ಬೆಂಗಳೂರು, ನ.14: ರಾಜ್ಯದ ಎರಡು ಮಹಾನಗರ ಪಾಲಿಕೆಗಳು, ಆರು ನಗರಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್ಗಳು ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ವಿಪಕ್ಷ ಕಾಂಗ್ರೆಸ್ ಅತಿಹೆಚ್ಚು ಕಡೆ ಗೆಲುವು ಸಾಧಿಸಿದ್ದರೆ, ಆಡಳಿತಾರೂಢ ಪಕ್ಷ ಬಿಜೆಪಿ ಎರಡನೆ ಸ್ಥಾನಕ್ಕೆ ಇಳಿದಿದ್ದು, ಜೆಡಿಎಸ್ ಮೂರನೆ ಸ್ಥಾನದಲ್ಲಿದೆ.
ಕುತೂಹಲ ಕೆರಳಿಸಿದ್ದ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 151, ಬಿಜೆಪಿ 125, ಜೆಡಿಎಸ್ 63, ಸಿಪಿಎಂ 1, ಎಸ್ಡಿಪಿಐ 7 ಸೇರಿದಂತೆ ಪಕ್ಷೇತರರು 71 ವಾರ್ಡ್ಗಳಲ್ಲಿ ಗೆದ್ದಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದ್ದರೆ, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ, ಎರಡು ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್-ಬಿಜೆಪಿ ತಲಾ ಒಂದೊಂದು ದಕ್ಕಿಸಿಕೊಂಡಿವೆ.
ಉಳಿದಂತೆ ಕನಕಪುರ, ಗೌರಿಬಿದನೂರು ನಗರಸಭೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದು, ಕೋಲಾರ, ಮುಳಬಾಗಿಲು, ರಾಬರ್ಟ್ಸನ್ ಪೇಟೆ ಮತ್ತು ಚಿಂತಾಮಣಿ ನಗರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಹಾಗೂ ಪಟ್ಟಣ ಪಂಚಾಯತ್ಗಳಲ್ಲಿ ರಾಜಕೀಯ ಪಕ್ಷಗಳಿಗೆ ಕೆಲವೆಡೆ ಸೋಲು ಕಂಡಿದ್ದರೆ, ಕೆಲವೆಡೆ ಗೆಲುವಿನ ನಗೆ ಬೀರಿದ್ದಾರೆ.