ನಮಗೆ ಬೇಕಾದ ಔಷಧಿ, ಆಮ್ಲಜನಕ, ವ್ಯಾಕ್ಸಿನ್ ತರಿಸಲು ಕೇಂದ್ರದ ಅಪ್ಪಣೆ ಬೇಕೆ?- ರವಿಕೃಷ್ಣಾ ರೆಡ್ಡಿ

ಬಲಿಷ್ಠ ರಾಜ್ಯಗಳು ಮಾತ್ರ ಬಲಿಷ್ಠ ಭಾರತವನ್ನು ನಿರ್ಮಿಸಬಲ್ಲವು,ಆಮ್ಲಜನಕವಿಲ್ಲದೇ ಸಾಯುತ್ತಿದ್ದಾರೆ ಜನರು. ಆಸ್ಪತ್ರೆಗಳನ್ನು ಮುಚ್ಚುವ ಮಾತನಾಡುತ್ತಿದ್ದಾರೆ ಮುಖ್ಯಮಂತ್ರಿಗಳು. ಕಳೆದ ವರ್ಷ ನಿರ್ಮಿಸಿದ ಸಾವಿರಾರು ಬೆಡ್‍ಗಳ ಬೃಹತ್ ಕೋವಿಡ್-ಕೇರ್ ಕೇಂದ್ರಗಳು, ಅಲ್ಲಿಯ ವಸ್ತುಗಳು ಏನಾದವು? ಕೋಟ್ಯಾಂತರ ರೂಪಾಯಿ ಕೊಟ್ಟು ಕೊಂಡ ಸಾವಿರಾರು ವೆಂಟಿಲೇಟರ್‍‍ಗಳು ಏನಾದವು? ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಪ್ರಶ್ನಿಸಿದ್ದಾರೆ.

ನಮಗೆ ಬೇಕಾದ ಔಷಧಿ, ಆಮ್ಲಜನಕ, ವ್ಯಾಕ್ಸಿನ್ ತರಿಸಲು ಕೇಂದ್ರದ ಅಪ್ಪಣೆ ಬೇಕೆ? ಮೆಟ್ರೋ ರೈಲು ವಿಸ್ತರಣೆಗೆ ಒಪ್ಪಿಗೆ ನೀಡಿದ್ದಕ್ಕೆ ಕೋಟ್ಯಾಂತರ ರೂಪಾಯಿಗಳ ಧನ್ಯವಾದ ಅರ್ಪಿಸುವ ಜಾಹೀರಾತು ನೀಡಬೇಕೆ? ಇದೆಂತಹ ಗುಲಾಮಿತನ?

ಕೊರೋನಾವೈರಸ್ ಸೋಂಕಿನ ಎರಡನೆಯ ಅಲೆ ಸುನಾಮಿ ರೂಪದಲ್ಲಿ ಬರುತ್ತಿರುವ ಸೂಚನೆಗಳು ಇದ್ದರೂ ಜನರನ್ನು ಅಪಾಯಕ್ಕೊಡ್ಡಿ ಪ್ರಧಾನಿ, ಮುಖ್ಯಮಂತ್ರಿಗಳಾದಿಯಾಗಿ ಲಕ್ಷಾಂತರ ಜನರನ್ನು ಸೇರಿಸಿ ಸಭೆ, ರ್ಯಾಲಿ ಮಾಡಿದ್ದು ಯಾವ ರೀತಿಯ ಜವಾಬ್ದಾರಿ? ಅಪಾಯ ಆಗಿಬಿಟ್ಟಾಗ ಅದು ಎಲ್ಲರ ಜವಾಬ್ದಾರಿ, ಆಗದೇ ಇದ್ದರೆ ಅದಕ್ಕೆ ಇವರ ನಾಯಕತ್ವವೇ ಕಾರಣ, ಅಲ್ಲವೇ? ಜನರೆಲ್ಲರೂ ಮೂರ್ಖರಲ್ಲ.

ರಾಜ್ಯ ಸರ್ಕಾರ ಕೇಂದ್ರದ ಮೇಲಿನ ಅವಲಂಬನೆ ಬಿಡಬೇಕು. ರಾಜ್ಯದ ಜನ ಸಬಲ ಪ್ರಾದೇಶಿಕ ರಾಜಕಾರಣ ಮಾಡಬೇಕು.

ಸರ್ಕಾರ ಜನರನ್ನು ಉಳಿಸುವುದಕ್ಕಿಂತ ಅವರನ್ನು ತಮ್ಮ ಅಹಂಕಾರ, ಹಣದಾಸೆ, ಬೇಜವಾಬ್ದಾರಿಗಳಿಂದ ಸಾವಿನ ದವಡೆಗೆ ತಳ್ಳಿವೆ. ಜನರು ಎಚ್ಚರಗೊಳ್ಳಬೇಕು. ತಮ್ಮ, ತಮ್ಮ ಕುಟುಂಬದ ಹಾಗೂ ಸಮುದಾಯದ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ವರ್ತಿಸಬೇಕು; ಓಡಾಟ ಕಡಿಮೆ ಮಾಡಬೇಕು, ಹೊರಗೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜನಜಂಗುಳಿಯಿಂದ ದೂರ ಇರಬೇಕು. ಸೋಂಕಿನ ಲಕ್ಷಣಗಳು ಕಂಡ ತಕ್ಷಣ ಪ್ರತ್ಯೇಕವಾಗಿ ಉಳಿದು ವೈದ್ಯಕೀಯ ನೆರವು ಪಡೆಯಬೇಕು, ಬೇಜವಾಬ್ದಾರಿಯಿಂದ ವರ್ತಿಸುವ ಕುಟುಂಬ ಸದಸ್ಯರನ್ನು ಮತ್ತು ಸಾರ್ವಜ ನಿಕ ವ್ಯಕ್ತಿಗಳನ್ನು ಟೀಕಿಸಬೇಕು. ಇವತ್ತಿನ ದುರಂತಮಯ ಸ್ಥಿತಿಗೆ ಕಾರಣವಾಗಿರುವ ನಮ್ಮ ಕೆಟ್ಟ ರಾಜಕೀಯ ಆಯ್ಕೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ

 

Please follow and like us:
error