ದೇಶಾದ್ಯಂತ ಸಿಎಎ, ಎನ್‌ಆರ್‌ಸಿ ಅನುಷ್ಠಾನಗೊಳಿಸಲಾಗುವುದು: ಬಿಜೆಪಿ ಕಾರ್ಯಾಧ್ಯಕ್ಷ ನಡ್ಡಾ

ಹೊಸದಿಲ್ಲಿ, ಡಿ.20: ಕೆಲವು ರಾಜ್ಯ ಸರಕಾರಗಳು ರಾಷ್ಟ್ರವ್ಯಾಪಿ ರಾಷ್ಟ್ರೀಯ ನಾಗರಿಕ ನೋಂದಣಿ(ಎನ್‌ಆರ್‌ಸಿ)ಜಾರಿಗೊಳಿಸಲು ನಿರಾಕರಿಸುತ್ತಿರುವ ನಡುವೆ ಎನ್‌ಆರ್‌ಸಿ ಹಾಗೂ ಎಸಿಸಿಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸಲಾಗುವುದು ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಫ್ಘಾನಿಸ್ತಾನದ ನಿರಾಶ್ರಿತರನ್ನು ಭೇಟಿಯಾದ ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಕೆಲವು ರಾಜ್ಯಗಳು ಎನ್‌ಆರ್‌ಸಿ ಜಾರಿಗೆ ತರಲು ನಿರಾಕರಿಸುತ್ತಿವೆ. ಜೆಡಿ(ಯು)ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಬಿಜೆಪಿ ವರಿಷ್ಠ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷಗಳು ಸಂಸತ್ತಿನಲ್ಲಿ ಸಿಎಬಿ ಪರ ಮತ ಚಲಾಯಿಸಿದ್ದವು. ಆದರೆ, ತಮ್ಮ ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ.

‘‘ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಪೌರತ್ವ(ತಿದ್ದುಪಡಿ)ಕಾಯ್ದೆಯನ್ನು ಜಾರಿಗೊಳಿಸಲಾಗುವುದು, ಭವಿಷ್ಯದಲ್ಲಿ ಎನ್‌ಆರ್‌ಸಿಯನ್ನು ಅನುಷ್ಠಾನಕ್ಕೆ ತರಲಾಗುವುದು. ಪ್ರತಿಪಕ್ಷಗಳು ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿವೆ’’ ಎಂದು ನಡ್ಡಾ ಹೇಳಿದರು

Please follow and like us:
error