ನಿಡಶೇಸಿ ಕೆರೆಯ ಹೂಳು ಎತ್ತುವ ಕಾಮಗಾರಿ : ಕ್ರಮಕ್ಕೆ ಡಿಸಿ ಸೂಚನೆ

ನಿಡಶೇಸಿ ಕೆರೆಯ ಹೂಳು ಎತ್ತುವ ಕಾಮಗಾರಿ
ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸೂಚನೆ
ಕೊಪ್ಪಳ ಫೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆಯ ಹೂಳು ಎತ್ತುವ ಕಾಮಗಾರಿಯನ್ನು ಮತ್ತೋಮ್ಮೆ ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆಯ ಹೂಳು ಎತ್ತುವ ಕುರಿತು ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇತ್ತಿಚೇಗೆ (ಫೆ. 02 ರಂದು) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಡಶೇಸಿ ಕೆರೆಯಲ್ಲಿನ ಹೂಳನ್ನು ತೆಗೆಯುವುದಿಂದ ಕೆರೆಯಲ್ಲಿ ನೀರು ಸಂಗ್ರಹಣೆಯಾಗುತ್ತದೆ. ಈ ನೀರು ಸಂಗ್ರಹಣೆಯಿಂದ ಸುತ್ತಮುತ್ತಲಿನ ಕೊಳವೆಭಾವಿಗಳಲ್ಲಿ ಅಂತರ್ಜಲ ಮಟ್ಟ ಅಭಿವೃದ್ಧಿಯಾಗುತ್ತದೆ. ರೈತರು ಕೈಗೊಂಡಿರುವ ಕಾರ್ಯ ಸದುದ್ದೇಶದಿಂದ ಕೂಡಿದ್ದು, ಇಲ್ಲಿಯವರೆಗೆ ನರೇಗಾ ಯೋಜನೆಯಡಿ ಕೈಗೊಂಡ ಕಾರ್ಯದಲ್ಲಿ ಹೂಳೆತ್ತಿ ಯಾವ ಪ್ರದೇಶದಲ್ಲಿ ಸಂಗ್ರಹಣೆ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರು ಹೂಳೆತ್ತುವ ಕಾರ್ಯ ಕೈಗೊಳ್ಳುವ ವಿಸ್ತೀರ್ಣವನ್ನು ಅಳತೆ ಮಾಡಿ ಕೊಡಬೇಕು. ಈಗಾಗಲೇ ನರೆಗಾ ಯೋಜನೆಯಡಿ ಕೆರೆಯ ಹೂಳನ್ನು ಎಷ್ಟು ಆಳದವರೆಗೆ ತೆಗೆಯಲಾಗಿದೆ ಹಾಗೂ ಇನ್ನೂ ಎಷ್ಟು ಆಳದವರೆಗೆ ತೆಗೆಯಬೇಕು ಎಂಬುದರ ಕುರಿತು ಸಣ್ಣ ನೀರಾವರಿ ಇಲಾಖೆ ಹಾಗೂ ಹಿರಿಯ ಭೂ ವಿಜ್ಞಾನಿಗಳು, ಜಂಟಿಯಾಗಿ ಸ್ಥಳ ತನಿಖೆ ಕೈಗೊಂಡು ಚರ್ಚಿಸಿ ನಿರ್ಧಾರ ಕೈಗೊಂಡು ರೈತರಿಗೆ ತಿಳಿಸಬೇಕು. ನಿಡಶೇಸಿ ಕೆರೆಯ ವಿಸ್ತೀರ್ಣ ಹಾಗೂ ಈಗಾಗಲೇ ಈ ಕೆರಯಲ್ಲಿ ನರೆಗಾ ಯೋಜನೆಯಡಿ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು. ಹಿರಿಯ ಭೂ ವಿಜ್ಞಾನಿಗಳು, ಕುಷ್ಟಗಿ ತಹಶೀಲ್ದಾರು, ಸಣ್ಣ ನೀರಾವರಿ ಇಲಾಖೆಯವರು ಮತ್ತು ಆರಕ್ಷಕ ನಿರೀಕ್ಷಕರು ಈ ಹೂಳು ಎತ್ತುವ ಕಾರ್ಯವನ್ನು ಮತ್ತೋಮ್ಮೆ ಪರಿಶೀಲಿಸಿ, ನಿಯಮಾನುಸಾರ ಹೂಳು ತೆಗೆಯಲು ಸೂಕ್ತ ಕ್ರಮಗೈಗೊಳ್ಳಬೇಕು. ಹೂಳು ಎತ್ತುವ ಕಾರ್ಯದಲ್ಲಿ ಅವ್ಯವಹಾರ ನಡೆದರೆ ತಮ್ಮನ್ನೇ ನೇರ ಹೊಣೆಗಾರನ್ನಾಗಿಸುವುದು. ಈಗಾಗಲೇ ಕುಷ್ಟಗಿ ತಾಲೂಕಿನಲ್ಲಿ ಮರಳಿನ ಅಭಾವಿದ್ದು, ಹೂಳು ಎತ್ತುವಾಗ ಮರಳನ್ನು ಸಂಗ್ರಹಿಸಿ ವಿಲೇವಾರಿ ಕುರಿತು ಹಿರಿಯ ಭೂ ವಿಜ್ಞಾನಿಗಳು ತಕ್ಷಣ ಕ್ರಿಯಾ ಯೋಜನೆ ತಯಾರಿಸಿ, ಮರಳನ್ನು ವಿಲೇವಾರಿ ಮಾಡಲು ಸರ್ಕಾರದ ನಿರ್ದೇಶನ ಪಡೆಯಬೇಕು. ಕೆರೆಯಿಂದ ಯಾವುದೇ ವಸ್ತು ಹೊಗಬಾರದು. ಕಾರಣ ನರೇಗಾ ಯೋಜನೆಯಡಿ ಯಾವ ಪ್ರದೇಶದಲ್ಲಿ ಹೂಳು ತೆಗೆಯಬೇಕು. ರೈತರು ಯಾವ ಪ್ರದೇಶದಲ್ಲಿ ಹೂಳು ತೆಗೆಯಬೇಕು ಮತ್ತು ಮರಳು ಗಣಿಗಾರಿಕೆ ಯಾವ ಪ್ರದೇಶದಲ್ಲಿದೆ ಎಂಬುವುದರ ವಿಸ್ತೀರ್ಣೆಯನ್ನು ಗುರುತಿಸಿ, ನಕ್ಷೆಯೊಂದಿಗೆ ಮೂರು ದಿನಗಳೊಳಗಾಗಿ ಸಲ್ಲಿಸುವಂತೆ ಅಗತ್ಯ ಕ್ರಮ ಕೈಗೊಳ್ಳಿ. ಈ ಕೆರೆಯಲ್ಲಿ ನರೇಗಾ ಯೋಜನೆಯಡಿ ಹೂಳು ಎತ್ತಿದ ಮರಂ ಅನ್ನು ಒಂದು ಕಡೆ, ರೈತರು ಹೂಳು ಎತ್ತಿದ ಮರಂ ಹಾಗೂ ಮರಳನ್ನು ಒಂದು ಕಡೆ ಸಂಗ್ರಹ ಮಾಡಬೇಕು. ರೈತರಿಂದ ಹೂಳೆತ್ತುವ ಕಾರ್ಯ ನಾಲ್ಕು ದಿನದೊಳಗೆ ಪ್ರಾರಂಭಿಸುವಂತೆ ಹಾಗೂ ರೈತರು ಕೆರೆಯ ಹೂಳು ಎತ್ತುವ ಸಂದರ್ಭದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಮತ್ತು ಯಾವುದೇ ದೂರುಗಳು ಬರದಂತೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರು ಕೈಗೊಂಡಿರುವ ಕಾರ್ಯವು ಸ್ವಾಗತಾರ್ಹವಾಗಿದ್ದು, ನಿಡಶೇಸಿ ಕೆರೆಯಲ್ಲಿ ಹೂಳು ಎತ್ತುವುದರಿಂದ ನೀರು ಸಂಗ್ರಹಣೆಯಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು. ಇದರಿಂದ ಸುತ್ತಮುತ್ತಲಿನ ಕೊಳವೆಭಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಸಹ ಕಲ್ಪಿಸಲು ಅನಕೂಲಕರವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಇಂಜಿನೀಯರ ಮಾತನಾಡಿ, ಪ್ರಸ್ತಾಪಿತ ಕೆರೆಯು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿದ್ದು, ಈ ಕೆರೆಯ ವಿಸ್ತೀರ್ಣ ಒಟ್ಟು 327-00 ಎಕರೆ ಇದೆ. ಈ ವಿಸ್ತೀರ್ಣದಲ್ಲಿ 23-21 ಎಕರೆ ಜಮೀನು ಎಡ ಮತ್ತು ಬಲ ಕಾಲುವೆ, 15-26 ಎಕರೆ ವೇಸ್ಟ್ ವೇರ್ ಮತ್ತು ಮಣ್ಣು ಗಣಿಗಾರಿಕೆಗೆ ಹೋಗಿದೆ. ಉಳಿದ 288-00 ಎಕರೆ ಜಮೀನಿನಲ್ಲಿ ಕೆರೆ ಪ್ರದೇಶ ಇರುತ್ತದೆ. ಹೂಳೂ ತೆಗೆಯುವ ಆಳ ಮಣ್ಣಿನ ಗುಣಮಟ್ಟ ಆಯಾ ಪ್ರದೇಶಕ್ಕೆ ಅನುಗುಣವಾಗಿ ಬೇರೆಬೇರೆಯಾಗಿರುತ್ತದೆ. 0.75 ಮೀಟರವರೆಗೆ ಅಂದರೆ 2 ರಿಂದ 3 ಅಡಿ ಹಾಗೂ ಕೆಲವೊಂದು ಪ್ರದೇಶದಲ್ಲಿ ಮಣ್ಣಿನ ಗುಣಮಟ್ಟದನ್ವಯ 1 ಮೀಟರವರಗೆ ಆಳ ತೆಗೆಯಬಹುದಾಗಿದೆ. ಆಳವು ಅಲ್ಲಿನ ಮಣ್ಣಿನ ಸಾಂದ್ರತೆ ಅನುಗುಣವಾಗಿ ಬದಲಾಗುತ್ತದೆ ಎಂದು ತಿಳಿಸಿದರು.
ಕೊಪ್ಪಳ ಹಿರಿಯ ಭೂ ವಿಜ್ಞಾನಿ ಮಾತನಾಡಿ, ನಿಡಶೇಸಿ ಕೆರೆಯಲ್ಲಿ 3 ಮೀಟರ ಆಳದವರೆಗೆ ಹೂಳನ್ನು ತೆಗೆಯಲು ಅವಕಾಶ ಇದೆ ಎಂದು ತಿಳಿಸಿದರು.
ನಿಡಶೇಸಿ ಕೆರೆಗೆ ಈಗಾಗಲೇ ನರೇಗಾ ಯೋಜನೆಯಡಿ ಒಂದು ಅಡಿ ಆಳದವರೆಗೆ ಹೂಳು ತೆಗೆದಿದ್ದು, ಕೆರೆಯ ಹೂಳನ್ನು ಸ್ವಲ್ಪ ಆಳದಲ್ಲಿ ತೆಗೆದರೆ ಮರಳು ಬರುವ ಸಾಧ್ಯತೆ ಇರುವುದಾಗಿ ತಾಲೂಕ ಪಂಚಾಯತ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿದ್ದ ರೈತ ಮುಖಂಡ ದೇವಿಂದ್ರಪ್ಪ ಬಳೂಟಗಿ ಅವರು ಮಾತನಾಡಿ, ನರೆಗಾ ಯೋಜನೆಯಡಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿ 6 ಅಡಿ ಆಳದವರೆಗೆ ಹೂಳು ತೆಗೆದಿದ್ದು, ನಿಡಶೇಸಿ ಕೆರೆಯಲ್ಲಿಯೂ 6 ಅಡಿಯವರೆಗೆ ತೆಗೆಯಲು ಅನುಮತಿ ನೀಡುವಂತೆ ಕೋರಿದರು. ಈ ಹೂಳು ತೆಗೆಯುವ ಕಾರ್ಯವನ್ನು ಸುತ್ತಮುತ್ತಲಿನ ರೈತರಿಂದ ದೇಣಿಗೆಯ ರೂಪದಲ್ಲಿ ನೀಡಿದ ಹಣದಿಂದ ಕೈಗೊಳ್ಳುತ್ತಿದ್ದು, ಈ ಕಾರ್ಯವನ್ನು 45 ದಿನಗಳವರೆಗೆ ಕೈಗೊಳ್ಳುವುದು. ಈಗಾಗಲೇ 45 ಟಿಪ್ಪರ್, 25 ಟ್ಯಾಕ್ಟರ್ ಹಾಗೂ 5 ಜೆಸಿಬಿಗಳ ಮಾಲಿಕರು ತಮ್ಮ ಸ್ವ-ಇಚ್ಚೆಯಿಂದ ಬರುತ್ತೇವೆ ಎಂದು ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಕುಷ್ಟಗಿ ಆರಕ್ಷಕ ನಿರೀಕ್ಷಕ ಮಾತನಾಡಿ, ಸದ್ಯ ಕುಷ್ಟಗಿ ಪಟ್ಟಣದಲ್ಲಿ 41 ಕುಡಿಯುವ ನೀರಿನ ಕೊಳವೆ ಬಾವಿಗಳಿದ್ದು, ಈ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ರೈತರು ಹೂಳು ಎತ್ತುವ ಕಾರ್ಯದಿಂದ ಈ ಕೆರೆಗೆ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಕುಡಿಯುವ ನೀರಿನ ತೊಂದರೆ ಇದ್ದು, ಇದರಿಂದ ಸುತ್ತಮುತ್ತಲಿನ ಕೊಳವೆ ಭಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕುಡಿಯವ ನೀರಿನ ಸಮಸ್ಯೆಯನ್ನು ಸಹ ಪರಿಹರಿಸಬಹುದಾಗಿದೆ. ಈ ಕೆರೆಯು ಸದ್ಯ ಸಮತಟ್ಟಾಗಿದ್ದು, ಆಳ ಇಲ್ಲದಿರುವುದು ಕಂಡುಬರುತ್ತದೆ ಎಂದು ಸಭೆಗೆ ತಿಳಿಸಿದರು.
ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕರು ಮಾತನಾಡಿ, ಹೂಳು ಎತ್ತುವ ಆಳವು ಅಲ್ಲಿನ ಮಣ್ಣಿನ ಸಾಂದ್ರತೆ ಅನುಗುಣವಾಗಿ ಬದಲಾಗುತ್ತದೆ. ಕಲ್ಲುಬಂಡೆಗಳ ಪ್ರದೇಶದಲ್ಲಿ ಎರಡು ಮೀಟರ್ ಆಳದಲ್ಲಿ ತೆಗೆಯುವುದು ಕಷ್ಟವಾಗುತ್ತದೆ ಹಾಗೂ ಕೆರೆಯ ಆಳ ನಾಲಾ ಆಳಕ್ಕಿಂತ ಕೆಳಗೆ ಹೋಗಬಾರದು. ಈ ಕೆರೆಯು ನಿರ್ಮಾಣಗೊಂಡು ಸುಮಾರು ವರ್ಷಗಳು ಕಳೆದಿದ್ದು, ಆದರೆ ಕೆರೆಯ ನೀರನ್ನು ನೀರಾವರಿ ಯೋಜನೆಗೆ ಬಳಸಿಕೊಂಡಿರುವುದಿಲ್ಲ. ಕಾರಣ ಸಧ್ಯ ಕೆರೆ ಸಮತಟ್ಟಾಗಿದ್ದು, ಕೆರೆಯ ಹೂಳನ್ನು ತೆಗೆದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರವಾಗುತ್ತದೆ. ಇದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದು ತಿಳಸಿದರು.
ಕುಷ್ಟಗಿ ತಹಶೀಲ್ದಾರ ಗುರುಬಸವರಾಜ ಮಾತನಾಡಿ, ನಿಡಶೇಸಿ ಕೆರೆಯ ಒಟ್ಟು ವಿಸ್ತೀರ್ಣವನ್ನು ಆರು ಜನ ಸರ್ವೆ ಸಿಬ್ಬಂದಿಗಳೊಂದಿಗೆ ಸರ್ವೆ ಕಾರ್ಯ ಕೈಗೊಂಡು ಗಡಿ ಗುರುತಿಸಲಾಗಿದೆ ಹಾಗೂ ಈ ಕೆರೆಯಲ್ಲಿ ನರೇಗಾ ಯೋಜನೆಯಡಿ ಕಾರ್ಯ ಕೈಗೊಂಡಿದ್ದು, ಈಗಾಗಲೇ ಒಂದು ಅಡಿ ಆಳದೊಳವರೆಗೆ ಹೂಳನ್ನು ತೆಗೆದಿರುತ್ತಾರೆ ಎಂದು ತಿಳಿಸಿದರು.
ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ, ಕುಷ್ಟಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಕುಷ್ಟಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕುಷ್ಟಗಿ ಪೊಲೀಸ್ ಠಾಣೆಯ ವೃತ ನಿರೀಕ್ಷಕರು ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error