ಬೆಂಗಳೂರು, : ಕರ್ನಾಟಕ ಮಾಧ್ಯಮ ಅಕಾಡೆಮಿಯ 2020-21ನೆ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ (ಎಸ್ಸಿಪಿ/ಟಿಎಸ್ಪಿ) ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ಸ್ನಾತಕೋತ್ತರ ಪದವೀಧರರಿಗೆ ವೃತ್ತಿಯಲ್ಲಿ ಉತ್ತಮ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ತಿಂಗಳ ಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿಯ 25 ಮಂದಿ ಹಾಗೂ ಪರಿಶಿಷ್ಟ ಪಂಗಡದ 10 ಮಂದಿ ಅಭ್ಯರ್ಥಿಗಳನ್ನು ಗರಿಷ್ಟ ಅಂಕಗಳ ಆಧಾರದ ಮೇಲೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರಿಕಾಲಯ/ವಾಹಿನಿಗಳಲ್ಲಿ ತರಬೇತಿ ನೀಡಿ ತಿಂಗಳಿಗೆ 15 ಸಾವಿರ ರೂ.ಗಳ ಸ್ಟೈಫಂಡ್ ನೀಡಲಾಗುವುದು ಎಂದು ತಿಳಿಸಲಾಗಿದೆ.
ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿದ್ದು ಕನ್ನಡ ಭಾಷೆಯಲ್ಲಿ ಪರಿಣಿತರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು. ಅರ್ಜಿಯೊಂದಿಗೆ ಎಸೆಸೆಲ್ಸಿ ಅಂಕಪಟ್ಟಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳೊಂದಿಗೆ ಜಾತಿ ಪ್ರಮಾಣ ಪತ್ರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಇನ್ನಿತರೆ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ-ಮೇಲ್ ವಿಳಾಸ traineekma2020@gmail.com ಮೂಲಕ ಅಥವಾ ಅಂಚೆ ಮೂಲಕ ನ.27ರ ಒಳಗೆ ತಲುಪುವಂತೆ ಕಳುಹಿಸಬೇಕು.