ನಾನು ಎನ್‌ಸಿಪಿಯಲ್ಲಿದ್ದೇನೆ, ಅದೇ ಪಕ್ಷದಲ್ಲೇ ಉಳಿಯುತ್ತೇನೆ: ಅಜಿತ್ ಪವಾರ್

ಮುಂಬೈ, ನ.27: ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಬಿಜೆಪಿಯನ್ನು ಕಳೆದ ವಾರ ಬೆಂಬಲಿಸಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ತಮ್ಮ ಪಕ್ಷದಲ್ಲಿ ಮುಂದುವರಿಯುವೆ ಮತ್ತು ಗೊಂದಲವನ್ನು ಸೃಷ್ಟಿಸಲು ಯಾವುದೇ ಕಾರಣವಿಲ್ಲ ಎಂದು ಬುಧವಾರ ಹೇಳಿದ್ದಾರೆ.

“ಇದೀಗ ನನಗೆ ಹೇಳಲು ಏನೂ ಇಲ್ಲ , ನಾನು ಸರಿಯಾದ ಸಮಯದಲ್ಲಿ ಮಾತನಾಡುತ್ತೇನೆ. ನಾನು ಮೊದಲೇ ಹೇಳಿದ್ದೆ, ನಾನು ಎನ್‌ಸಿಪಿಯಲ್ಲಿದ್ದೇನೆ ಮತ್ತು ನಾನು ಎನ್‌ಸಿಪಿಯಲ್ಲಿ ಉಳಿಯುತ್ತೇನೆ. ಗೊಂದಲ ಸೃಷ್ಟಿಸಲು ಯಾವುದೇ ಕಾರಣವಿಲ್ಲ ‘ಎಂದು ಅಜಿತ್ ಪವಾರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಚಿಕ್ಕಪ್ಪ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ನಿವಾಸ  ‘ಸಿಲ್ವರ್ ಓಕ್’ ಗೆ ಮಂಗಳವಾರ ತಡರಾತ್ರಿ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅಜಿತ್ ಪವಾರ್ ಅವರು ‘ನನ್ನ ನಾಯಕನನ್ನು ಭೇಟಿಯಾಗುವುದು  ನನ್ನ ಹಕ್ಕು’ ಎಂದು ಹೇಳಿದರು.

ಅಕ್ಟೋಬರ್ 21 ರಂದು ಪುಣೆಯ ಬಾರಾಮತಿ ಕ್ಷೇತ್ರದಿಂದ 1.65 ಲಕ್ಷ ಮತಗಳ ಅಂತರದಿಂದ ಗೆದ್ದ ಎನ್‌ಸಿಪಿ ಶಾಸಕ

ಅಜಿತ್ ಪವಾರ್  ಕಳೆದ ಶನಿವಾರ ಬಿಜೆಪಿಯೊಂದಿಗೆ ಕೈಜೋಡಿಸಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಎನ್ ಸಿಪಿ  ಮತ್ತು ತನ್ನ ಪವಾರ್ ಕುಟುಂಬಕ್ಕೆ ಆಘಾತ ನೀಡಿದ್ದರು.

ಅದೇ ದಿನ ಎನ್‌ಸಿಪಿ ಅವರನ್ನು ತನ್ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾ ಮಾಡಿತ್ತು. ಆದಾಗ್ಯೂ, ಅವರು ಪಕ್ಷದ ಸದಸ್ಯರಾಗಿ ಮುಂದುವರೆದಿದ್ದಾರೆ.

‘ವೈಯಕ್ತಿಕ ಕಾರಣ’ ಎಂದು ಉಲ್ಲೇಖಿಸಿ ಅಜಿತ್ ಪವಾರ್ ಮಂಗಳವಾರ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಫಡ್ನವೀಸ್ ಕೂಡ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.

Please follow and like us:
error