ನಿತೀಶ್ ಕುಮಾರ್ ಕೊನೆಗೂ ದಡ ಸೇರಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಂಡದ್ದು ಹೇಗೆ?

#ಬಿಹಾರಚುನಾವಣೆ-2

ಹದಿನೈದು ವರ್ಷಗಳ ಆಡಳಿತದ ವಿರುದ್ದದ ಅಲೆ, ಕೊರೊನಾ ಸೋಂಕಿನ ನಿರ್ವಹಣೆಯಲ್ಲಿನ ವೈಫಲ್ಯ, ಮಿತ್ರಪಕ್ಷಗಳಿಂದಲೇ ಬೆನ್ನಿಗಿರಿತ, ಯುವನಾಯಕನ ರಣೋತ್ಸಾಹದ ಮುಂದೆ ವಯಸ್ಸಿನಿಂದಾಗಿ ಬಾಗಿದ ದೇಹದ ಬಳಲಿಕೆ- ಇವೆಲ್ಲದರ ಹೊರತಾಗಿಯೂ ನಿತೀಶ್ ಕುಮಾರ್ ಕೊನೆಗೂ ದಡ ಸೇರಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಂಡದ್ದು ಹೇಗೆ?

ಲಾಲು ಪ್ರಸಾದ್ ಅವರ ಆರ್ ಜೆಡಿಯ 15 ರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದಾಗ, ನಿತೀಶ್ ಕುಮಾರ್ ಮುಂದೆ ಬಿಹಾರದಲ್ಲಿ ಪರ್ಯಾಯ ರಾಜಕಾರಣವನ್ನು ಕಟ್ಟುವ ದೊಡ್ಡ ಸವಾಲಿತ್ತು. ಆ ಚುನಾವಣೆಯಲ್ಲಿ ಲಾಲುಪ್ರಸಾದ್ ಬಹಳ ಜಾಣ್ಮೆಯಿಂದ ಕಟ್ಟಿಕೊಂಡಿದ್ದ ‘ಎಂ-ವೈ’ ಮತಬ್ಯಾಂಕ್ನಲ್ಲಿ ಬಿರುಕು ಕಾಣಿಸಿದ್ದರೂ ಅದೇನು ಶಾಶ್ವತವಾದುದಲ್ಲ ಎನ್ನುವುದು ನಿತೀಶ್ ಕುಮಾರ್ ಅವರಿಗೂ ಗೊತ್ತಿತ್ತು. ಇದಕ್ಕಾಗಿ ಅವರು ತನಗಾಗಿ ಪರ್ಯಾಯವಾದ ಮತಬ್ಯಾಂಕ್ ನ ಹುಡುಕಾಟದಲ್ಲಿದ್ದರು.

ಆಗ ಅವರಿಗೆ ಕಾಣಿಸಿದ್ದು ಎರಡು ದಾರಿಗಳು. ಮೊದಲನೆಯದ್ದು ಹಿಂದುಳಿದ ಜಾತಿಗಳ ಗುಂಪಿನಲ್ಲಿ ಯಾದವರ ಯಜಮಾನಿಕೆಯಿಂದ ನಿರ್ಲಕ್ಷ್ಯಕ್ಕೀಡಾಗಿರುವ ಇತರ ಹಿಂದುಳಿದ ಜಾತಿಗಳಲ್ಲಿನ ಅಸುರಕ್ಷತೆ ಮತ್ತು ಅಸಮಾಧಾನ. ಇದಕ್ಕಾಗಿ ನಿತೀಶ್ ಏನು ಮಾಡಿದರೆಂಬುದನ್ನು ಮುಂದೆ ಚರ್ಚಿಸೋಣ.

ಇದರ ಜೊತೆಗೆ ಅವರಿಗೆ ಕಂಡ ಇನ್ನೊಂದು ದಾರಿ ಅವರನ್ನು ಮಹಿಳೆಯರ ಮನೆಬಾಗಿಲಿಗೆ ಕೊಂಡುಹೋಗಿ ನಿಲ್ಲಿಸಿತ್ತು. ಅಲ್ಲಿಂದ ಶುರುವಾಯಿತು ಅವರ ಮಹಿಳಾ ಮುನ್ನಡೆಯ ಯೋಜನೆಗಳ ಪರ್ವ. ಅಧಿಕಾರಕ್ಕೆ ಬಂದ ಮರುವರ್ಷದಲ್ಲಿಯೇ 2006ರಲ್ಲಿ ಪಂಚಾಯತ್ ಗಳಲ್ಲಿ ಶೇಕಡಾ 50ರಷ್ಟು ಮಹಿಳಾ ಮೀಸಲಾತಿಯನ್ನು ನಿತೀಶ್ ಜಾರಿಗೊಳಿಸಿದರು. ಕಳೆದ ಹದಿನೈದು ವರ್ಷಗಳಿಂದ ಬಿಹಾರದ ಪಂಚಾಯತ್ ಗಳಲ್ಲಿ ಸುಮಾರು 70,000 ಚುನಾಯಿತ ಮಹಿಳಾ ಸದಸ್ಯರಿದ್ದಾರೆ. ಮಹಿಳಾ ಮೀಸಲಾತಿ ಜಾರಿಗೊಳಿಸಿದಾಗ ಪ್ರಾರಂಭದ ಹಂತದಲ್ಲಿ ಕೇಳಿಬರುವ ‘ಪುರುಷರ ರಬ್ಬರ್ ಸ್ಟಾಂಪ್’ ಆರೋಪ ಆಗಲೂ ಕೇಳಿಬಂದಿತ್ತು. ಆದರೆ ಬಿಹಾರಿ ಮಹಿಳೆಯರ ಜೊತೆ ಮಾತನಾಡಿದರೆ ಅವರ ದಿಟ್ಟತನ, ಸಾಮಾನ್ಯ ಜ್ಞಾನದ ಅರಿವು ನಿಮಗಾಗಬಹುದು.

ಅವರು ಉತ್ತರಪ್ರದೇಶದ ಮಹಿಳೆಯರಂತಲ್ಲ. ಲಾಲುಪ್ರಸಾದ್ ಯಾದವ್ ಅವರ ಹದಿನೈದು ವರ್ಷಗಳ ಆಡಳಿತಾವಧಿಯಲ್ಲಿ ಮುಖ್ಯವಾಗಿ ಹಿಂದುಳಿದ,ದಲಿತ ಮತ್ತು ಮುಸ್ಲಿಮ್ ಸಮುದಾಯದಲ್ಲಿ ಹುಟ್ಟಿಕೊಂಡ ಆತ್ಮವಿಶ್ವಾಸ ಆ ಸಮುದಾಯದ ಮಹಿಳೆಯರನ್ನು ಜಾಗೃತರನ್ನಾಗಿಸಿತ್ತು. ಇದು ಕೇವಲ ‘ಅಹಿಂದ’ಕ್ಕೆ ಸೀಮಿತವಾದುದಲ್ಲ, ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ಜಾತಿ ಮಹಿಳೆಯರು ಇನ್ನೂ ಹೆಚ್ಚು ಶೋಷಿತರು ಮತ್ತು ಪೀಡಿತರು. ಇವರೆಲ್ಲರ ಪಾಲಿಗೆ ಮಹಿಳಾ ಮೀಸಲಾತಿ ಬಿಡುಗಡೆಯ ಸಣ್ಣ ಕಿಂಡಿಯಾಗಿತ್ತು.

ಇದರ ನಂತರ ನಿತೀಶ್ ಮಹತ್ವ ನೀಡಿದ್ದು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ. ವಿದ್ಯಾರ್ಥಿನಿಯರಿಗೆ ಬೈಸಿಕಲ್ ನೀಡುವ ಯೋಜನೆಯನ್ನು ಪ್ರಾರಂಭಿಸಿದ್ದೇ ನಿತೀಶ್ ಕುಮಾರ್. (ಅದನ್ನೇ ನಂತರ ಬಿ.ಎಸ್.ಯಡಿಯೂರಪ್ಪ ಕರ್ನಾಟಕದಲ್ಲಿ ಪ್ರಾರಂಭಿಸಿದ್ದರು) ವಿದ್ಯಾರ್ಥಿನಿಯರಿಗೆ ಉಚಿತ ಪುಸ್ತಕ, ಸಮವಸ್ತ್ರ ನೀಡುವ ಜೊತೆಗೆ ಹಲವಾರು ಬಗೆಯ ವಿದ್ಯಾರ್ಥಿವೇತನವನ್ನು ಕೂಡಾ ಜಾರಿಗೆ ತಂದಿದ್ದರು. ಸ್ವಸಹಾಯ ಗುಂಪಿನ ಮೂಲಕ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರ ಸ್ವೊದ್ಯೋಗಕ್ಕೆ ನೆರವಾಗುವ ಜೀವಿಕಾ ಯೋಜನೆ ಕೂಡಾ ನಿತೀಶ್ ಅವರ ಜನಪ್ರಿಯ ಕಾರ್ಯಕ್ರಮ.

2016ರಲ್ಲಿ ನಿತೀಶ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 35ರಷ್ಟು ಮೀಸಲಾತಿ ನೀಡಿದರು. ಹತ್ತು ವರ್ಷಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಿದ್ದ ಪ್ರೋತ್ಸಾಹದಿಂದಾಗಿ 2005ರಲ್ಲಿ ಹತ್ತನೇ ತರಗತಿಯಲ್ಲಿ 1.86 ಲಕ್ಷ ವಿದ್ಯಾರ್ಥಿನಿಯರು ಹತ್ತನೇ ತರಗತಿಯಲ್ಲಿ ಪಾಸಾಗಿದ್ದರೆ, 2019ರಲ್ಲಿ ಆ ಸಂಖ್ಯೆ 8.22 ಲಕ್ಷಕ್ಕೇರಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗದೆ ಇದ್ದರೂ ಲಭ್ಯಇರುವ ಸರ್ಕಾರಿ ಉದ್ಯೋಗದಲ್ಲಿ ಮಹಿಳಾಮೀಸಲಾತಿಯ ಲಾಭ ಪಡೆಯಲು ಹೆಣ್ಣುಮಕ್ಕಳು ತಯಾರಾಗಿದ್ದರು.

ಅದೇ ವರ್ಷ ನಿತೀಶ್ ರಾಜ್ಯದಲ್ಲಿ ಪಾನನಿಷೇಧ ಜಾರಿಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡರು. ಪ್ರಾರಂಭದ ದಿನಗಳಲ್ಲಿ ಇದಕ್ಕೆ ಕುಡುಕರಿಂದ ಮಾತ್ರವಲ್ಲ ಸಾರಾಯಿ ಮಾರಾಟ ಮಾಡುವ ವ್ಯಾಪಾರಿಗಳಿಂದಲೂ ಭಾರೀ ವಿರೋಧ ವ್ಯಕ್ತವಾಯಿತು. ಇದಕ್ಕಿಂತಲೂ ಮುಖ್ಯವಾಗಿ ಅಬಕಾರಿಯಿಂದ ಬರುತ್ತಿದ್ದ ವಾರ್ಷಿಕ ಆದಾಯ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿಯನ್ನು ಕಳೆದುಕೊಳ್ಳಬೇಕಾಯಿತು.
ಗುಜರಾತ್ ಸೇರಿದಂತೆ ಪಾನನಿಷೇಧ ಯಾವ ರಾಜ್ಯದಲ್ಲಿಯೂ ಯಶಸ್ವಿಯಾಗಿಲ್ಲ, ಬಿಹಾರ ಕೂಡಾ ಹೊರತಲ್ಲ.

ಸಾಮಾನ್ಯವಾಗಿ ಪುರುಷರ ಕುಡುಕತನಕ್ಕೆ ಅವರ ಆರೋಗ್ಯ ಮತ್ತು ದುಡ್ಡು ಮಾತ್ರವಲ್ಲ ಮನೆಯಲ್ಲಿರುವ ಹೆಂಡತಿ ಮಕ್ಕಳ ನೆಮ್ಮದಿಯೂ ಹಾಳಾಗಿಬಿಡುತ್ತದೆ. ಇದರಿಂದಾಗಿ ಜಾತಿ-ಧರ್ಮ ಮೀರಿ ಎಲ್ಲ ವರ್ಣ-ವರ್ಗಕ್ಕೆ ಸೇರಿರುವ ಮಹಿಳೆಯರು ಒಕ್ಕೊರಲಿನಿಂದ ಪಾನನಿಷೇಧವನ್ನು ಬೆಂಬಲಿಸುತ್ತಾರೆ.

ಬಿಹಾರದಲ್ಲಿ ಪಾನನಿಷೇಧ ನಿರೀಕ್ಷಿತ ಬದಲಾವಣೆಯನ್ನು ತರದೆ ಇದ್ದರೂ ಮಹಿಳೆಯರು ನಿತೀಶ್ ಕುಮಾರ್ ಅವರ ನಿರ್ಧಾರದ ಹಿಂದಿನ ಪ್ರಾಮಾಣಿಕತೆಯನ್ನು ಎಂದೂ ಅನುಮಾನಿಸಿರಲಿಲ್ಲ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ್ದ ನಿತೀಶ್ ಕುಮಾರ್ ಮಹಿಳಾ ಕಲ್ಯಾಣದ 35 ಯೋಜನೆಗಳಿಗೆ ಮೀಸಲಿಟ್ಟಿರುವ ಒಟ್ಟು ಅನುದಾನ 60,000 ಕೋಟಿ ರೂಪಾಯಿ.

ಪಂಚಾಯತ್ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲಾತಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ ಮತ್ತು ಪಾನನಿಷೇಧ- ಈ ಮೂರೂ ಕಾರ್ಯಕ್ರಮಗಳು ಬಿಹಾರದ ಮಹಿಳೆಯರ ಹೃದಯದಲ್ಲಿ ನಿತೀಶ್ ಕುಮಾರ್ ಅವರಿಗೆ ಶಾಶ್ವತ ಸ್ಥಾನ ಒದಗಿಸಿದೆಯೆನ್ನುವುದು ನಿಜ.ಕಳೆದ ಮೂರು ಚುನಾವಣೆಗಳಲ್ಲಿ ಪುರುಷರಿಗಿಂತಲೂ ಮಹಿಳಾ ಮತದಾರರು ಮತಚಲಾಯಿಸಿದ್ದರುವುದು ಕೂಡಾ ಇದಕ್ಕೆಸಾಕ್ಷಿ.
ಆಡಳಿತ ವಿರೋಧಿ ಅಲೆ, ಕೊರೊನಾ, ‘ಮಿತ್ರದ್ರೋಹ’ದ ಹೊರತಾಗಿಯೂ ನಿತೀಶ್ ಮುಳುಗದೆ ದಡಸೇರಿದ್ದರೆ ಆ ಶ್ರೇಯಸ್ಸು ಬಿಹಾರದ ಮತದಾರರಿಗೂ ಸಲ್ಲಬೇಕು..
(ಮುಂದುವರಿಯುವುದು)

Please follow and like us:
error