ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ-ಸಿದ್ದರಾಮಯ್ಯ

ಬೆಂಗಳೂರು, ಮಾ. 9: ‘ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕಾನೂನು ವಿದ್ಯಾರ್ಥಿಯಾಗಿ 1972ರಲ್ಲಿ ರಾಜಕೀಯ ಪ್ರವೇಶ ಮಾಡಿದಾಗಿಂದ ಸಾಮಾಜಿಕ ನ್ಯಾಯ, ಸಮಾನತೆ, ಮೀಸಲಾತಿ ವ್ಯವಸ್ಥೆ ಪರ ಹೋರಾಡುತ್ತಾ ಬಂದಿದ್ದೇನೆ, ಬಿಜೆಪಿ ಈ ಎಲ್ಲಾ ತತ್ವಗಳಿಗೂ ವಿರುದ್ಧವಾಗಿದೆ. ಹೀಗಿರುವಾಗ ಬಿಜೆಪಿ ಸೇರಲು ಸಾಧ್ಯವೇ? ಇದೊಂದು ಮೂರ್ಖತನದ ಪ್ರಚಾರ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಯಾರೇ ಆಗಲಿ ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದಾಗ ಪದೇ ಪದೇ ಪಕ್ಷ ಬದಲಿಸುವಂತಹ ಸನ್ನಿವೇಶವೇ ಉದ್ಭವಿಸುವುದಿಲ್ಲ. ಅವಕಾಶವಾದಿ ರಾಜಕಾರಣಿಗಳು ಮಾತ್ರ ಅಧಿಕಾರ ಹುಡುಕಿಕೊಂಡು ಹೋಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಿಂದ ನೇರವಾಗಿ ಸಿಗಬೇಕೇ ಹೊರತು ವಾಮಮಾರ್ಗದ ಮೂಲಕ ಅಧಿಕಾರ ಪಡೆಯಲು ಹಪಹಪಿಸಬಾರದು’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

‘ಬಾದಾಮಿ ಕ್ಷೇತ್ರದಲ್ಲಿ 500 ಕೋಟಿ ರೂ.ವೆಚ್ಚದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬೇಡಿಕೆ ಇಟ್ಟಿದ್ದೀನಿ. ಯೋಜನೆ ಇನ್ನೂ ಅನುಮೋದನೆಗೊಂಡಿಲ್ಲ, ಆಗಲೇ ಬಿಜೆಪಿಯ ಕೆಲವು ನಾಯಕರು ಬಾದಾಮಿಗೆ ನಾವು 650 ಕೋಟಿ ರೂ. ಕೊಟ್ಟಿದ್ದೀವಿ ಅಂತ ಪ್ರಚಾರ ಶುರು ಮಾಡಿಕೊಂಡಿದ್ದಾರೆ’ ಎಂದು ಸಿದ್ದರಾಮಯ್ಯ ಇದೇ ವೇಳೆ ಲೇವಡಿ ಮಾಡಿದ್ದಾರೆ.

Please follow and like us:
error

Related posts