ನಜೀಬ್ ಅಹ್ಮದ್ ನಾಪತ್ತೆ ಪ್ರಕರಣ: ‘ಮುಚ್ಚುಗಡೆ ವರದಿ’ ಸಲ್ಲಿಸಿದ ಸಿಬಿಐ

ಹೊಸದಿಲ್ಲಿ, ಅ. 15: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಝೀಬ್ ಅಹ್ಮದ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ‘ಮುಚ್ಚುಗಡೆ ವರದಿ’ಯನ್ನು ಸಿಬಿಐ ಸೋಮವಾರ ಸಲ್ಲಿಸಿದೆ. 

ನಾಪತ್ತೆಯಾದ ವಿದ್ಯಾರ್ಥಿ ನಝೀಬ್ ಅಹ್ಮದ್ ಅವರ ತಾಯಿ ಫಾತಿಮಾ ನಫೀಸಾ ಅವರು ಸಲ್ಲಿಸಿದ ಮನವಿ ತಿರಸ್ಕರಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯ ‘ಮುಚ್ಚುಗಡೆ ವರದಿ’ ಸಲ್ಲಿಸಲು ಈ ಹಿಂದೆ ಸಿಬಿಐಗೆ ಅವಕಾಶ ನೀಡಿತ್ತು.

ತನ್ನ ಪುತ್ರನನ್ನು ಪತ್ತೆ ಮಾಡಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ನಫೀಸಾ ಅವರು 2016 ನವೆಂಬರ್‌ನಲ್ಲಿ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತ್ತು ಹಾಗೂ ವಿಚಾರಣಾ ನ್ಯಾಯಾಲಯದ ಮುಂದೆ ಅವರು ತಮ್ಮ ಪ್ರತಿಪಾದನೆ ಮಾಡಬಹುದು ಎಂದು ಹೇಳಿತ್ತು. “ಪ್ರಕರಣಕ್ಕೆ ಎರಡು ವರ್ಷವಾಯಿತು. ನನಗೆ ನ್ಯಾಯಾಲಯದ ಬಗ್ಗೆ ಅತ್ಯಧಿಕ ನಿರೀಕ್ಷೆ ಇತ್ತು. ಆದರೆ, ಪ್ರಕರಣ ಒಂದು ಇಂಚು ಕೂಡ ಮುಂದೆ ಹೋಗಿಲ್ಲ. ತನಿಖಾ ಸಂಸ್ಥೆಗಳು ನ್ಯಾಯಾಲಯವನ್ನು ದಾರಿ ತಪ್ಪಿಸುತ್ತಿವೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಲೇರಲಿದ್ದೇವೆ. ಅಧಿಕಾರದಲ್ಲಿ ಇರುವವರ ಒತ್ತಡದ ಅಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಈ ಎಲ್ಲವು ನಡೆದಿವೆ” ಎಂದು ನಫೀಸಾ ಹೇಳಿದ್ದರು.

ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಹಿ-ಮಾಂಡ್ವಿ ಹಾಸ್ಟೆಲ್‌ನಿಂದ 2016 ಅಕ್ಟೋಬರ್ 15ರಂದು ನಝೀಬ್ ಅಹ್ಮದ್ ನಾಪತ್ತೆಯಾಗಿದ್ದರು. ನಾಪತ್ತೆಯಾಗುವುದಕ್ಕಿಂತ ಹಿಂದಿನ ರಾತ್ರಿ ನಝೀಬ್ ಅಹ್ಮದ್ ಹಾಗೂ ಎಬಿವಿಪಿಯ ಕೆಲವು ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು.

Please follow and like us:
error