ನಿರ್ಲಕ್ಷ್ಯಕ್ಕೊಳಗಾಗಿ ಸಮಾಜದ ಕಣ್ಣು ತೆರೆಯಿಸಿದ ದಲಿತ ವಚನಕಾರರು : ಮಹಾಂತೇಶ ಮಲ್ಲನಗೌಡರ


ಕೊಪ್ಪಳ ಮಾ.  : ಪರಂಪರೆಯಿಂದ ನಿರ್ಲಕ್ಷ್ಯಕ್ಕೊಳಗಾಗಿ ಸಮಾಜದ ಕಣ್ಣು ತೆರೆಯಿಸಿದ ಮಹನಿಯರು ದಲಿತ ವಚನಕಾರರು ಎಂದು ಕೊಪ್ಪಳದ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ದಲಿತ ವಚನಕಾರರ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ದಲಿತ ವಚನಕಾರರ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ, ಇವರುಗಳು ಪರಂಪರೆಯಿಂದ ನಿರ್ಲಕ್ಷ್ಯಕ್ಕೊಳಗಾಗಿ ಸಮಾಜದ ಕಣ್ಣು ತೆರೆಯಿಸಿದ್ದಾರೆ. ಅಲ್ಲದೇ ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಿ, ಸತ್ಯ ಶುದ್ಧ ಕಾಯಕದಿಂದ ಬದುಕನ್ನು ನಡೆಸುವ ಆದರ್ಶಗಳನ್ನು ಮುಂದಿಟ್ಟ ಮಹಾಪುರುಷರುಗಳಾಗಿದ್ದಾರೆ. ಇವರುಗಳು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರವಾಗಿವೆ. ಸಮಾಜದ ಅಸಮಾನತೆ, ಜಾತೀಯತೆಯನ್ನು ತಮ್ಮ ವಚನಗಳ ಮೂಲಕ ನಿರ್ಮೂಲನೆ ಮಾಡಲು ಶ್ರಮಿಸಿದವರಾಗಿದ್ದಾರೆ. ವಚನಗಳು ಬದುಕಿನ ಶ್ರೇಷ್ಠ ಮಾನವೀಯ ಮೌಲ್ಯಗಳು ಹಾಗೂ ಸಹೋದರತೆ, ಸಮಾನತೆ ಸಾರುವ ಮೂಲಕ ೧೨ನೇ ಶತಮಾನದಲ್ಲಿ ಅನೇಕ ಮಹನಿಯರು ಶಿವ ಶರಣರು ಕಲ್ಯಾಣ ಕ್ರಾಂತಿಯನ್ನೆ ಉಂಟು ಮಾಡಿದ್ದಾರೆ. ಯಾರಿಗೆ ವೇದದ ಅಧ್ಯಯನವನ್ನು ತಿರಸ್ಕರಿಸಲಾಗಿತ್ತು, ಸಮಾಜದಿಂದ ಅವರಿಗೆ ಅಸಮಾನತೆಯಿಂದ ನೋಡಲಾಗುತ್ತಿತ್ತು. ಅಂತಹ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ ಬಸವೇಶ್ವರರ ನೇತೃತ್ವದ ಶರಣ ಪಡೆ. ಬಸವಣ್ಣನವರ ಅನುಭವ ಮಂಟಪದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಧೂಳಯ್ಯ, ಸೂಳೆ ಸಂಕವ್ವೆ, ಆಯ್ದಕ್ಕಿ ಮಾರಯ್ಯಗೆ ಸ್ಥಾನ ನೀಡುವ ಮೂಲಕ ವಚನ ಸಾಹಿತ್ಯ ರಚನೆ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಬಸವಣ್ಣನವರಂತೂ ಮಾದಾರ ಚನ್ನಯ್ಯನವರನ್ನು ಅತ್ಯಂತ ಎತ್ತರ ಸ್ಥಾನದಲ್ಲಿ ಇರಿಸಿದ್ದರು. ಅಲ್ಲದೇ ಉರಿಲಿಂಗಪೆದ್ದಿ ಅವರು ೧೨ನೇ ಶತಮಾನದಲ್ಲಿಯೇ ಪಿಠಾಧೀಶರಾಗಿದ್ದರು. ಉರಿಲಿಂಗಪೆದ್ದಿರವರ ೩೬೬ ವಚನಗಳು, ಡೋಹರ ಕಕ್ಕಯ್ಯನವರ ೦೬ ವಚನಗಳು, ಮಾದಾರ ಧೂಳಯ್ಯನವರ ೧೦೬ ವಚನಗಳು ಲಭ್ಯ ಇವೆ. ಸಮಗಾರ ಹರಳಯ್ಯ ನವರ ವಚನಗಳು ಲಭ್ಯವಿಲ್ಲ. ಆದರೂ ಸಹ ವಚನ ಕಾಂತ್ರಿಯನ್ನುಂಟು ಮಾಡಿದ್ದಾರೆ ಎಂದು ತಿಳಿಯುತ್ತದೆ. ಇಂತಹ ಮಹನಿಯರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳದ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ ಅವರು ಹೇಳಿದರು.
ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯಾರನ್ನು ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನಿಯರಾಗಿದ್ದಾರೆ. ವಚನಗಳು ಹಾಗೂ ಬೋಧನೆಗಳನ್ನು ಸ್ಮರಿಸಲು ಹಾಗೂ ಜನರಲ್ಲಿ ತಿಳಿಸಲು ಇಂತಹ ಮಹನಿಯರ ಜಂಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ವಚನಕಾರರ ಕಾಯಕ ನಿಷ್ಠೆ ನೆನೆದುಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಮಂಜುನಾಥ ಗೊಂಡಬಾಳ ಅವರು ಮಾತನಾಡಿ, ಶರಣರು ಹೇಳಿದ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಜಾತಿ, ಧರ್ಮ, ಭೇಧ-ಭಾವ ಮಾಡದೇ ಎಲ್ಲರೊಂದಿಗೆ ಸೇರಿ ಮನುಷ್ಯರಾಗಿ ನಾವುಗಳು ಬಾಳಬೇಕಾಗಿದೆ. ಈ ಉದ್ದೇಶದಿಂದಲೇ ಸರ್ಕಾರವು ಜಯಂತಿಯನ್ನು ಆಚರಿಸುತ್ತದೆ. ದಲಿತ ವಚನಕಾರರ ಬಗ್ಗೆ ಜನ ಸಾಮಾನ್ಯರೆಲ್ಲರಿಗೂ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾದ್ದು, ದಲಿತ ವಚನಕಾರರ ಜಯಂತಿಯನ್ನು ಜನವಾಸಿ ಪ್ರದೇಶದಲ್ಲಿ ಅಥವಾ ಮುಖ್ಯವಾಗಿ ದಲಿತರು ವಾಸಿಸುವಂತಹ ಪ್ರದೇಶಗಳಲ್ಲಿಯೇ ಆಚರಿಸುವಂತಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಅವರು ವಹಿಸಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ದಲಿತ ವಚನಕಾರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಆರ್.ಜಿ. ನಾಡಗೀರ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪರಮೇಶ್ವರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಜಿಲ್ಲಾಧಿಕಾರಿ ಕಾರ್ಯಾಲಯದ ಮಹಾವೀರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಿ.ವಿ. ಜಡಿಯವರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Please follow and like us:
error