ನೋಟಿಸ್ ಕೊಟ್ಟಿದ್ದರಲ್ಲಿ ಯಾವುದೇ ಅರ್ಥವಿಲ್ಲ, ಯಾವುದೇ ಒಂದು ನೋಟಿಸ್‌ಗೆ ನಾನು ಹೆದರುವುದಿಲ್ಲ-ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರ, : ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ನನಗೆ ಶೋಕಾಸ್ ನೋಟಿಸ್ ಬಂದಿಲ್ಲ. ಬಂದರೆ ಅದಕ್ಕೆ ಏನು ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಶುಕ್ರವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಹೈಕಮಾಂಡ್ ಬಳಿ ನನ್ನ ಬಗ್ಗೆ ತಪ್ಪಾಗಿ ಹೇಳಿರುತ್ತಾರೆ. ಹೀಗಾಗಿ, ನೋಟಿಸ್ ನೀಡಿರಬೇಕು. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸದಿದ್ದರೆ ಸಂಸದ, ಶಾಸಕ, ಸಚಿವರಾಗಿದ್ದರೂ ಏನು ಪ್ರಯೋಜನ. ಸಂತ್ರಸ್ತರ ಪರ ಮಾತನಾಡಿದ್ದು ಪಕ್ಷ-ಸರಕಾರದ ವಿರುದ್ಧ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು. ನಾನೇನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮತ ಹಾಕಿಲ್ಲ. ನಿನಗೆ ಟಿಕೆಟ್ ಕೊಡುತ್ತೇವೆ, ಕ್ಷೇತ್ರದ ಅಭಿವೃದ್ದಿಗೆ 150 ಕೋಟಿ ಅನುದಾನ ಕೊಡುತ್ತೇವೆ. ಡಿ.ಎಚ್.ಶಂಕರಮೂರ್ತಿ ವಿರುದ್ಧ ಮತ ಹಾಕಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರೂ ನಾನು ಮತ ಹಾಕಿಲ್ಲ. ಹೀಗಿರುವಾಗ ನಾನು ಪಕ್ಷ ವಿರೋಧಿ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ ಎಂದು ಗರಂ ಆದರು.

ನೋಟಿಸ್ ಕೊಟ್ಟಿದ್ದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ಒಂದು ನೋಟಿಸ್‌ಗೆ ನಾನು ಹೆದರುವುದಿಲ್ಲ. ನೋಟಿಸ್ ಕೊಟ್ಟು ಒಬ್ಬ ವ್ಯಕ್ತಿಯನ್ನು ನಾಶ ಮಾಡಿದರೆ ಏನೂ ಆಗುವುದಿಲ್ಲ. ರಾಜ್ಯ ಪ್ರವಾಹ ಸಂತ್ರಸ್ತರಿಗೆ 5 ಸಾವಿರ ಕೋಟಿ ಕೊಡಿ ಎಂದು ಈಗಲೂ ಪ್ರಧಾನಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಸಂಸದರು ಎಂದರೆ ಸೇವಕರೆ, ಅವರೇನು ಹೆಚ್ಚಿನವರಲ್ಲ. ಜನರಿಗಾಗಿ ಕೇಂದ್ರದಲ್ಲಿ ಕಾಲು ಹಿಡಿದು ಪರಿಹಾರ ತರಬೇಕು. ನಾನು ಜನರ ಸಲುವಾಗಿ ಮಾತನಾಡಿದ್ದೇನೆ. ನನ್ನನ್ನು ಮಂತ್ರಿ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿಲ್ಲ. ಜನರ ಹಿತದೃಷ್ಟಿಯಿಂದ ಮಾತನಾಡಿದ್ದಕ್ಕೆ ಏನು ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ. ಬಿ.ಎಲ್.ಸಂತೋಷ್ ಅಥವಾ ರಾಜ್ಯ ಘಟಕದ ಅಧ್ಯಕ್ಷರ ಹೆಸರನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ನೀವು ಹೆಗಲು ಮುಟ್ಟಿಕೊಂಡು ನೋಡಿದರೆ ನಾನೇನು ಮಾಡಲಿ ಎಂದರು

Please follow and like us:
error