ದೇಶ ಕಂಡ ‘ಮಹಾನ್ ಸುಳ್ಳುಗಾರ’ ಪ್ರಧಾನಿ ಮೋದಿ: ರಾಜ್ ಠಾಕ್ರೆ ಟೀಕೆ

ಮುಂಬೈ, ಸೆ.30: ದೇಶದ ಇತಿಹಾಸದಲ್ಲೇ ನರೇಂದ್ರ ಮೋದಿಯಷ್ಟು ಮಹಾನ್ ಸುಳ್ಳುಗಾರ ಪ್ರಧಾನಿಯನ್ನು ಇದುವರೆಗೆ ಕಂಡಿಲ್ಲ ಎಂದು ‘ಮಹಾರಾಷ್ಟ್ರ ನವನಿರ್ಮಾಣ್ ಸೇನೆ’ಯ ಅಧ್ಯಕ್ಷ ರಾಜ್‌ಠಾಕ್ರೆ ಟೀಕಿಸಿದ್ದಾರೆ.

ನರೇಂದ್ರ ಮೋದಿ ಬಹುದೊಡ್ಡ ಸುಳ್ಳುಗಾರ ಎಂದು ದೂಷಿಸಿದ ಠಾಕ್ರೆ, 2014ರ ಲೋಕಸಭಾ ಚುನಾವಣೆ ಸಂದರ್ಭ ನೀಡಿದ್ದ ಎಲ್ಲಾ ಹೇಳಿಕೆ, ಭರವಸೆಗಳನ್ನೂ ಆ ಬಳಿಕ ಬದಲಾಯಿಸಿದ್ದಾರೆ. ಇಂತಹ ಬಹುದೊಡ್ಡ ಸುಳ್ಳುಗಾರ ಪ್ರಧಾನಿಯನ್ನು ದೇಶ ಇದುವರೆಗೆ ಕಂಡಿಲ್ಲ. ದೊಡ್ಡ ದೊಡ್ಡ ಭರವಸೆ ನೀಡುವುದು, ಬಳಿಕ, ಅದೆಲ್ಲಾ ಚುನಾವಣೆಯ ಲೆಕ್ಕಕ್ಕೆ ಎಂದು ಹೇಳಿಕೆ ನೀಡುವುದು . ಓರ್ವ ವ್ಯಕ್ತಿ ಈ ಪ್ರಮಾಣದಲ್ಲಿ ಸುಳ್ಳು ಹೇಳಲು ಸಾಧ್ಯವೇ ಎಂದು ಜನ ಬೆರಗಾಗಿದ್ದಾರೆ ಎಂದು ಠಾಕ್ರೆ ಹೇಳಿದರು.

ಎಲ್ಫಿನ್‌ಸ್ಟೋನ್ ರೈಲುನಿಲ್ದಾಣದ ಮೇಲ್ಸೇತುವೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 23 ಮಂದಿ ಬಲಿಯಾದ ಘಟನೆಯ ಬಗ್ಗೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ತೀವ್ರ ತರಾಟೆಗೆತ್ತಿಕೊಂಡಿರುವ ರಾಜ್‌ಠಾಕ್ರೆ, ಮೊದಲು ರೈಲ್ವೇ ಸ್ಟೇಷನ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳಿಸಿ, ಆ ಮೇಲೆ ಬುಲೆಟ್ ಟ್ರೈನ್ ಬಗ್ಗೆ ಚಿಂತಿಸಿ ಎಂದು ಹೇಳಿದ್ದಾರೆ.

ಮುಂಬೈ ರೈಲುಮಾರ್ಗ ಹಾಗೂ ರೈಲ್ವೇ ಮೇಲ್ಸೇತುವೆಗಳಲ್ಲಿರುವ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಿ. ನರೇಂದ್ರ ಮೋದಿ ಇಚ್ಚಿಸುವುದಾದರೆ ಬುಲೆಟ್ ಟ್ರೈನನ್ನು ಗುಜರಾತ್‌ನಲ್ಲೇ ನಿರ್ಮಿಸಿಕೊಳ್ಳಲಿ. ಮೂಲಸೌಕರ್ಯ ಅಭಿವೃದ್ಧಿಯಾಗದೆ ಯೋಜನೆಗೆ ಒಂದು ಇಟ್ಟಿಗೆ ಇಡಲೂ ಬಿಡುವುದಿಲ್ಲ. ಅವರು ಬಲ ಪ್ರಯೋಗಿಸಿದರೆ ನಾವು ಕೂಡಾ ಪ್ರತ್ಯುತ್ತರ ನೀಡುತ್ತೇವೆ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೇ ಸಚಿವರಾಗಿದ್ದ ಸುರೇಶ್ ಪ್ರಭುರನ್ನು ಬದಲಿಸಿ ಗೋಯೆಲ್‌ರನ್ನು ನೇಮಿಸಿರುವುದು ಕೇವಲ ಬುಲೆಟ್ ಟ್ರೈನ್‌ಗಾಗಿ ಮಾತ್ರ. ಗೋಯೆಲ್ ನಿಷ್ಪ್ರಯೋಜಕ ವ್ಯಕ್ತಿ ಎಂದು ಠಾಕ್ರೆ ಹೇಳಿದರು

Please follow and like us:
error