ನಾನು ಅನ್ನ ದಕ್ಕಿಸಿಕೊಳ್ಳಲು ಬರೆಯುತ್ತೇನೆ : ಸವಡಿ


ಕೊಪ್ಪಳ ೧೪: ತನ್ನ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಲೇಖಕ ಬರೆಯುತ್ತಾನೆ ಮತ್ತು ಅದೇ ನಿಜವಾದ ಬರೆಹ ಎಂದು ಪತ್ರಕರ್ತ ಹಾಗೂ ಲೇಖಕ ಚಾಮರಾಜ ಸವಡಿ ಅಭಿಪ್ರಾಯ ಪಟ್ಟರು.
ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಭಾಗ್ಯನಗರದ ಡಿ ಎಂ ಬಡಿಗೇರ ಅವರ ಸದನ ‘ ಅವ್ವ’ ದ ಲ್ಲಿ ಆಯೋಜಿಸಿದ್ದ ಹತ್ತನೆಯ ಚಿಂತನ ಮಂಥನ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾವೇಕೆ ಬರೆಯಬೇಕು’ ಎಂಬ ವಿಷಯ ಕುರಿತು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಲೇಖಕ ಸಿದ್ದಾಂತಗಳನ್ನು ಬೆನ್ನತ್ತಿದರೆ ಆತ ಬದುಕು ನೂಕುವದು ಕಷ್ಟವಾಗಹುದು. ಹಾಗಾಗಿ ಸಿದ್ದಾಂಗಳ ಗೊಡವೆ ಬಿಟ್ಟು ಬಾಳುವದರ ಜೊತೆಗೆ ವೃತ್ತಿಪರ ಬರೆಹಗಾರನಾಗುವದು ವಾಸ್ತವ ಸ್ಥಿತಿ ಎಂದರಲ್ಲದೇ ಬರೆಹಗಾರನಿಗೆ ವಾಸ್ತವದ ಅರಿವು ತುಂಬಾ ಮುಖ್ಯ ಎಂದರು.
ಮೌಲ್ಯಯುತ ಬರೆಹಕ್ಕೆ ಓದುಗರ ದಂಡು ತಯಾರಾಗುತ್ತದೆ. ಆ ನೆಲೆಗಟ್ಟಿನ ಮೇಲೆ ಬರೆಹಗಾರ ತನ್ನ ಬರೆಹದ ಮೇಲೆ ಹಿಡಿತ ಸಾಧಿಸಬೇಕೆಂದು ಕಿವಿ ಮಾತು ಹೇಳಿದರು. ಒಬ್ಬ ಸಮರ್ಥ ಬರಹಗಾರ ಓದುಗರ ವಲಯವನ್ನು ಸೃಷ್ಟಿ ಮಾಡಿಕೊಳ್ಳುತ್ತಾನೆ ಎಂದು ಅವರು ಹೇಳಿದರು.
ಸಂವಾದದಲ್ಲಿ ಭಾಗಿಯಾದ ಡಾ. ಮಹಾಂತೇಶ ಮಲ್ಲನಗೌಡರ್, ಎ ಎಂ ಮದರಿ, ಬಸವರಾಜ ಸವಡಿ, ಶಿವಪ್ರಸಾದ ಹಾದಿಮನಿ, ರಾಜಶೇಖರ ಪಾಟೀಲ, ಎಸ್ ವಿ ಮೇಳಿ, ಎಸ್ ಕಾಶೀಂಸಾಬ್ ಹಾಗೂ ರಾಚಪ್ಪ ಕೆಸರಬಾವಿ ಬರೆಹ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಅಧ್ಯಕ್ಷತೆ ವಹಿಸಿದ್ದ ಕವಿ ಶಿ ಕಾ ಬಡಿಗೇರ ಮಾತನಾಡಿ ವೃತ್ತಿಪರ ಬರೆಹದ ಜೊತೆ ಜೊತೆಗೆ ಪ್ರವೃತ್ತಿಯ ಬರೆಹ ಕೂಡ ಓದುಗರ ಗಮನ ಸೆಳೆಯುತ್ತದೆ ಎಂದರು.ನಾನೇಕೆ ಬರೆಯುತ್ತೇನೆ ಎಂಬ ಒಂದು ಪ್ರಶ್ನೆಗೆ ಹಲವು ಉತ್ತರಗಳಿವೆ ಎಂದು ಹೇಳಿದರು. ಲೇಖಕ ಅಕಬರ ಕಾಲಿಮಿರ್ಚಿ ಸ್ವಾಗತಿಸಿದರು, ಕೊನೆಗೆ ಡಿ ಎಂ ಬಡಿಗೇರ ವಂದಿಸಿದರು.