ಪಕ್ಷೇತರ ಅಭ್ಯರ್ಥಿಯಾಗಿ ರೋಷನ್ ಬೇಗ್ ಕಣಕ್ಕೆ

ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ತಡೆ

ಬೆಂಗಳೂರು,  : ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆಗಳನ್ನು ಮಾಡಿಕೊಂಡಿದ್ದ ಅನರ್ಹ ಶಾಸಕ ಆರ್.ರೋಷನ್ ಬೇಗ್‌ಗೆ ಬಿಜೆಪಿ ಹೈಕಮಾಂಡ್ ಆಘಾತ ನೀಡಿದೆ.

ಬುಧವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಎಲ್ಲ ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದರು. ಆದರೆ, ರಾತ್ರಿ ಬಿಡುಗಡೆಯಾದ ಪಕ್ಷ ಸೇರ್ಪಡೆಯಾಗುವವರ ಪಟ್ಟಿಯಲ್ಲಿ ರೋಷನ್ ಬೇಗ್ ಹೆಸರು ಕೈ ಬಿಡಲಾಗಿತ್ತು. ಈ ವಿಚಾರವಾಗಿ ನಿನ್ನೆ ತಡರಾತ್ರಿಯೇ ರೋಷನ್ ಬೇಗ್, ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಅಲ್ಲದೇ, ಒಂದು ವೇಳೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ ಬಿಜೆಪಿ ಬೆಂಬಲ ಸಿಗಬಹುದೇ ಎಂಬುದರ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ್ದರಿಂದ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ರೋಷನ್ ಬೇಗ್ ಮುಂದಾಗಿದ್ದಾರೆ. ಗುರುವಾರ ಸಂಜೆ ತಮ್ಮ ಕ್ಷೇತ್ರದ ಪ್ರಮುಖ ನಾಯಕರು ಹಾಗೂ ಆಪ್ತರು, ಬೆಂಬಲಿಗರ ಜೊತೆ ಸಭೆ ನಡೆಸಿದ ಅವರು, ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಐಎಂಎ ಹಗರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿದ್ದು, ಇನ್ನು ವಿಚಾರಣೆ ಹಂತದಲ್ಲಿದೆ. ಅಲ್ಲದೇ, ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ರೋಷನ್ ಬೇಗ್ ಕೈವಾಡವಿರುವುದಾಗಿ ಆಗ ಸ್ವತಃ ಬಿಜೆಪಿ ನಾಯಕರೇ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಇದೀಗ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಲ್ಲಿ ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಕೆಲವು ಹಿರಿಯ ನಾಯಕರು ನೀಡಿದ ಸಲಹೆ ಹಿನ್ನೆಲೆಯಲ್ಲಿ ರೋಷನ್ ಬೇಗ್ ಹೆಸರು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಹೈಕಮಾಂಡ್ ಪಕ್ಷ ಸೇರ್ಪಡೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಕೈ ಜೋಡಿಸಲು ರೋಷನ್ ಬೇಗ್ ಯತ್ನಿಸಿದ್ದರು. ಆದರೆ, ಅದಾಗಲೇ ಜೆಡಿಎಸ್ ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿತ್ತು. ಇದೀಗ, ಕಾಂಗ್ರೆಸ್ ಪಕ್ಷಕ್ಕೂ ಹೋಗಲಾರದೇ, ಬಿಜೆಪಿಗೂ ಸೇರ್ಪಡೆಯಾಗಲಾರದೇ, ಒಂದು ರೀತಿಯಲ್ಲಿ ತ್ರಿಶಂಕು ಪರಿಸ್ಥಿತಿಯಲ್ಲಿ ರೋಷನ್ ಬೇಗ್ ಸಿಲುಕಿಕೊಂಡಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ರೋಷನ್ ಬೇಗ್‌ನ ರಾಜಕೀಯ ಎದುರಾಳಿಗಳಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಿರ್ಮಲ್ ಕುಮಾರ್ ಸುರಾನ, ಮಾಜಿ ಪಾಲಿಕೆ ಸದಸ್ಯ ಸರವಣ ತೀವ್ರ ಪ್ರಯತ್ನ ನಡೆಸಿದ್ದರು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ತಾವು ಎದುರಿಸುತ್ತಿರುವ ಭೂ ಹಗರಣದ ಆರೋಪಗಳೇ ಮುಳುವಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಬಳಿಕ ಅತೀ ಹೆಚ್ಚು ತಮಿಳು ಭಾಷಿಕರಿರುವ ಕಾರಣದಿಂದಾಗಿ ಬಿಜೆಪಿ ಸರವಣಗೆ ಮಣೆ ಹಾಕಿದೆ.

ಟಿಕೆಟ್ ಕೈ ತಪ್ಪಲು ನಾನು ಕಾರಣವಲ್ಲ: ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಟಿಕೆಟ್ ಸಿಗದಿದ್ದರೆ ಬಂಡಾಯವೇಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ರೋಷನ್ ಬೇಗ್ ಹಾಗೂ ನನಗೆ ವೈಯಕ್ತಿಕ ದ್ವೇಷವಿಲ್ಲ. ನಾವು ಕೇವಲ ರಾಜಕೀಯವಾಗಿ ಎದುರಾಳಿಗಳಷ್ಟೇ. ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ನಾನು ಕಾರಣವಲ್ಲ ಎಂದು ಕಟ್ಟಾಸುಬ್ರಹ್ಮಣ್ಯ ನಾಯ್ಡು ಸ್ಪಷ್ಟಣೆ ನೀಡಿದರು.

Please follow and like us:
error