ನಮ್ಮನ್ನಗಲಿದ ಹಬೀಬ್ ಸರ್ ….

ಹೀಗೇ ಸದಾ ಕಾಲ ಸಾಗುತ್ತಿರುತ್ತದೆ..

ನಾನು ಅಪ್ಪನಾದಾಗ ನನ್ನ ಬಾಲ್ಯ ಮತ್ತೆ ಮತ್ತೆ ಕೆಣಕುತ್ತದೆ.

ಅದೊಂದು ಸುಂದರ ಜಗತ್ತು. ಸುತ್ತಲೂ ಕಲ್ಲು ಗುಡ್ಡಗಳ, ಗಿಡಗಳ ನೆರಳ ಪ್ರದೇಶ, ಇಡೀ ಶಾಲೆಯ ತುಂಬಾ ತಂಪು ವಾತಾವರಣ.

ಗಿಡದ ಮೇಲೆ ಏರುವುದು, ಖಾಲಿ ಜಾಗವನ್ನೇ ಪಿಚ್ ಮಾಡಿಕೊಂಡು ಕ್ರಿಕೆಟ್ ಆಡುವುದು, ಡುಬ್ಬಾಕೆತ್ತು, ಲಗೋರಿ, ಒನಕೆ ಬ್ಯಾಟು, ಪ್ರಾರ್ಥನೆಯ ಸಾಲುಗಳಲ್ಲಿ ನಿಂತುಕೊಳ್ಳುವುದೆಂದರೆ ಮೈಜುಮ್ಮೆನುವಂಥಾ ರೋಮಾಂಚನ, ೧ ತಾಸು ಮೊದಲೇ ಹೋಗುವುದು, ಸ್ನೇಹಿತರೊಡನೆ ಹರಟೆ, ಮಾತು, ಪಾಠಗಳು, ಬಿಲ್ಡಿಂಗಿನ ಎತ್ತರದ ಕುಂಬಿಗಳ ಮೇಲೆ, ತುದಿಯ ಕಾರಿಡಾರ್ ಮೇಲೆ, ಗಿಡಗಳ ಕೆಳಗೆ, ತರಗತಿಯ ಮುಂಭಾಗದಲ್ಲಿ ಎಲ್ಲೆಲ್ಲಿ ಸಿಗುತ್ತದೋ ಅಲ್ಲಿ ಬುತ್ತಿಯ ಊಟ, ಮತ್ತೆ ಮಧ್ಯಾಹ್ನದ ಅವಧಿಯ ಪಾಠಗಳು, ೧ ರೂ. ಗೆ ಗಿರಮಿಟ್, ಸೊಂಡಿಗೆಯ ರುಚಿ, ಬೆಲ್ ನಂತರ ಮತ್ತೆ ಕ್ರಿಕೆಟ್, ಮಾಸಿದ ಅಂಗಿಯ ಹೊತ್ತು ಮನೆಗೆ, ಟ್ಯೂಶನ್, ಹೋಂ ವರ್ಕ್, ಟಿವಿ, ಕ್ರಿಕೆಟ್ ಟೀಂ, ಶನಿವಾರ ೧, ರವಿವಾರ ೨ ಮ್ಯಾಚ್ ಗಳು, ಒಂದೊಂದು ರೂಪಾಯಿ ಹಾಕಿ ೧೨ ಜನರು MRI ಬಾಲ್ ನ್ನು ತಂದಾಗಿನ ಖುಷಿ, ೨೫ ರೂ. ಯ ಬ್ಯಾಟ್ ಇದ್ದವನಿಗೆ ಎಲ್ಲಾ ಮ್ಯಾಚ್ ಗೆ ಕರೆಯುವ ಡಿಮ್ಯಾಂಡ್ ..

ನನ್ನ ಸ್ವರ್ಗವೇ ಅಲ್ಲಿತ್ತು .. ಆ ತಾಣವೇ ಗವಿಸಿದ್ಧೇಶ್ವರ ಶಾಲೆ.

ವಜ್ರಗಳನ್ನು ಆರಿಸಿ ತಂದು ಹಾಕಿದ್ದಂತಿತ್ತು ಅಂದಿನ ಶಿಕ್ಷಕರ ಬಳಗ.

ಘಟಾನುಘಟಿಗಳು, ದಂತಕತೆಗಳಂಥವರು ನಮ್ಮ ಬದುಕಿಗೆ ಬೆಳಕನ್ನು ತೇಯುತ್ತಿದ್ದರು. ಆಟಗಳಿಗೆ, ಪಾಠಗಳಿಗೆ, ಸಾಹಿತ್ಯಕ್ಕೆ, ಸಾಂಸ್ಕ್ರತಿಕ ಚಟುವಟಿಕೆಗಳಿಗೆ, ಎನ್.ಸಿ.ಸಿ., ಸ್ಕೌಟ್, ವಿಜ್ಞಾನದ exhibition ಗೆ, ಬದುಕಿನ ಮೌಲ್ಯಗಳಿಗೆ ನನ್ನ ಕಾಲದ ಶಿಕ್ಷಕರ ಕೊಡುಗೆ ಅಪಾರ.

ಪಾಠಗಳಷ್ಟೇ ಪಠ್ಯೇತರ ಚಟುವಟಿಕೆಗಳು ಭವಿಷ್ಯದ ದಾರಿದೀಪಗಳಾಗುತ್ತವೆ ಎನ್ನುವುದಕ್ಕೆ ನಾನೇ ಸಾಕ್ಷಿ. ಅಂದು ನನಗೆ ಬಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಜವಾಬ್ದಾರಿ, ಇಂದು ನಾನೊಬ್ಬ ಕವಿಯಾಗಲು ಸಾಧ್ಯವಾಗಿದೆ.

ಕನ್ನಡಕ್ಕೆ – ಎಂ.ಆರ್. ಬಡಿಗೇರ್, ಪಿ.ವಿ. ಹಿರೇಮಠ, ಎಸ್.ಎಂ. ಕಂಬಾಳಿಮಠರು

ಇಂಗ್ಲೀಷ್ ಗೆ – ಬಿ.ವಿ. ರಾಮರೆಡ್ಡಿ, ವಿ.ಕೆ. ಜಾಗಟಗೇರಿ, ಜಿ.ವಿ. ವಾಲಿ, ಟಿ.ವಿ. ಮಾಗಳದ ಸರ್

ಹಿಂದಿಗೆ – ಗವಿಸಿದ್ಧಪ್ಪ ಚಲವಾದಿ ಮತ್ತು ಎಸ್.ಎಂ. ಕಮ್ಮಾರ್ ಸರ್

ಗಣಿತಕ್ಕೆ – ಪಿ.ಡಿ. ಬಡಿಗೇರ್, ಎಸ್.ಸಿ. ಹಿರೇಮಠ ಸರ್

ವಿಜ್ಞಾನಕ್ಕೆ ಎ.ಎನ್. ಹಬೀಬ್ ಸರ್

ಸಮಾಜಕ್ಕೆ ಗವಿಸಿದ್ಧಪ್ಪ ಕೊಪ್ಪಳ, ಹೂಗಾರ್ ಸರ್

ಆಟಕ್ಕೆ ಷಡಕ್ಷರಿ ಸರ್, ಇಡೀ ಶಾಲೆಯ ಶಿಸ್ತಿನ ರಾಯಭಾರಿಯಂತಿದ್ದ ದೊಡ್ಡಮನಿ ಸರ್ ಅವರ ಒಂದೇ ಶಬ್ದ ‘ಏಯ್’ ಅದೆಷ್ಟೋ ವಿದ್ಯಾರ್ಥಿಗಳ ಚಡ್ಡಿಯನ್ನೇ ಒದ್ದೆಯಾಗಿಸುತ್ತಿತ್ತು.

ಹಲಕುರ್ಕಿ ಸರ್, ಬಾಷುಮಿಯಾ, ಹೆಡ್ ಕ್ಲರ್ಕ ಪಾಟೀಲರು, ಒಬ್ಬರು ಟೈಪಿಸ್ಟ (ಹೆಸರು ನೆನಪಿಗೆ ಬರ್ತಿಲ್ಲ), ಸುಲೇಮಾನ, ಅಬ್ದುಲ್, ನಾಗಪ್ಪ, ಹುಚ್ಚೀರಪ್ಪ ರಂಥ ಡಿ ದರ್ಜೆಯ ನೌಕರರು ಒಂದು ಅವಿಭಕ್ತ ಕುಟುಂಬದ ಭಾಗವಾಗಿದ್ದರು.

ಮಾಧು ಮಾಸ್ತರ್ ರಂಥವರು ಈ ಕಾಲಕ್ಕೆ ಹೆಚ್ಚು ಪ್ರಸ್ತುತರಾಗುತ್ತಾರೆ.

ಚಿತ್ರಕಲೆಯ ಕೌದಿ ಸರ್, ಅಮರೇಶ ಕರಡಿ, ನರೇಂದ್ರ ಪಾಟೀಲ, ಪ್ರಕಾಶ ನಿಲೂಗಲ್ ಹೊಸದಾಗಿ ಬಂದಾಗ ನಾವಾಗಲೇ ಎಸ್.ಎಸ್.ಎಲ್.ಸಿ. ಮುಗಿಸೋ ಘಟ್ಟದಲ್ಲಿದ್ದೆವು. ಪ್ರಭು ಹಿರೇಮಠ ಸರ್ ಅವರೂ ಕುಕನೂರಿನಿಂದ ಕೊಪ್ಪಳಕ್ಕೆ ಬಂದದ್ದೂ ಇದೇ ವರ್ಷ.

೨೩ ವರ್ಷಗಳ ನಂತರ ಮತ್ತೆ ೧೦ ನೇ ತರಗತಿಯ ನೆನಪುಗಳಿಗೆ ಬಂದಾಗ ಕಾಲನ ಉರುಳುವಿಕೆಗೆ ಬೇಸರವಾಗುತ್ತದೆ. ನಿಜವಾಗಿಯೂ ಅಂದಿನ ನಮ್ಮ ಶಿಕ್ಷಕರು ಮಕ್ಕಳಿಗಾಗಿಯೇ ದುಡಿಯುತ್ತಿದ್ದರು. ನಾನೂ ಈಗ ಶಿಕ್ಷಕನೇ, ನನ್ನ ಹಲವು ಪಾಠಗಳು ನನ್ನ ಶಿಕ್ಷಕರಿಂದಲೇ ಪ್ರೇರಣೆಯಾದಂತಹವು.

ಇಂಥ ನನ್ನ ಶಾಲೆಯ ಹಬೀಬ್ ಸರ್ ಇಂದು ನಮ್ಮನ್ನಗಲಿದ್ದಾರೆ.

ಪಿ.ವಿ. ಹಿರೇಮಠ, ವಾಲಿ ಸರ್, ಹಲಕುರ್ಕಿ ಸರ್, ಮಾಧು ಸರ್, ಎಂ.ಆರ್. ಬಡಿಗೇರ್, ಕಮ್ಮಾರ್ ಸರ್ ಅವರೂ ನಮ್ಮ ಜೊತೆಗಿಲ್ಲ. ಆದರೆ ಅವರ ಜೀವನದ ಪಾಠಗಳು ನಿರಂತರವಾಗಿ ನನ್ನಂತಹ ಹತ್ತಾರು ಸಾವಿರ ವಿದ್ಯಾರ್ಥಿಗಳ ಜೊತೆಗಿರುತ್ತವೆ.

ಹಬೀಬ್ ಸರ್ ಅವರ ಅಗಲಿಕೆ ಅವರ ಅಪಾರ ಪ್ರಮಾಣದ ವಿದ್ಯಾರ್ಥಿಗಳಿಗೆ ನೋವು ತಂದಿದೆ.

ಸದಾ ನಗುಮೊಗದ, ನಗಿಸುತ್ತಲೇ ಪಾಠ ಮಾಡಿ, ಇದೀಗ ಅಳಿಸುತ್ತ ಹೊರಟಿರುವ ನಿಮಗೆ ಸಾವಿರ ನಮನಗಳು.

ಕೆಣಕಬೇಡ ಕಾಲವೇ
ಭವಿಷ್ಯ ದುಖಿಯಾಗುತ್ತದೆ ..

– ಮಹೇಶ ಬಳ್ಳಾರಿ

Please follow and like us:
error