ದೇಶದಲ್ಲಿ ಕೊರೋನ ಸೋಂಕಿಗೆ ಒಂದೇ ದಿನ 16 ಬಲಿ

ಹೊಸದಿಲ್ಲಿ: ದೇಶದಲ್ಲಿ ಶುಕ್ರವಾರ 16 ಮಂದಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಈ ಸಾಂಕ್ರಾಮಿಕದಿಂದ ಜೀವ ಕಳೆದುಕೊಂಡವರ ಸಂಖ್ಯೆ 85ಕ್ಕೇರಿದೆ. ಅಂತೆಯೇ ಸತತ ಎರಡನೇ ದಿನವೂ 500ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 3,000ದ ಗಡಿ ದಾಟಿದೆ. ದೇಶದಲ್ಲಿ ಶುಕ್ರವಾರ ಮಧ್ಯರಾತ್ರಿವರೆಗೆ ಸೋಂಕಿತರ ಸಂಖ್ಯೆ 3082 ಆಗಿದೆ.

ಶುಕ್ರವಾರ ಮಹಾರಾಷ್ಟ್ರದಲ್ಲಿ 3, ದೆಹಲಿ, ತೆಲಂಗಾಣದಲ್ಲಿ ತಲಾ 2, ಆಂಧ್ರಪ್ರೇಶ, ಮಧ್ಯಪ್ರದೇಶ, ಹರ್ಯಾಣ, ಕರ್ನಾಟಕ ಹಾಗೂ ಗುಜರಾತ್‍ನಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಶುಕ್ರವಾರ 502 ಪ್ರಕರಣಗಳು ದೃಢಪಟ್ಟಿದ್ದು, ಗುರುವಾರದ ಸಂಖ್ಯೆ (544)ಗೆ ಹೋಲಿಸಿದರೆ ಇದು ಕಡಿಮೆ. ಶುಕ್ರವಾರ ದೃಢಪಟ್ಟ ಪ್ರಕರಣ ಪೈಕಿ ಪೈಕಿ 280 ಪ್ರಕರಣಗಳು ತಬ್ಲೀಗ್ ಜಮಾತ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರು.

ಕಳೆದ ಎರಡು ದಿನಗಳಲ್ಲಿ 14 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ವರದಿಯಾದ ಪ್ರಕರಣಗಳ ಪೈಕಿ 647 ಪ್ರಕರಣಗಳು ಜಮಾತ್ ಸಮ್ಮೇಳನದ ಜತೆ ನಂಟು ಹೊಂದಿವೆ. ದೇಶದಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್ ಹಾಗೂ ಸಾಮಾಜಿಕ ಅಂತರದ ಕ್ರಮಗಳಿಗೆ ಇದು ದೊಡ್ಡ ಹೊಡೆತ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಕಳೆದ ಕೆಲ ದಿನಗಳಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೆ ಮೂಲಭೂತವಾಗಿ ನಿರ್ದಿಷ್ಟ ಹಂತದಲ್ಲಿ ಏರಿಕೆಯಾಗಿರುವುದು ಇದಕ್ಕೆ ಕಾರಣ” ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‍ವಾಲ್ ಹೇಳಿದ್ದಾರೆ.

ಶುಕ್ರವಾರ ತಮಿಳುನಾಡಿನಲ್ಲಿ ಗರಿಷ್ಠ (102) ಪ್ರಕರಣಗಳು ದೃಢಪಟ್ಟಿವೆ. ತೆಲಂಗಾಣದಲ್ಲಿ 80, ಉತ್ತರ ಪ್ರದೇಶದಲ್ಲಿ 48 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕ್ರಮವಾಗಿ 100, 78 ಹಾಗೂ 42 ಪ್ರಕರಣಗಳು ನಿಝಾಮುದ್ದೀನ್ ಧಾರ್ಮಿಕ ಸಭೆಯ ಜತೆ ಸಂಪರ್ಕ ಹೊಂದಿವೆ ಎನ್ನಲಾಗಿದೆ. ದೆಹಲಿಯಲ್ಲಿ 93 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 52 ಜಮಾತ್ ಸಮ್ಮೇಳನಕ್ಕೆ ಸಂಬಂಧಿಸಿದವು ಎಂದು ತಿಳಿದು ಬಂದಿದೆ.

Please follow and like us:
error