‘ನಗರ ನಕ್ಸಲ್’ ಶಬ್ಧವನ್ನು ಸರಕಾರ ವ್ಯಾಖ್ಯಾನಿಸಲಿ: ಸುಪ್ರೀಂ ಕೋರ್ಟ್ ಗೆ ರೊಮಿಲ್ಲಾ ಥಾಪರ್ ಅರ್ಜಿ

ಹೊಸದಿಲ್ಲಿ,ಸೆ.30: ಮಾನವ ಹಕ್ಕು ಹೋರಾಟಗಾರರ ಗೃಹಬಂಧನದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುವ ಖ್ಯಾತ ಇತಿಹಾಸತಜ್ಞೆ ರೊಮಿಲ್ಲಾ ಥಾಪರ್ ಅವರು ‘ನಗರ ನಕ್ಸಲ್’ ಶಬ್ಧವನ್ನು ವ್ಯಾಖ್ಯಾನಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ತನಗಾಗಲೀ,ತನ್ನಂತಹ ಇತರ ಕಾರ್ಯಕರ್ತರಿಗಾಗಲೀ ಈ ಶಬ್ದದ ಅರ್ಥ ಗೊತ್ತಿಲ್ಲ ಎಂದಿದ್ದಾರೆ.

ವರವರರಾವ್ ಸೇರಿದಂತೆ ಐವರು ಮಾನವ ಹಕ್ಕು ಹೋರಾಟಗಾರರ ಗೃಹಬಂಧನಗಳ ಕುರಿತು ಮಾತನಾಡಿದ ಅವರು,ಇವರೆಲ್ಲ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳಾಗಿದ್ದಾರೆ. ನಾವೆಲ್ಲ ಭಾರತೀಯರಾಗಿ ಹುಟ್ಟಿದ್ದೇವೆ ಮತ್ತು ಭಾರತೀಯರಾಗಿಯೇ ಬದುಕುತ್ತಿದ್ದೇವೆ.ಈ ಕಾರ್ಯಕರ್ತರೆಲ್ಲ ಉತ್ತಮ ಕಾರಣಗಳಿಗಾಗಿ ಹೋರಾಡುತ್ತಿದ್ದಾರೆ ಮತ್ತು ಅವರನ್ನು ನಗರ ನಕ್ಸಲರೆಂದು ಬಣ್ಣಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದರು.

ಅವರಿಗೆ ನಗರ ನಕ್ಸಲ್ ಶಬ್ದದ ಅರ್ಥವಾದರೂ ಗೊತ್ತಿದೆಯೇ?, ನಗರ ನಕ್ಸಲ್ ಶಬ್ದವನ್ನು ಸರಕಾರವು ಮೊದಲು ವ್ಯಾಖ್ಯಾನಿಸಲಿ ಮತ್ತು ಬಳಿಕ ನಾವು ಈ ವರ್ಗಕ್ಕೆ ಹೇಗೆ ಸೇರುತ್ತೇವೆ ಎನ್ನುವುದನ್ನು ತಿಳಿಸಲಿ ಮತ್ತು ನಾವು ಹೇಗೆ ನಗರ ನಕ್ಸಲ್‌ಗಳಾದೆವು ಎನ್ನುವುದನ್ನು ಅದು ಹೇಳಲಿ. ನಗರ ನಕ್ಸಲ್ ಶಬ್ದದ ಅರ್ಥ ಸರಕಾರಕ್ಕೆ ತಿಳಿದಿಲ್ಲ ಅಥವಾ ನಮಗೆ ಆ ಶಬ್ದದ ಅರ್ಥ ಗೊತ್ತಿಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಥಾಪರ್ ಹೇಳಿದರು.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಮಾನವ ಹಕ್ಕು ಹೋರಾಟಗಾರರ ಬಂಧನದ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಮತ್ತು ಬಂಧನಗಳ ಕುರಿತು ತನಿಖೆಗೆ ವಿಶೇಷ ತನಿಖಾ ತಂಡವನ್ನು ನೇಮಕಗೊಳಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅರ್ಜಿದಾರರು ಕರೆದಿದ್ದ ಸುದ್ದಿಗೋಷ್ಠಿಯ ನೇಪಥ್ಯದಲ್ಲಿ ಮಾತನಾಡುತ್ತಿದ್ದ ಅವರು,ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆಯು ಕಾನೂನನ್ನು ತನ್ನ ಕೈಗಳಲ್ಲಿ ತೆಗೆದುಕೊಳ್ಳುವಂತಿಲ್ಲ. ಅದು ಕೆಲವು ನಿರ್ದಿಷ್ಟ ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಬಂಧನಗಳು ತನಿಖೆಯ ಅಂತಿಮ ಹೆಜ್ಜೆಯಾಗಿದೆಯೇ ಹೊರತು ಮೊದಲ ಹೆಜ್ಜೆಯಲ್ಲ ಎಂದರು.

ಒಪ್ಪಲಾಗದ ಆರೋಪಗಳಲ್ಲಿ ನಿರಂಕುಶ ಬಂಧನಗಳೆಂದರೆ ಪೊಲೀಸರು ವಾರಂಟ್ ಇಲ್ಲದೆ ಅಥವಾ ನಮಗರ್ಥವಾಗದ ಭಾಷೆಯಲ್ಲಿ ವಾರಂಟ್‌ನೊಂದಿಗೆ ನಮ್ಮ ಮನೆಗಳಿಗೆ ನುಗ್ಗಿ ನಮಗೆ ಗೊತ್ತಿಲ್ಲದ ಚಟುವಟಿಕೆಗಳನ್ನು ನಮ್ಮ ಮೇಲೆ ಆರೋಪಿಸುವುದು ಎಂದಾಗುತ್ತದೆ ಎಂದು ಥಾಪರ್ ಹೇಳಿದರು.

Please follow and like us:
error