ನರೇಂದ್ರ ಮೋದಿ,ಬಿಜೆಪಿ ಸೋಲಿಸಲು ಕರೆ -ಕರ್ನಾಟಕ ರೈತ ಸಂಘ

ಕರ್ನಾಟಕ ರೈತ ಸಂಘ ಹಾಗೂ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಜಂಟಿಯಾಗಿ ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಮತದಾರರಿಗೆ ಸುಳ್ಳಿನ ಸರಮಾಲೆಯನ್ನು ಹೆಣೆದು ಅರ್ಪಿಸಿದ, ದೇಶದ ಜನರ ಸಾಮರಸ್ಯ ಹಾಳು ಮಾಡಿ ಸೈನ್ಯದ, ಧರ್ಮದ ಭಾವನಾತ್ಮಕ ವಿಚಾರಗಳನ್ನು ಮುಂದೆ ಮಾಡಿ ಮತ ಬೇಟೆಯಾಡುತ್ತಿರುವ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಸೋಲಿಸಲು ಕರೆ ನೀಡಲಾಗುತ್ತಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ರೈತರ ಮತ್ತು ದುಡಿಯುವ ಜನರ ಜ್ವಲಂತ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಭೀಕರ ಬರಕ್ಕೆ ತುತ್ತಾಗಿರುವ ಕ್ಷೇತ್ರದ ಜನ ಉದ್ಯೋಗ ಕೋರಿ ಗ್ರಾಮಗಳನ್ನು ತೊರೆದು ಮಹಾನಗರಗಳಿಗೆ ನಿರಂತರವಾಗಿ ಗುಳೆ ಹೋಗುತ್ತಿದ್ದಾರೆ. ಅಲ್ಲಿಯೂ ಕೂಡ ಕೆಲಸ ಸಿಗದೆ ಅತ್ಯಂತ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಮೇವಿನ ಕೊರತೆಯಿಂದ ಜಾನುವಾರುಗಳನ್ನು ಕಸಾಯ ಖಾನೆಗೆ ತಳ್ಳಲಾಗುತ್ತಿದೆ. ಬರ ಪರಿಹಾರ, ಉದ್ಯೋಗ ಖಾತ್ರಿ ಕಾಮಗಾರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಎಲ್ಲಾ ನೌಕರರು ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ನಿರತರಾಗಿರುವುದರಿಂದ ಉದ್ಯೋಗ ಖಾತರಿ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿವೆ. ಈ ಕಾರಣದಿಂದ ಜನರು ಒಂದೊತ್ತಿನ ಊಟಕ್ಕಾಗಿ ಪರಿತಪಿಸುವಂತಾಗಿದೆ. ಹಸಿವಿನ ಬಾದೆ ಹಾಗೂ ಅನಾರೋಗ್ಯದಿಂದ ನರಳುತ್ತಿರುವವರು ಚಿಕಿತ್ಸೆ ಪಡೆಯಲು ಕೂಡ ಹಣದ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡೂ ಪಕ್ಷಗಳ ರಾಜಕಾರಣಿಗಳು ಮತ್ತು ಅಭ್ಯರ್ಥಿಗಳು ಇಂತಹ ಸಂಕಷ್ಟದ ಪರಿಸ್ಥಿತಿ ಕುರಿತು ಗಮನ ಹರಿಸುತ್ತಿಲ್ಲ. ಬದಲಾಗಿ ಜಿಲ್ಲೆಯ ಜನ ಸುಖ ಸಮೃದ್ಧಿ ಜೀವನ ಮಾಡುತ್ತಿದ್ದಾರೆನ್ನುವಂತೆ ಚುನಾವಣಾ ಸಂಭ್ರಮದಲ್ಲಿ ತೊಡಗಿದ್ದಾರೆ. ಇದು ನಿಜಕ್ಕೂ ಖಂಡನೀಯ.

ಜಿಲ್ಲೆಯ ಜೀವನಾಡಿಯಾದ ತುಂಗಭದ್ರ ಜಲಾಶಯದ ಕುರಿತು ಯಾರೂ ಗಂಭೀರವಾಗಿ ಯೋಚಿಸುತ್ತಿಲ್ಲ. ನವಲಿ ಗ್ರಾಮದ ಹತ್ತಿರ ಉದ್ದೇಶಿತ ಸಮಾನಾಂತರ ಜಲಾಶಯದ ಕುರಿತು ಮಾತನಾಡುತ್ತಿಲ್ಲ. ಜಲಾಶಯದಲ್ಲಿ ತುಂಬಿರುವ ೩೩ ಟಿ.ಎಂ.ಸಿ ಹೂಳಿನ ಕುರಿತು ಚಕಾರ ಎತ್ತುತ್ತಿಲ್ಲ. ೮,೦೦೦ ಕೋಟಿ ರೂ, ಯೋಜನೆಯ ಸಮಾನಾಂತರ ಜಲಾಶಯಕ್ಕೆ ಸರ್ಕಾರ ನಯಾಪೈಸೆ ಹಣವನ್ನು ಮಂಜೂರಿ ಮಾಡಿಲ್ಲ. ಈ ಎರಡು ಪಕ್ಷದ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ನೀರಾವರಿ ಯೋಜನೆಗಳು ಮೂಲೆಗೆ ತಳ್ಳಲ್ಪಟ್ಟಿವೆ. ಕೇಂದ್ರ ಸರ್ಕಾರದ ಅನುಮೋದನೆ ದೊರೆತಿಲ್ಲ ಎಂದು ಕುಂಟು ನೆಪ ಹೇಳುತ್ತಿರುವುದು ಎಷ್ಟು ಸರಿ? ಈ ಕುರಿತು ಕ್ಷೇತ್ರದ ಮತದಾರರು ಎರಡೂ ಅಭ್ಯರ್ಥಿಗಳನ್ನು ತಡೆದು ಪ್ರಶ್ನೆ ಮಾಡಿ ಹಕ್ಕು ಚಲಾಯಿಸಬೇಕಿದೆ.
ಪ್ರತಿವರ್ಷ ಕೃಷ್ಣಾ ನದಿಯಿಂದ ನೂರಾರು ಟಿ.ಎಂ.ಸಿ ನೀರು ವ್ಯರ್ಥವಾಗಿ ಹೋಗುತ್ತಿದೆ. ಕೆರೆ ಹೂಳೆತ್ತುವುದು, ಕೆರೆ ತುಂಬಿಸುವ ಯೋಜನೆಗಳು ಕೇವಲ ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ತಂತ್ರಗಾರಿಕೆಯಾಗಿದೆ. ಕೃಷ್ಣಾ ಬಿ ಸ್ಕೀಂ ಯೋಜನೆಯಲ್ಲಿ ನೀರಾವರಿ ಕಲ್ಪಿಸಲು ಇದುವರೆಗೂ ಮುಂದಾಗಿಲ್ಲ.

ಕೊಪ್ಪಳದ ಸುತ್ತಲೂ ಕಂಪನಿ ಕಾರ್ಖಾನೆಗಳು ರೈತರ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡಿವೆ. ಉದ್ದೇಶಿತ ಕಾರ್ಖಾನೆಗಳನ್ನು ಸ್ಥಾಪಿಸದೆ ಭೂಮಿಯನ್ನು ಪಾಳು ಬಿಡಲಾಗಿದೆ. ಹಾಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಇತ್ತ ಉದ್ಯೋಗ ದೊರೆಯದೆ.. ಅತ್ತ ಕೃಷಿ ಭೂಮಿಯನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರಿಂದ ಭೂಮಿ ಪಡೆದುಕೊಂಡ ಕಂಪನಿ ಕಾರ್ಖಾನೆಗಳು ಉದ್ದೇಶಿತ ಕೈಗಾರಿಕೆಗಳನ್ನು ಮೂರು ವರ್ಷದ ಅವಧಿಯಲ್ಲಿ ಸ್ಥಾಪಿಸದಿದ್ದರೆ ಕೈಗಾರಿಕಾ ಕಾಯ್ದೆ ಪ್ರಕಾರ ಭೂಮಿ ರೈತರಿಗೆ ಮರಳಿಸಬೇಕು. ಆದರೆ ಹತ್ತು ವರ್ಷಗಳಿಂದ ಭೂಮಿ ಬಳಸದ ಯಾವ ಕಂಪನಿಗಳು ರೈತರಿಗೆ ಭೂಮಿ ಮರಳಿಸುತ್ತಿಲ್ಲ. ಎಂ.ಎಸ್.ಪಿ.ಎಲ್ ಬಲ್ಡೋಟಾ ಕಂಪನಿ ರೈತರಿಂದ ವಶಪಡಿಸಿಕೊಂಡ ೧೦೮೪ಎಕರೆಯಲ್ಲಿ ೧೦೦೧ಎಕರೆ ಭೂಮಿ ಪಾಳು ಬಿಟ್ಟಿದೆ. ಸುಪ್ರೀಂ ಕೋರ್ಟನಿಂದ ಈ ಭೂಮಿ ವಾಪಸ್ ಮಾಡುವಂತೆ ಆದೇಶವಿದ್ದರೂ ಕಂಪನಿಗಳು ರೈತರಿಗೆ ಭೂಮಿಯನ್ನು ಬಿಟ್ಟು ಕೊಡುತ್ತಿಲ್ಲ.

ದೊಡ್ಲ ಡೈರಿ ೮೬ ಕಾರ್ಮಿಕರು ಕನಿಷ್ಠ ವೇತನ ಕೇಳಿದ್ದಕ್ಕಾಗಿ ೯ ತಿಂಗಳಿಂದ ಕೆಲಸ ಕಸಿದುಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ೫೦ರ ೩೦೦ ಕಾರ್ಮಿಕರ ಉದ್ಯೋಗ ಕಸಿಯಲಾಯ್ತು. ೩ ಜಿಲ್ಲೆಯ ತುಂಗಭದ್ರ ನೀರಾವರಿ ನಿರ್ವಾಹಣಾ ಕಾರ್ಮಿಕರಿಗೆ ೯ ತಿಂಗಳಿಂದ ವೇತನ ನೀಡುತ್ತಿಲ್ಲ. ೧೨೪ ಕಿಮ್ಸ್ ‘ಡಿ’ ವರ್ಗದ ಗುತ್ತಿಗೆ ಕಾರ್ಮಿಕರು ಸದಾ ರಾಜಕಾರಣಿಗಳಿಂದ ಕೆಲಸ ಕಳೆದುಕಳ್ಳುವ ಭೀತಿಗೊಳಗಾಗಿದ್ದಾರೆ. ಜಿಲ್ಲೆಯ ಗಣಿ ಆಧಾರಿತ ಬೃಹತ್ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿವೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಸಂಗಣ್ಣ ಕರಡಿ, ರಾಜಶೇಖರ ಹಿಟ್ನಾಳ ರೈತರ ಭೂಮಿಯನ್ನು ವಾಪಸ್ ಕೊಡಿಸಲು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಇವರ ವೈಫಲ್ಯ ಮುಂದುವರಿದಿದ್ದು, ಇವರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ. ಈ ಎರಡು ಪಕ್ಷಗಳನ್ನು ಧಿಕ್ಕರಿಸಿ, ದೇಶದ ದುಡಿಯುವ ಜನರ ವಿಮೋಚನೆಗಾಗಿ ಹೋರಾಡುವ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಡ ಪರ್ಯಾಯ ಎತ್ತಿ ಹಿಡಿಯಲು ಕೋರಲಾಗಿದೆ.

Please follow and like us:
error