ಪಿಪಿಇ ಕಿಟ್ ಇಲ್ಲ ಎಂದು ಆರೋಪಿಸಿದ್ದ ವೈದ್ಯನಿಗೆ ಥಳಿಸಿ, ರಸ್ತೆಯಲ್ಲಿ ಎಳೆದೊಯ್ದ ಪೊಲೀಸರು: ಆರೋಪ

ಹೊಸದಿಲ್ಲಿ: ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಕೊರತೆ ಬಗ್ಗೆ ಕಳೆದ ತಿಂಗಳು ಆರೋಪ ಮಾಡಿದ ವಿಶಾಖಪಟ್ಟಣದ ವೈದ್ಯರೊಬ್ಬರನ್ನು ಪೊಲೀಸರು ಎಳೆದಾಡಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಅಂಗಿ ಇಲ್ಲದೇ ಕುಳಿತಿರುವ ಡಾ.ಕೆ.ಸುಧಾಕರ್ ಅವರ ಕೈಗಳನ್ನು ಹಿಂದಕ್ಕೆ ಕಟ್ಟಿ ಪೊಲೀಸರು ಹೊಡೆಯುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ.

ಸುಧಾಕರ್ ಮದ್ಯಪಾನ ಮಾಡಿದ ಅಮಲಿನಲ್ಲಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೊಲೀಸ್ ಪೇದೆಯೊಬ್ಬರಿಂದ ಮೊಬೈಲ್ ಫೋನ್ ಕಸಿದುಕೊಂಡು ಎಸೆದಿದ್ದಾರೆ. ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬೇಕು ಎಂದು ವಿಶಾಖಪಟ್ಟಣ ಪೊಲೀಸ್ ಆಯುಕ್ತ ಆರ್.ಕೆ.ಮೀನಾ ಆರೋಪಿಸಿದ್ದಾರೆ.

ಡಾ.ಸುಧಾಕರ್ ಅವರನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಡಾ.ಸುಧಾಕರ್ ಅವರನ್ನು ಕೆಜಿಎಚ್ ಆಸ್ಪತ್ರೆಯ ಅಪಘಾತ ವಿಭಾಗಕ್ಕೆ ಸಂಜೆ ಕರೆ ತರಲಾಗಿದೆ. ಅವರು ಪಾನಮತ್ತರಾಗಿರುವುದು ಕಂಡುಬಂದಿದೆ. ಮದ್ಯದ ಅಮಲಿನಲ್ಲಿ ಯಾರೊಂದಿಗೂ ಸಹಕರಿಸದೇ ಎಲ್ಲರನ್ನೂ ಬಯ್ದಾಡುತ್ತಿದ್ದಾರೆ. ಅವರ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ” ಎಂದು ಪ್ರಕಟಣೆ ಹೇಳಿದೆ.

ಈ ಮಧ್ಯೆ ಸುಧಾಕರ್ ಅವರನ್ನು ಥಳಿಸಿದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಕೋವಿಡ್-19 ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ರಾಜ್ಯದಲ್ಲಿ ಸಾಕಷ್ಟು ಸುರಕ್ಷಾ ಸಾಧನಗಳು ಇಲ್ಲ ಕಳೆದ ತಿಂಗಳು ಸುಧಾಕರ್ ಆಪಾದಿಸಿದ್ದರು.

Please follow and like us:
error