ದೇಶದಲ್ಲಿ ಒಂದೇ ದಿನ 124 ಹೊಸ ಕೊರೋನ ಪ್ರಕರಣ

ಹೊಸದಿಲ್ಲಿ, ಮಾ.28: ಭಾರತದಲ್ಲಿ ಕೊರೋನ ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ದೊಡ್ಡ ಸಂಖ್ಯೆಯ ಅಂದರೆ 124 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 850ನ್ನು ತಲುಪಿದಂತಾಗಿದೆ. ಇದುವರೆಗೆ ಮಾ.23ರಂದು ದಾಖಲಾದ 99 ಪ್ರಕರಣಗಳು ಒಂದು ದಿನದ ಗರಿಷ್ಠ ಪ್ರಕರಣಗಳಾಗಿದ್ದವು.

ಗುರುವಾರ ಕೇರಳದಲ್ಲಿ 39 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಕಾಸರಗೋಡು ಜಿಲ್ಲೆಯೊಂದರಲ್ಲೇ 34 ಪ್ರಕರಣಗಳು ವರದಿಯಾಗಿವೆ. ಕೇರಳ, ಪ್ರತಿ ಜಿಲ್ಲೆಯಲ್ಲೂ ಕೊರೋನ ಕಾಣಿಸಿಕೊಂಡ ದೇಶದ ಮೊಟ್ಟಮೊದಲ ರಾಜ್ಯ ಎನಿಸಿದೆ. ಆರೋಗ್ಯ ಸಚಿವಾಲಯ 818 ಕೋವಿಡ್-19 ಪ್ರಕರಣಗಳನ್ನು ದೃಢಪಡಿಸಿದ್ದು, 67 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ ಎಂದು ಹೇಳಿದೆ.

ರಾಜಸ್ಥಾನದ ಭಿಲ್ವಾರದಲ್ಲಿ ಎರಡು ದಿನಗಳಲ್ಲಿ ಎರಡನೇ ಕೊರೋನ ಸಾವು ಸಂಭವಿಸಿದೆ. ಕರ್ನಾಟಕದ ತುಮಕೂರಿನಲ್ಲಿ ಒಂದು ಸಾವು ದಾಖಲಾಗಿದೆ. ಮುಂಬೈನಲ್ಲಿ 85 ವರ್ಷದ ಮೂತ್ರಶಾಸ್ತ್ರಜ್ಞ ಹಾಗೂ ಶಸ್ತ್ರಚಿಕಿತ್ಸಕ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ವೈದ್ಯನ ಆರೋಗ್ಯ ಪರೀಕ್ಷೆ ನಡೆಸಿದ ವರದಿ ಇನ್ನೂ ಬಂದಿಲ್ಲ.

ಮತ್ತೊಂದು ಶಂಕಿತ ಸಾವು ದಿಲ್ಲಿಯಲ್ಲಿ ಸಂಭವಿಸಿದ್ದು, 60 ವರ್ಷ ವಯಸ್ಸಿನ ಈ ಯೆಮನ್ ಪ್ರಜೆ ದಿಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಆರೋಗ್ಯ ಪರೀಕ್ಷೆಯ ಫಲಿತಾಂಶ ಕೂಡಾ ನಿರೀಕ್ಷಿಸಲಾಗಿದೆ.

ಮುಂಬೈನಲ್ಲಿ 17 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸಾಂಗ್ಲಿ ಸಮೀಪದ ಇಸ್ಲಾಂಪುರದಲ್ಲಿ ಒಂದೇ ಕುಟುಂಬದ 12 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 14ರಂದು ಸೌದಿ ಅರೇಬಿಯಾದಿಂದ ಆಗಮಿಸಿದ ಈ ಕುಟುಂಬದ ನಾಲ್ಕು ಮಂದಿಯಲ್ಲಿ ರೋಗ ಇರುವುದು ಪತ್ತೆಯಾಗಿತ್ತು. ಈ ಕುಟುಂಬದ ಒಟ್ಟು 24 ಮಂದಿಗೆ ಸೋಂಕು ತಗುಲಿದಂತಾಗಿದೆ. ದಿಲ್ಲಿಯಲ್ಲಿ ಒಟ್ಟು 40 ಪ್ರಕರಣಗಳು ವರದಿಯಾಗಿವೆ.

ಈ ಮಧ್ಯೆ ಕರ್ನಾಟಕದಲ್ಲಿ ಮೊಟ್ಟಮೊದಲ ಕೊರೋನ ಪ್ರಕರಣ ಎನಿಸಿದ್ದ 46 ವರ್ಷದ ವ್ಯಕ್ತಿ ಹಾಗೂ ಆತನ 13 ವರ್ಷ ವಯಸ್ಸಿನ ಮಗಳು ಸಂಪೂರ್ಣ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಂಬತ್ತು ತಿಂಗಳ ಮಗುವಿನಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ದೇಶದಲ್ಲಿ ಕೋವಿಡ್-19 ಸೋಂಕು ತಗುಲಿದ ಅತ್ಯಂತ ಕಿರಿಯ ಮಗು ಎನಿಸಿಕೊಂಡಿದೆ. ಗುಜರಾತ್‌ನಲ್ಲಿ ಒಟ್ಟು 47 ಪ್ರಕರಣಗಳು ವರದಿಯಾಗಿವೆ.

Please follow and like us:
error