ಧಾರವಾಡದ ಭೀಕರ ರಸ್ತೆ ಅಪಘಾತದಲ್ಲಿ 14ಕ್ಕೇರಿದ ಸಾವಿನ ಸಂಖ್ಯೆ

.

ಧಾರವಾಡ, : ಟಿಪ್ಪರ್ ಹಾಗೂ ಮಿನಿ ಬಸ್ ನಡುವೆ ಶುಕ್ರವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಮಾಜಿ ಶಾಸಕ ಗುರುಸಿದ್ದನಗೌಡರ ಸೊಸೆ ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರನ್ನು ಪೂರ್ಣಿಮಾ, ಪ್ರವೀಣಾ, ಪ್ರೀತಿ ರವಿಕುಮಾರ, ಮಾನಸಿ, ಪರಂಜ್ಯೋತಿ, ರಾಜೇಶ್ವರಿ ಶಿವಕುಮಾರ, ಶಕುಂತಲಾ, ಉಷಾ, ವೇದಾ, ನಿರ್ಮಲಾ, ಮಂಜುಳಾ ನಿಲೇಶ, ರಜನಿ ಶ್ರೀನಿವಾಸ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ-ಬ್ಲಾಕ್ ಮತ್ತು ಎಂಸಿಸಿಬಿ-ಬ್ಲಾಕ್‍ನ ನಿವಾಸಿಗಳಾಗಿದ್ದು, ಸೇಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಈ ಬಾರಿ ಗೋವಾಕ್ಕೆ ಪ್ರವಾಸ ಹೊರಟಿದ್ದರು ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಗುರುಸಿದ್ದನಗೌಡರ ಪುತ್ರ ಡಾ.ರವಿಕುಮಾರ್ ಅವರ ಪತ್ನಿ ಪ್ರೀತಿ ರವಿಕುಮಾರ್, ಡಾ. ಪ್ರಕಾಶ್ ಮತ್ತಿಹಳ್ಳಿ ಅವರ ಪತ್ನಿ ಡಾ.ವೀಣಾಪ್ರಕಾಶ್ ಸಹ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಚಾಲಕರಿಬ್ಬರು ಸಹ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಏನಿದು ಘಟನೆ?: 15 ಮಂದಿ ಮಹಿಳೆಯರು ಬಾಲ್ಯ ಸ್ನೇಹಿತರಾಗಿದ್ದು, ತಮ್ಮದೇ ಆದ ಕ್ಲಬ್ ಸ್ಥಾಪಿಸಿಕೊಂಡಿದ್ದರು. ಪ್ರತಿವರ್ಷ ಸಂಕ್ರಾಂತಿ ದಿನದಂದು ಪ್ರವಾಸ ಕೈಗೊಳ್ಳುವ ಪರಿಪಾಠವಿಟ್ಟುಕೊಂಡಿದ್ದರು. ಇವರೆಲ್ಲರೂ ಪ್ರತಿಷ್ಠಿತ ಕುಟುಂಬಗಳ ಹಿನ್ನೆಲೆಯುಳ್ಳವರಾಗಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗೋವಾದಲ್ಲಿ ಸಂತೋಷಕೂಟ ಆಚರಿಸಲೆಂದು ಮಿನಿ ಬಸ್ಸಿನಲ್ಲಿ 17 ಜನರಿದ್ದ ಈ ತಂಡ ಶುಕ್ರವಾರ ನಸುಕಿನ 3:30ರ ಸುಮಾರಿಗೆ ದಾವಣಗೆರೆಯಿಂದ ಹೊರಟಿದ್ದರು.

ಹುಬ್ಬಳ್ಳಿ ಧಾರವಾಡ ನಡುವಿನ ಇಟ್ಟಿಗಟ್ಟಿ ಬಳಿಯ ಅಪಘಾತ ವಲಯದಲ್ಲಿ ವೇಗವಾಗಿ ನುಗ್ಗಿದ ಟಿಪ್ಪರ್ ಮಿನಿಬಸ್‍ಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಬಸ್ಸು ಸಂಪೂರ್ಣ ನುಜ್ಜುಗುಜ್ಜಾಗಿದೆ. ಏನಾಯಿತು ಎಂದು ಅರಿಯುವಷ್ಟರಲ್ಲೇ 14 ಜನರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಹೇಳಲಾಗುತ್ತಿದೆ.

ಟಿಪ್ಪರ್(ಕೆಎ22ಸಿ1649) ಹಾಗೂ ಮಿನಿ ಬಸ್(ಕೆಎ64–1316) ಚಾಲಕರಿಬ್ಬರೂ ಮೃತಪಟ್ಟಿದ್ದಾರೆ. ಧಾರವಾಡದ ಸ್ನೇಹಿತರೊಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿ ಮುಂದೆ ಗೋವಾದತ್ತ ಪ್ರಯಾಣ ಬೆಳೆಸುವ ಈ ಸ್ನೇಹಿತೆಯರ ಯೋಜನೆಯನ್ನು ವಿಧಿ ವಿಫಲಗೊಳಿಸಿದೆ. ಘಟನೆಯಲ್ಲಿ ನಾಲ್ಕೈದು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನು, ಘಟನಾ ಸ್ಥಳಕ್ಕೆ ಎಸ್ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error