ದ್ವೇಷದ ಹೇಳಿಕೆ ನೀಡಿದ ಟಿವಿ ವಾಹಿನಿಗಳ ವಿರುದ್ಧ ಕ್ರಮ: ಹೈಕೋರ್ಟ್ ಕದ ತಟ್ಟಿದ Campaign Against Hate Speech

ಕೊರೋನ ಹೆಸರಲ್ಲಿ ಪ್ರಚೋದನಾತ್ಮಕ ಕಾರ್ಯಕ್ರಮಗಳು

ಬೆಂಗಳೂರು: ತಬ್ಲೀಗಿ ಜಮಾತ್‍ನ ಹಲವು ಸದಸ್ಯರಿಗೆ ಕೊರೋನವೈರಸ್ ದೃಢಪಟ್ಟ ನಂತರ ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿ ‘ದ್ವೇಷಯುಕ್ತ ಹೇಳಿಕೆಗಳನ್ನು’ ನೀಡಿರುವ ಮಾಧ್ಯಮ ಸಂಸ್ಥೆಗಳು ಹಾಗೂ ರಾಜಕೀಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕೆಂದು ಕೋರಿ ರಾಜ್ಯ ಹೈಕೋರ್ಟಿನಲ್ಲಿ Campaign Against Hate Speech ಎಂಬ ಸಂಘಟನೆ ಸ್ಥಾಪಕರಾದ ಸಿದ್ಧಾರ್ಥ್ ಜೋಷಿ, ಎ ಆರ್ ವಾಸವಿ ಹಾಗೂ ಸ್ವಾತಿ ಶೇಷಾದ್ರಿ ಅವರ ಮೂಲಕ ಅಪೀಲು ಸಲ್ಲಿಸಿದೆ.

ಇಂತಹ ದ್ವೇಷದ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಮೂಲಭೂತ ಹಕ್ಕುಗಳ, ಮುಖ್ಯವಾಗಿ ಜೀವಿಸುವ ಹಾಗೂ ಜೀವನೋಪಾಯದ ಹಕ್ಕುಗಳ ಉಲ್ಲಂಘನೆಯಾಗಿದೆ  ಎಂದು ಅವರು ತಮ್ಮ ಅಪೀಲಿನಲ್ಲಿ ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ಜಸ್ಟಿಸ್ ಬಿ ವಿ ನಾಗರತ್ನ ಅವರ ನೇತೃತ್ವದ ಪೀಠಕ್ಕೆ ವಹಿಸುವಂತೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಸೋಮವಾರ ನ್ಯಾಯಾಲಯದ ರಿಜಿಸ್ಟ್ರಿಗೆ ಸೂಚಿಸಿದೆ.

‘ಕೊರೋನ ಸೂಪರ್ ಸ್ಪ್ರೆಡ್ಡರ್ಸ್… ಅವರಿಗೆ ಈ ಮಣ್ಣಿನಲ್ಲಿ ಬದುಕುವ ಹಕ್ಕಿಲ್ಲ’, `ನಾವು ಕೊರೋನ ವಿಲನ್‍ಗಳನ್ನು ಗುರುತಿಸಿದ್ದೇವೆ, ನಾವು ಮಾಡಬೇಕಾದದ್ದಿಷ್ಟೇ, ಮೊದಲನೆಯದಾಗಿ ಅವರನ್ನು ಪ್ರತ್ಯೇಕಿಸುವುದು, ಎರಡನೆಯದಾಗಿ ಅವರನ್ನು ಹಿಡಿದು, ಮೂರನೆಯದಾಗಿ ಶಿಕ್ಷಿಸಿ ಹಾಗೂ ಕೊನೆಯದಾಗಿ ಅವರನ್ನು ಸೋಲಿಸಬೇಕು ಹಾಗೂ ಇದು ದೊಡ್ಡ ಸಾಧನೆಯಾಗಬಹುದು’, ‘ಇದಕ್ಕೆ ಪಾಠ ಕಲಿಸಲು ಸರಕಾರ ಕಠಿಣ  ಕ್ಷಮೆಯಿಲ್ಲದ ಕ್ರಮಗಳನ್ನು ಕೈಗೊಳ್ಳಬೇಕು, ಅವರು ಹಣ ತೆರುವಂತೆ ಮಾಡಬೇಕು, ಅವರ ಆದಾಯ ಮೂಲವನ್ನು ನಾಶಪಡಿಸಬೇಕು. ಅವರ ಮೇಲೆ ದೊಡ್ಡ ದಂಡ ಹೇರಬೇಕು ಹಾಗೂ ಅವರ ನಾಯಕರನ್ನು ಜೈಲಿಗಟ್ಟಬೇಕು’ ಎಂದು ಕೆಲ ಖಾಸಗಿ ಟಿವಿ ವಾಹಿನಿಗಳು ನೀಡಿದ್ದ ಪ್ರಚೋದನಾತ್ಮಕ ಹೇಳಿಕೆಗಳತ್ತ ಅಪೀಲಿನಲ್ಲಿ ಗಮನ ಸೆಳೆಯಲಾಗಿದೆ.

ಪ್ರಚೋದನಾತ್ಮಕ ಹೇಳಿಕೆಗಳನ್ನು ಮಾಡಿರುವ ಟಿವಿ ವಾಹಿನಿಗಳ ಹಾಗೂ ರಾಜಕೀಯ ನಾಯಕರುಗಳ ವಿರುದ್ಧ  ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಬೇಕು ಹಾಗೂ ಕೇಬಲ್ ಟಿವಿ ಜಾಲ ನಿಯಮ 1995 ಹಾಗೂ ಕೇಬಲ್ ಜಾಲ ನಿಯಮಗಳು 1994 ಮತ್ತಿತರ ಸುತ್ತೋಲೆಗಳನ್ನು ಉಲ್ಲಂಘಿಸಿದ ವಾಹಿನಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಆದೇಶಿಸಬೇಕು ಎಂದು ಅಪೀಲಿನಲ್ಲಿ ಕೋರಲಾಗಿದೆ.

Please follow and like us:
error