ನೆಲಮಂಗಲದಲ್ಲಿ ತಲೆಯೆತ್ತಿದ ರಾಜ್ಯದ ಪ್ರಥಮ ದಿಗ್ಬಂಧನ ಕೇಂದ್ರ

ಇತ್ತೀಚೆಗಷ್ಟೇ ‘ ದೇಶದಲ್ಲಿ ದಿಗ್ಬಂಧನ ಕೇಂದ್ರಗಳಿಲ್ಲ’ ಎಂದಿದ್ದ ಪ್ರಧಾನಿ

ಬೆಂಗಳೂರು: ‘ದೇಶದಲ್ಲಿ ದಿಗ್ಬಂಧನ ಕೇಂದ್ರಗಳಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ದಿಲ್ಲಿಯಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಹೇಳಿದ್ದಕ್ಕೆ ತದ್ವಿರುದ್ಧವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ನೆಲಮಂಗಲದಲ್ಲಿ ಅಕ್ರಮ ವಲಸಿಗರಿಗಾಗಿ ದಿಗ್ಬಂಧನ ಕೇಂದ್ರ ತಲೆಯೆತ್ತಿದೆ.

ಈ ಕೇಂದ್ರ ಅಕ್ರಮ ವಲಸಿಗರನ್ನಿರಿಸಲು ಸಿದ್ಧವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಆರ್. ಎಸ್. ಪೆದ್ದಪ್ಪಯ್ಯ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದನ್ನು ರಾಜ್ಯ ಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರೂ ದೃಢಪಡಿಸಿದ್ದಾರೆ.

ಈ ಕೇಂದ್ರವನ್ನು ಜನವರಿಯಲ್ಲಿ ತೆರೆಯಲು ರಾಜ್ಯ ಸರಕಾರ ಉದ್ದೇಶಿಸಿದ್ದರೂ ಕೇಂದ್ರ ಸರಕಾರದ ಸೂಚನೆಯಂತೆ ಪ್ರಕ್ರಿಯೆ ಮುಂದೂಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲನ್ನು ದಿಗ್ಬಂಧನ ಕೇಂದ್ರವಾಗಿ ಸರಕಾರ ಪರಿವರ್ತಿಸಿದ್ದು, ಇಲ್ಲಿ ಆರು ಕೊಠಡಿಗಳು, ಒಂದು ಅಡುಗೆಮನೆ, ಒಂದು ಭದ್ರತಾ ಕೊಠಡಿಯಿದ್ದು ಒಟ್ಟು 24 ಜನರು ಇಲ್ಲಿರಬಹುದಾಗಿದೆ. ಎರಡು ವೀಕ್ಷಣಾ ಗೋಪುರಗಳನ್ನೂ ನಿರ್ಮಿಸಲಾಗಿದ್ದು ಆವರಣ ಗೋಡೆ ಸುತ್ತ ಬೇಲಿಯಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಿಗ್ಬಂಧನ ಕೇಂದ್ರಗಳಿಗಾಗಿ 35 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟಿಗೆ ನವೆಂಬರ್ ತಿಂಗಳಿನಲ್ಲಿ ತಿಳಿಸಿತ್ತು. ಬಾಂಗ್ಲಾದೇಶದ ಇಬ್ಬರು ಅಕ್ರಮ ವಲಸಿಗರ ಜಾಮೀನು ಅರ್ಜಿ ವಿಚಾರಣೆ ಸಂದರ್ಭ ಈ ಮಾಹಿತಿ ನೀಡಲಾಗಿತ್ತು.

 

Please follow and like us:
error