ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ-ಅಕ್ಷತಾ ಕೆ.ಸಿ.

ವಿಜಯಪುರ ಮಾ. ೨೫- ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಎಲ್ಲ ದಲಿತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು `ಅಸಾಮಾನ್ಯ ಕನ್ನಡತಿ’ ಪ್ರಶಸ್ತಿ ವಿಜೇತೆ ಹಾಗೂ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಅವರು ಹೇಳಿದರು.
ನಗರದ ಸಾರಿಪುತ್ರ ಬುದ್ಧವಿಹಾರದಲ್ಲಿ ಬುದ್ಧವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾ, ಬಹುಜನ ನಾಯಕ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ದೇಶದ ಜನತೆಗೆ ನೆಮ್ಮದಿಯ ಜೀವನ ನೀಡುವ ಎಲ್ಲ ಸೂತ್ರಗಳು ಸಂವಿಧಾನದಲ್ಲಿವೆ. ಜನಸಾಮಾನ್ಯರ ಎಲ್ಲ ಸಮಸ್ಯೆಗಳ ಅರಿವಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲ ಜಾತಿಗಳ, ಎಲ್ಲ ಧರ್ಮಗಳ, ಎಲ್ಲ ಮತಗಳ ಜನರನ್ನು ಸಮಾನದೃಷ್ಟಿಯಿಂದ ನೋಡಿ ಅತ್ಯುತ್ತಮ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ನಮ್ಮ ಸಂವಿಧಾನದ ತಳಪಾಯಗಳಾಗಿವೆ ಎಂದು ಹೇಳಿದರು.
ನಮ್ಮ ಸಂವಿಧಾನವನ್ನು ಯಥಾವತ್ತಾಗಿ ಜಾರಿಯಾಗಿದ್ದರೆ ಇಂದು ಯಾವುದೇ ಹೋರಾಟಗಳ ಅವಶ್ಯಕತೆಯಿರುತ್ತಿರಲಿಲ್ಲ. ದಲಿತ ಚಳವಳಿ, ರೈತ ಚಳವಳಿ, ಮಹಿಳಾ ಚಳವಳಿ, ಕಾರ್ಮಿಕ ಚಳವಳಿ ಇತ್ಯಾದಿ ಚಳವಳಿಗಳು ಹುಟ್ಟಿಕೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೆ ದೇಶವನ್ನು ಆಳಿದ ಸರಕಾರಗಳು ಸಂವಿಧಾನವನ್ನು ಜಾರಿಗೊಳಿಸುವ ಪ್ರಯತ್ನ ಮಾಡಿಲ್ಲ. ಯಾಕೆಂದರೆ ದೇಶದ ಜನರು ಸಮಸ್ಯೆಗಳ ಸುಳಿಯಲ್ಲೇ ಕೊಳೆಯಬೇಕೆಂಬುದು ಆಳುವ ಸರಕಾರಗಳ ಮಸಲತ್ತಾಗಿದೆ ಎಂದು ಅಕ್ಷತಾ ಹೇಳಿದರು.
ನಮ್ಮ ಸಂವಿಧಾನದಲ್ಲಿ ಏನಿದೆ ಎಂಬುದೇ ದೇಶದ ಜನತೆಗೆ ಗೊತ್ತಿಲ್ಲ. ನಮ್ಮ ದೇಶದ ಬಡವರಿಗಾಗಿ, ದುರ್ಬಲರಿಗಾಗಿ, ಮಹಿಳೆಯರಿಗಾಗಿ, ಕಾರ್ಮಿಕರಿಗಾಗಿ ಸಂವಿಧಾನವು ಏನೇನು ಸವಲತ್ತುಗಳನ್ನು ನೀಡಿದೆ ಎಂಬುದರ ಅರಿವಿಲ್ಲ. ಮನೆಮನೆಗೆ ಸಂವಿಧಾನವನ್ನು ತಲುಪಿಸುವ ಜವಾಬ್ದಾರಿ ದಲಿತ ಸಂಘಟನೆಗಳ ಮೇಲಿದೆ. ದಲಿತ ಸಂಘಟನೆಗಳು ಪರಸ್ಪರ ಭಿನ್ನಾಭಿಪ್ರಾಯಗಳನ್ನು ತೊರೆದು ಸಂವಿಧಾನ ಉಳಿಸಬೇಕಿದೆ ಎಂದು ಹೇಳಿದರು.
ಅರಿವಿನ ಕೊರತೆಯಿಂದಾಗಿ ಕೆಲವು ದಲಿತ ಸಮುದಾಯಗಳು ಮತ್ತು ನಾಯಕರು ತಮ್ಮ ಸ್ವಾರ್ಥಕ್ಕೋಸ್ಕರ ಕೋಮುವಾದಿಗಳ ಬಣ್ಣದ ಮಾತಿಗೆ ಮರುಳಾಗಿ ಅವರನ್ನು ಅನುಸರಿಸುತ್ತಿದ್ದು, ಮನುವಾದವನ್ನು ಬೆಂಬಲಿಸುತ್ತಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್ ಅವರು ಜನಾಂಗದ ಉದ್ಧಾರಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿರುವುದನ್ನು ಯಾರೂ ಮರೆಯಬಾರದು. ನಮ್ಮನ್ನು ಉದ್ಧಾರ ಮಾಡುವುದು ಭೀಮಮಾರ್ಗವೇ ಹೊರತು ರಾಮಮಾರ್ಗವಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಆರ್. ತೊರವಿ ಮಾತನಾಡಿ, ಮಂಗಳಮುಖಿಯಾಗಿ ಅಕ್ಷತಾ ಕೆ.ಸಿ. ಅವರ ಸಾಮಾಜಿಕ ಕಳಕಳಿ ಮತ್ತು ಅಂಬೇಡ್ಕರ್ ಸಿದ್ಧಾಂತದ ಉಳಿವಿಗಾಗಿ ಮಾಡುತ್ತಿರುವ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಎಲ್ಲ ದಲಿತ ಸಂಘಟನೆಗಳು ಸಮಾನ ಉದ್ದೇಶಗಳಿಗಾಗಿ ಒಂದೇ ವೇದಿಕೆಗೆ ಬರುವ ಅಗತ್ಯವಿದೆ ಎಂದು ಹೇಳಿದರು.
ಸಂವಿಧಾನವು ನೀಡಿದ ಮೀಸಲಾತಿಯ ಮೂಲಕ ಸಮಾಜದಲಿ ಗೌರವ ಪ್ರತಿಷ್ಠೆಗಳನ್ನು ಗಳಿಸಿಕೊಂಡ ವರ್ಗವು ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗದೆ ಸಾಮಾನ್ಯ ದಲಿತರಿಗೆ ಗೌರವದ ಬದುಕನ್ನು ಕಟ್ಟಿಕೊಡುವ ದಿಸೆಯಲ್ಲಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಗೋವರ್ಧನ ಚಲವಾದಿ ವೇದಿಕೆಯ ಮೇಲಿದ್ದರು. ಡಾ. ಸುಜಾತಾ ಚಲವಾದಿ ಅವರು ಅಕ್ಷತಾ ಕೆ.ಸಿ. ಅವರನ್ನು ಶಾಲು ಹೊದಿಸಿ ಗೌರವಿಸಿದರು. ಛಲವಾದಿ ಮಹಾಸಭಾ ಅಧ್ಯಕ್ಷ ಹಾಗೂ ನಿವೃತ್ತ ಎಸ್.ಪಿ. ಸಂಗಪ್ಪ ಚಲವಾದಿ ಮತ್ತು ಚಿದಾನಂದ ನಿಂಬಾಳ ಅವರು ಸನ್ಮಾನಪತ್ರ ಸಮರ್ಪಿಸಿದರು.
ಭಾರತೀಯ ಜೈಭೀಮ ದಳ ಅಧ್ಯಕ್ಷ ನಾಗರಾಜ ಲಂಬು, ಬುದ್ಧವಿಹಾರ ನಿರ್ಮಾಣ ಸಮಿತಿಯ ಸಾಬು ಚಲವಾದಿ, ಸಂಜ್ಯೋತ ಔದಿ, ಭಾರತೀಯ ಬೌದ್ಧಮಹಾಸಭಾದ ವೆಂಕಟೇಶ ವಗ್ಯಾನವರ, ಸಮಾಜದ ಮುಖಂಡರಾದ ಬಸವರಾಜ ಬ್ಯಾಳಿ, ಎಂ.ಬಿ. ಹಳ್ಳದಮನಿ, ಭೀಮಶಿ ಹಿಪ್ಪರಗಿ, ಕೆ.ಎಂ. ಶಿವಶರಣ, ದಿಲೀಪ ಯಂಭತ್ನಾಳ, ಸಂಘರ್ಷ ಹೊಸಮನಿ, ಅನಿಲರಾಜ ಕಕ್ಕಳಮೇಲಿ, ಗೋಪಾಲ ಅಥರ್ಗಾ, ಸುರೇಶ ಕ್ಯಾತನ್, ಯಲ್ಲಪ್ಪ ಡೊಮನಾಳ, ರುದ್ರಪ್ಪ ಬನಸೋಡೆ, ರಾಜು ಲಂಬು, ಸಂಗಮೇಶ ಸಂಕ, ಪ್ರದೀಪ ಕ್ಯಾತನ್, ಮಹಿಳಾ ಮುನ್ನಡೆ ಸಂಘಟನೆಯ ಕಾವ್ಯಾ ಸಮತಳ, ಕಲ್ಪನಾ ಪೋಳ, ಪ್ರಗತಿಪರ ಚಿಂತಕ ಸದಾನಂದ ಮೋದಿ, ನವಸ್ಫೂರ್ತಿ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ಶಬ್ಬೀರಅಹ್ಮದ ಕಾಗಜಕೋಟಿ, ಚೆನ್ನಬಸಪ್ಪ ತೆಲಗಾರ, ಇಸ್ಮಾಯಿಲ್ ಬಿದರಿಕೋಟಿ, ಈರಣ್ಣ ಲಗಳಿ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತ ಅನಿಲ ಹೊಸಮನಿ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಸಂತೋಷ ಶಹಾಪುರ ಕೊನೆಯಲ್ಲಿ ವಂದಿಸಿದರು.

Please follow and like us:
error