ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಕೋ ಚೆನ್ನಬಸಪ್ಪ ಇನ್ನಿಲ್ಲ

ಬೆಂಗಳೂರು, ಫೆ.23: ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ನಾಡು ಗುರುತಿಸುವ  ಕೋ. ಚೆನ್ನಬಸಪ್ಪನವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. 

ನ್ಯಾಯವಾದಿಯಾಗಿ ವೃತ್ತಿಜೀವನ ಪ್ರಾರಂಭಿಸಿ ನ್ಯಾಯಾಧೀಶರಾಗಿ ನಿವೃತ್ತರಾದ ಕೋಚೆ ಎಂದೇ ಖ್ಯಾತರಾದ ಕೋಟೆ ಚೆನ್ನಬಸಪ್ಪ ಅವರು ಕನ್ನಡದ ಮಹತ್ವದ ಸಾಹಿತಿ, ಲೇಖಕ ಹಾಗೂ ಚಿಂತಕರಲ್ಲಿ ಒಬ್ಬರು.

ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರರಾಗಿದ್ದ ಕೋಚೆ ಅವರು ಎಂಯತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮುಂತಾದ ಕವನ ಸಂಕಲನಗಳು; ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ  ಕಥಾ ಸಂಕಲನಗಳು; ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ  ಕಾದಂಬರಿಗಳು; ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ  ಜೀವನಚರಿತ್ರೆಗಳು; ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು;  ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಮುಂತಾದ ಸಂಪಾದಿತ ಕೃತಿಗಳು ಪ್ರಮುಖವಾಗಿವೆ.

ಚೆನ್ನಬಸಪ್ಪನವರ ’ದಾಸರಯ್ಯನ ಪಟ್ಟಿ’, ’ಹಿಂದಿರುಗಿ ಬರಲಿಲ್ಲ’, ’ಬೇಡಿಕಳಚಿತು ದೇಶ ಒಡೆಯಿತು’, ’ನ್ಯಾಯಾಧೀಶನ ನೆನಪುಗಳು’ ಮುಂತಾದ ಕೃತಿಗಳು ಸಾಮಾನ್ಯರಿಂದ ವಿದ್ವಾಂಸರೆಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಮೂಲತಃ ಬಳ್ಳಾರಿಯವರಾದ ಕೋ ಚೆನ್ನಬಸಪ್ಪನವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.   ಬಿಜಾಪುರದಲ್ಲಿ ಜರುಗಿದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವವನ್ನು ನೀಡುವುದರ ಮೂಲಕ ನಾಡು ಈ ಹಿರಿಯರನ್ನು ಗೌರವಿಸಿದೆ.

Please follow and like us:
error