಾಸದ ಪುಟ ಸೇರಿಹೋಯಿತು. ನಿನ್ನೆ ಸ್ವತಃ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರ್ ಕುಮಾರ್ ಪಾಂಡೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಆಗಸ್ಟ್ 15ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಸ್ಥಳೀಯ ಯುವಕರು ಅನಾವರಣಗೊಳಿಸಿದ್ದರು. ಪೊಲೀಸರು, ಜಿಲ್ಲಾಡಳಿತ ಪ್ರತಿಮೆ ಕಿತ್ತು, ಟ್ರಾಕ್ಟರ್ ನಲ್ಲಿ ತುಂಬಿಕೊಂಡುಹೋಗಿ ಸ್ವಾತಂತ್ರ್ಯ ಸೇನಾನಿಯನ್ನು ಅಪಮಾನಿಸಿದ್ದರು. ತಾಯ್ನೆಲದ ರಕ್ಷಣೆಗೆ ನೇಣುಗಂಬಕ್ಕೆ ಏರಿದ ಮಹಾಸಾಹಸಿ ರಾಯಣ್ಣ. ಅವರಿಗೆ ಸರ್ಕಾರವೇ ಮಾಡಿದ ಈ ಅಪಮಾನದ ವಿರುದ್ಧ ಪ್ರತಿಭಟನೆಗಳು ಆರಂಭವಾದವು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಾತ್ರೋರಾತ್ರಿ ರಾಯಣ್ಣನ ಪ್ರತಿಮೆಯನ್ನು ಅನಾವರಣಗೊಳಿಸಿಬಿಟ್ಟರು. ಮೊದಲು ಹಾಕಿದ್ದ ಪ್ರತಿಮೆಯನ್ನು ಜಿಲ್ಲಾಡಳಿತ ಹೊತ್ತೊಯ್ದಿತ್ತು. ಕರವೇ ಕಾರ್ಯಕರ್ತರು ಹೊಸ ಪ್ರತಿಮೆ ತಂದು ಪೊಲೀಸರು-ಮೀಡಿಯಾಗಳಿಗೆ ಗೊತ್ತಾಗದಂತೆ ಪ್ರತಿಷ್ಠಾಪಿಸಿದ್ದೇ ಒಂದು ರೋಚಕ ಕಥೆ, ಥೇಟ್ ರಾಯಣ್ಣನ ಗೆರಿಲ್ಲಾ ಯುದ್ಧತಂತ್ರ. ಎಲ್ಲವೂ ಅಂದುಕೊಂಡಹಾಗೇ ಆಯಿತು. ಪ್ರತಿಮೆ ಇಟ್ಟಿದ್ದೀವಿ, ಸಣ್ಣ ಹಾನಿ ಮಾಡಿದರೂ ಸುಮ್ಮನಿರುವುದಿಲ್ಲ, ಇಡೀ ಕರ್ನಾಟಕದ ಮೂಲೆಮೂಲೆಗೆ ಹೋರಾಟ ಕೊಂಡೊಯ್ಯುತ್ತೇವೆ ಎಂದರು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು. ಅಲ್ಲಿಗೆ ಸರ್ಕಾರ, ಜಿಲ್ಲಾಡಳಿತ ತಲೆಬಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ಬೆವರು ಬಸಿದು ಕನ್ನಡ ಹೋರಾಟವನ್ನು ಕಟ್ಟಿದೆ. ರಾಯಣ್ಣನವರಿಗೆ, ಚೆನ್ನಮ್ಮನವರಿಗೆ ಅಪಮಾನವಾದರೆ ಸಹಿಸಲು ಸಾಧ್ಯವೇ? ಕರವೇ ಹೋರಾಟವೆಂದರೆ ಹಾಗೆನೇ, ಅಲ್ಲೇ ಡ್ರಾ ಅಲ್ಲೇ ಬಹುಮಾನ. ಕೇಸು ಹಾಕಿದ್ದಾರೆ, ಪ್ರತಿಮೆ ಹಾಕಿರೋದೇ ನಾವು, ಅದೇನು ಶಿಕ್ಷೆ ಕೊಡ್ತಾರೋ ಕೊಡಲಿ. ಕ್ಷಮೆ ಕೇಳಿ ಜೀವದಾನ ಪಡೆಯುವವರ ಪೀಳಿಗೆ ನಾವಲ್ಲ, ತಾಯ್ನೆಲಕ್ಕಾಗಿ ನಗುನಗುತ್ತ ಶಿಕ್ಷೆಗೆ ಒಳಗಾಗುವವರು ನಾವು. ಜೈ ರಾಯಣ್ಣ, ಜೈ ಚೆನ್ನಮ್ಮ…

ದಿನೇಶ್ ಕುಮಾರ್

Please follow and like us:
error