fbpx

ನಿಷೇಧಾಜ್ಞೆ ಲೆಕ್ಕಿಸದೇ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ

ಬೆಂಗಳೂರು, ಡಿ.19: ಮೂರು ದಿನಗಳ ನಿಷೇಧಾಜ್ಞೆ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾವಿರಾರು ಮಂದಿ ಸ್ವಯಂಪ್ರೇರಿತವಾಗಿಯೇ ಹೋರಾಟದಲ್ಲಿ ಧುಮುಕಿದ್ದು, ನಗರದ ಬಹುತೇಕ ಕಡೆಗಳ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿ ಮುಂದುವರಿದಿದೆ.

ಗುರುವಾರ ನಗರದ ಪುರಭವನ ಮುಂಭಾಗ ಹಾಗೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಸಿಐಟಿಯು, ಸಿಪಿಎಂ, ಪ್ರಗತಿಪರ ಸಂಘಟನೆಗಳ ಸದಸ್ಯರು, ಚಿಂತಕರು, ಸಾಹಿತಿಗಳು ಹಾಗೂ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆಯಲಾಯಿತು.

ಆದರೆ, ಇಲ್ಲಿನ ಎಸ್‌ಜೆಪಿ ರಸ್ತೆ, ಶಿವಾಜಿನಗರ ವೃತ್ತ ಸೇರಿದಂತೆ ಬಹುತೇಕ ಕಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಣಾಮ, ನಗರದೆಲ್ಲೆಡೆ ಸಂಚಾರ ದಟ್ಟಣೆ ಬಿಸಿ ತಟ್ಟಿತು.

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಸಾಂವಿಧಾನಿಕ. ದೇಶದ ಅಭದ್ರತೆ ಮತ್ತು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ. ದೇಶವಾಸಿಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ, ಕೋಮು ಸೌಹಾರ್ದ ನಾಶ ಮಾಡುವ, ಕೋಮು ವಿಷ ಬೀಜ ಬಿತ್ತುವ ಹಾಗೂ ಮಾನವೀಯತೆಗೆ ವಿರುದ್ಧವಾಗಿವೆ. ಹಾಗಾಗಿ ಕೂಡಲೇ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮಸೂದೆ ಮಂಡನೆ ಮಾಡುವ ಸಂದರ್ಭದಲ್ಲಿ ಭಾರತದಲ್ಲಿನ ಮುಸ್ಲಿಂ ಸಮುದಾಯದವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದಿತ್ತು. ಆದರೆ, ಆ ರೀತಿ ಮಾಡದೆ ದೇಶದ್ಯಾಂತ ವಿನಾಕಾರಣ ಗೊಂದಲಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶವನ್ನು ಧರ್ಮ-ಜಾತಿಯ ಆಧಾರದಲ್ಲಿ ಒಡೆದು ಆಳುವ ನೀತಿಯನ್ನು ತಮ್ಮದಾಗಿಸಿಕೊಂಡು ರಾಜಕೀಯದ ಮೂಲಕ ಅಧಿಕಾರದಲ್ಲಿರುವ ಬಿಜೆಪಿ ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿಗಳನ್ನು ಜನರ ಮನಸ್ಸಿನಿಂದ ಬೇರೆಡೆಗೆ ಸೆಳೆಯಲು ಅನೇಕ ಭಾವನಾತ್ಮಕ ವಿಷಯಗಳನ್ನು ಬಳಕೆ ಮಾಡುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ದೂರಿದರು.


ಇತಿಹಾಸಕಾರ ಗುಹಾ ಬಂಧನ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಟೌನ್‌ಹಾಲ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಇತಿಹಾಸಕಾರ ರಾಮಚಂದ್ರ ಗುಹಾ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಕೆಲ ಪೊಲೀಸ್ ಸಿಬ್ಬಂದಿ, ಬಳಿಕ ಎಳೆದೊಯ್ದು ಪೊಲೀಸ್ ವಾಹನಕ್ಕೆ ಹತ್ತಿಸಿದ ಪ್ರಸಂಗ ಜರುಗಿತು.

ಈ ವೇಳೆ ಹೋರಾಟಗಾರರಾದ ಜಿ.ಎನ್.ನಾಗರಾಜ್, ವಿ.ಎಸ್.ವಿಮಲಾ, ಜ್ಯೋತಿ ಅನಂತ್ ಸುಬ್ಬರಾವ್, ಎಸ್.ವರಲಕ್ಷ್ಮೀ ಸೇರಿದಂತೆ ಬಹುತೇಕರನ್ನು ವಶಕ್ಕೆ ಪಡೆಯಲಾಯಿತು.


ವಾಟಾಳ್ ವಶಕ್ಕೆ
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಏಕಾಏಕಿ ಇಲ್ಲಿನ ಸದಾಶಿವ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದರು. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ವಿರೋಧಿಸಿ ವಾಟಾಳ್ ಅವರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಆಧಾರದ ಮೇಲೆ ವಶಕ್ಕೆ ಪಡೆದ ಪೊಲೀಸರು, ನಿಷೇಧಾಜ್ಞೆ ಹಿನ್ನೆಲೆ ಪುರಭವನ ಹಾಗೂ ಪ್ರತಿಭಟನಾಕಾರರೊಂದಿಗೆ ಜೊತೆಗೂಡದಂತೆ ಸೂಚಿಸಿದರು ಎನ್ನಲಾಗಿದೆ.


ಸಂಚಾರ ದಟ್ಟಣೆ..!
ಇಲ್ಲಿನ ಪುರಭವನ ವೃತ್ತ, ಜೆಸಿ ರಸ್ತೆ, ನೃಪತುಂಗ ರಸ್ತೆ, ಬನ್ನಪ್ಪ ಪಾರ್ಕ್, ಕೆಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿಯೇ ಸಂಚಾರ ದಟ್ಟಣೆ ಹೆಚ್ಚಾಗಿತ್ತು.ಹಲವು ಕಡೆ ಗಂಟೆ ಗಟ್ಟಲೆ ವಾಹನ ಸವಾರರು ರಸ್ತೆಯಲ್ಲೇ ಕಾಲ ಕಳೆದ ದೃಶ್ಯ ಕಂಡಿತು.

Please follow and like us:
error
error: Content is protected !!