ನಿರ್ಭಯಾ ಹಂತಕರಿಗೆ ಗಲ್ಲು- ವಿಳಂಬವಾದರೂ ನ್ಯಾಯ ಸಿಕ್ಕಿದೆ- ನಿರ್ಭಯಾ ತಾಯಿ

ಹೊಸದಿಲ್ಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ಮುಂಜಾನೆ 5.30ಕ್ಕೆ ಸರಿಯಾಗಿ ನೇಣುಗಂಬಕ್ಕೇರಿಸಲಾಯಿತು. ತಿಹಾರ್ ಜೈಲಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ಮಂದಿಯನ್ನು ಏಕಕಾಲಕ್ಕೆ ನೇಣುಗಂಬಕ್ಕೇರಿಸಲಾಯಿತು.

ಈ ಕ್ಷಣದಲ್ಲಿ ಭಾವುಕರಾದ ನಿರ್ಭಯಾ ತಾಯಿ ಆಶಾದೇವಿ, ಜೆಸ್ಟಿಸ್ ಡಿಲೇಡ್, ಬಟ್ ನಾಟ್ ಡಿನೈಡ್ (ನ್ಯಾಯ ವಿಳಂಬವಾಗಿದೆ; ಆದರೆ ನಿರಾಕರಿಸಿಲ್ಲ) ಎಂದು ಉದ್ಗರಿಸಿದರು.

ಆರೋಪಿಗಳು ಕೊನೆಯ ಪ್ರಯತ್ನವಾಗಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಮತ್ತು ರಾಷ್ಟ್ರಪತಿಗಳ ಬಳಿ ಸಲ್ಲಿಸಲಾಗಿದ್ದ ಎರಡನೇ ಕ್ಷಮಾದಾನ ಅರ್ಜಿ ಮಧ್ಯರಾತ್ರಿ ವೇಳೆಗೆ ತಿರಸ್ಕೃತವಾದ ಹಿನ್ನೆಲೆಯಲ್ಲಿ ಪೂರ್ವಯೋಜನೆಯಂತೆ ಅಕ್ಷಯ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್‌ಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಯಿತು.

ದೇಶದ ಪುತ್ರಿಯರಿಗೆ ನ್ಯಾಯ ಸಿಕ್ಕಿದೆ. ಕಳೆದ ಏಳು ವರ್ಷಗಳಿಂದ ನಮ್ಮೊಂದಿಗೆ ಇದ್ದ ಇಡೀ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಬೆಳಿಗ್ಗೆ ಉದಯಿಸುವ ಸೂರ್ಯ ಹೊಸ ಇತಿಹಾಸ ಬರೆದಿದ್ದಾನೆ. ನಿರ್ಭಯಾಗೆ ಇಂದು ನ್ಯಾಯ ಒದಗಿಸಿದ್ದಕ್ಕಾಗಿ ನ್ಯಾಯಾಂಗ ವ್ಯವಸ್ಥೆಗೆ ಕೃತಜ್ಞತೆ. ವಿಳಂಬ ತಂತ್ರವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರಪತಿಗಳಿಗೆ ವಿಶೇಷ ಕೃತಜ್ಞತೆಗಳು. ನಮ್ಮ ಇಬ್ಬರು ವಕೀಲರಿಗೂ ಕೃತಜ್ಞತೆ ಸಲ್ಲಬೇಕು ಎಂದು ನಿರ್ಭಯಾ ತಾಯಿ ಆಶಾದೇವಿ ಭಾವುಕರಾಗಿ ನುಡಿದರು.

2012ರ ಡಿಸೆಂಬರ್ 16ರ ಕರಾಳ ರಾತ್ರಿ ನಡೆದ ಪೈಶಾಚಿಕ ಘಟನೆಯ ಆರೋಪಿಗಳನ್ನು ಮುಂಜಾನೆ ನೇಣುಗಂಬಕ್ಕೆ ಏರಿಸುವ ಹಿನ್ನೆಲೆಯಲ್ಲಿ ತಿಹಾರ್ ಜೈಲಿನ ಸುತ್ತ ಬಿಗಿ ಭದ್ರತೆ ಆಯೋಜಿಸಲಾಗಿತ್ತು.

Please follow and like us:
error