ನಾಳೆಯ ಬಜೆಟ್ ನತ್ತ ಎಲ್ಲರ ಚಿತ್ತ

ಬೆಂಗಳೂರು, ಮಾ. 4: ಆರ್ಥಿಕ ಕುಸಿತ, ಕೇಂದ್ರದ ಅನುದಾನ ಕಡಿತ, ಸಂಪನ್ಮೂಲ ಕೊರತೆಯ ಸವಾಲಿನ ನಡುವೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಹುನಿರೀಕ್ಷಿತ 2020-21ನೆ ಸಾಲಿನ ಬಜೆಟ್ ನಾಳೆ (ಮಾ.5) ಮಂಡನೆ ಮಾಡಲಿದ್ದಾರೆ.

ರೈತರು ಮತ್ತು ಬಡವರಿಗೆ ಹೊಸ ಯೋಜನೆಗಳ ಘೋಷಣೆ, ತಮ್ಮ ಅವಧಿಯಲ್ಲಿ ರೂಪಿಸಿದ ಹಳೆಯ ಜನಪ್ರಿಯ ಯೋಜನೆಗಳಿಗೆ ಅನುದಾನ ಒದಗಿಸುವುದು ಸೇರಿ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹೇರಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ಬಿಎಸ್‌ವೈ ಮಂಡಿಸಲಿರುವ ಆಯವ್ಯಯದತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಹಣಕಾಸು ಖಾತೆ ಹೊಂದಿರುವ ಯಡಿಯೂರಪ್ಪ ಮಂಡನೆ ಮಾಡಲಿರುವ ಬಜೆಟ್ ಅಭಿವೃದ್ಧಿಯ ಮುನ್ನೋಟವನ್ನು ತೆರೆದಿಡಲಿದೆ.

ಕೃಷಿ ಮತ್ತು ನೀರಾವರಿಗೆ ಆದ್ಯತೆ ನೀಡುವ ಮೂಲಕ ರೈತರಿಗೆ ಹೊಸದೇನಾದರೂ ಕೊಡುಗೆ ನೀಡುವ ಇರಾದೆ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಹಣಕಾಸು ಸ್ಥಿತಿ ಸರಿದೂಗಿಸಲು ಮದ್ಯದ ಮೇಲಿನ ಮಾರಾಟ ತೆರಿಗೆ ಏರಿಕೆ ಮೂಲಕ ಪಾನ ಪ್ರಿಯರಿಗೆ ಕಿಕ್ ಕೊಡುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಅಲ್ಲದೆ, ಡೀಸೆಲ್, ಪೆಟ್ರೋಲ್ ಮೇಲಿನ ಸೆಸ್ ಏರಿಕೆಯಾಗಲಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಬೀಡಿ, ಸಿಗರೇಟ್ ದರವನ್ನು ಹೆಚ್ಚಳ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ಗೊತ್ತಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಆದಾಯ ಕ್ರೋಡೀಕರಣಕ್ಕೆ ಮುದ್ರಾಂಕ-ನೋಂದಣಿ ಶುಲ್ಕ ಹೆಚ್ಚಳ ಸಾಧ್ಯತೆಗಳಿವೆ ಎನ್ನಲಾಗಿದೆ.

ರಾಜ್ಯದಲ್ಲಿ ಹಿಂದಿನ ವರ್ಷ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ಮೈತ್ರಿ ಸರಕಾರ ರೂಪಿಸಿದ ಕೆಲ ಯೋಜನೆಗಳನ್ನು ಕೈಬಿಟ್ಟು ಆರ್ಥಿಕ ಸಮತೋಲನದ ಆಯವ್ಯಯ ಮಂಡನೆಗೆ ಯಡಿಯೂರಪ್ಪ ಲೆಕ್ಕಾಚಾರ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ಹಾಗೂ ಅಲ್ಪಸಂಖ್ಯಾತರು ಸೇರಿ ರಾಜ್ಯದ ಎಲ್ಲ ವರ್ಗದ ಜನರಿಗೆ ಬಜೆಟ್‌ನಲ್ಲಿ ಬಿಎಸ್‌ವೈ ವಿಶೇಷ ಆದ್ಯತೆ ನೀಡಲಿದ್ದಾರೆ. ಅಲ್ಲದೆ, ಬರ ಪೀಡಿತ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಗೆ ವಿಶೇಷ ಯೋಜನೆ ಪ್ರಕಟಿಸುವ ನಿರೀಕ್ಷೆ ಇದೆ.

2.50 ಲಕ್ಷ ಕೋಟಿ ರೂ.ಬಜೆಟ್ ಮಂಡಿಸಲು ತೀವ್ರ ಕಸರತ್ತು ನಡೆಸಿರುವ ಬಿಎಸ್‌ವೈ ಅವರು, ತನ್ನ 7ನೆ ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ದೇಶದಲ್ಲೆ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಕನಸನ್ನು ಹೊಂದಿರುವ ಬಿಎಸ್‌ವೈ ಏನೆಲ್ಲ ಕೊಡುಗೆಗಳನ್ನು ನೀಡಲಿದ್ದಾರೆಂಬ ಕುತೂಹಲ ರಾಜ್ಯದ ಜನರಲ್ಲಿದೆ.

Please follow and like us:
error