ದೇಶದಲ್ಲಿ ಒಂದೇ ದಿನ 5,200 ಕೊರೋನ ವೈರಸ್ ಪ್ರಕರಣ ಪತ್ತೆ

ಹೊಸದಿಲ್ಲಿ : ದೇಶದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ ಬೆನ್ನಲ್ಲೇ ಮಂಗಳವಾರ ಒಂದೇ ದಿನ ದೇಶಾದ್ಯಂತ 5200 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದ ಪ್ರಕರಣಗಳು ಬೆಳಕಿಗೆ ಬಂದಿರುವುದು ಇದೇ ಮೊದಲು.

ಕೊರೋನ ಸೋಂಕಿತರ ಸಾವಿನ ಸಂಖ್ಯೆಯೂ ಏರುಗತಿಯಲ್ಲಿದ್ದು, ಮಂಗಳವಾರ ವಿವಿಧ ರಾಜ್ಯಗಳಲ್ಲಿ ಒಟ್ಟು 146 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ ಅರ್ಧದಷ್ಟು ಅಂದರೆ 73 ಸಾವು ಮಹಾರಾಷ್ಟ್ರದಲ್ಲೇ ಸಂಭವಿಸಿದ್ದು, ಗುಜರಾತ್‌ನಲ್ಲಿ 25 ಮಂದಿ ಬಲಿಯಾಗಿದ್ದಾರೆ.

ಸತತ ಮೂರನೇ ದಿನ ಮಹಾರಾಷ್ಟ್ರದಲ್ಲಿ 2000ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ದಾಖಲಾದ ಒಟ್ಟು 2127 ಪ್ರಕರಣಗಳ ಪೈಕಿ ಮುಂಬೈ ಮಹಾನಗರದ 1411 ಪ್ರಕರಣಗಳು ಸೇರಿವೆ. ಈ ಮಧ್ಯೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 40 ಸಾವಿರ ದಾಟಿದ್ದು, 42071 ಮಂದಿ ಗುಣಮುಖರಾಗಿದ್ದಾರೆ. ಕೊರೋನ ಸೋಂಕಿತರ ಪೈಕಿ ಗುಣಮುಖರಾದವರ ಪ್ರಮಾಣ ಶೇಕಡ 39.8ರಷ್ಟಾಗಿದೆ.

ಗರಿಷ್ಠ ಸಂಖ್ಯೆಯ ಪ್ರಕರಣಗಳು ಪತ್ತೆಯಾದ ರಾಜ್ಯಗಳ ಪೈಕಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಅಲ್ಲಿ ಮಂಗಳವಾರ 688 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ದುಬೈನಿಂದ ತಮಿಳುನಾಡಿಗೆ ಆಗಮಿಸಿದ ಒಂದು ವಿಮಾನದಲ್ಲಿದ್ದ 23 ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿದೆ. ಹೊಸ ಪ್ರಕರಣಗಳ ಪೈಕಿ 87 ಪ್ರಕರಣಗಳು ವಿದೇಶದಿಂದ ಅಥವಾ ಬೇರೆ ರಾಜ್ಯಗಳಿಂದ ಆಗಮಿಸಿದವರು. ಚೆನ್ನೈನಲ್ಲಿ 552 ಪ್ರಕರಣಗಳು ವರದಿಯಾಗಿದ್ದು, ಹಾಟ್‌ಸ್ಪಾಟ್ ಆಗಿ ಮುಂದುವರಿದಿದೆ.

ದೆಹಲಿಯಲ್ಲಿ 500 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 10,554ಕ್ಕೇರಿದೆ. ರಾಜಸ್ಥಾನ (338), ಉತ್ತರ ಪ್ರದೇಶ (292), ಕರ್ನಾಟಕ (149) ಮತ್ತು ಅಸ್ಸಾಂಗಳಲ್ಲಿ ಕೂಡಾ ಗರಿಷ್ಠ ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬಂದಿವೆ.

ದೇಶದಲ್ಲಿ ಒಟ್ಟು 3,300 ಮಂದಿ ಈ ಮಾರಕ ಸೋಂಕಿಗೆ ಬಲಿಯಾಗಿದ್ದು, 1325 ಮಂದಿ ಮಹಾರಾಷ್ಟ್ರದಲ್ಲೇ ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ 719, ಮಧ್ಯಪ್ರದೇಶದಲ್ಲಿ 259, ದೆಹಲಿಯಲ್ಲಿ 166, ರಾಜಸ್ಥಾನದಲ್ಲಿ 143, ಉತ್ತರ ಪ್ರದೇಶದಲ್ಲಿ 123 ಮತ್ತು ತಮಿಳುನಾಡಿನಲ್ಲಿ 84 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ ಇತರೆಡೆಗಳಲ್ಲಿ ಒಟ್ಟು 481 ಮಂದಿ ಸಾವನ್ನಪ್ಪಿದ್ದಾರೆ.

Please follow and like us:
error