ದೆಹಲಿ ಗಲಭೆಗೆ ಅಮಿತ್ ಶಾ ಅವರೇ ನೇರ ಹೊಣೆ: ಸತ್ಯಶೋಧನಾ ಸಮಿತಿಯ ವರದಿ!

ಫೆಬ್ರವರಿ 24 ರಿಂದ ಹಿಂಸಾಚಾರ ಉಲ್ಬಣಗೊಂಡಾಗ ಕರ್ಫ್ಯೂ ಏಕೆ ವಿಧಿಸಲಾಗಿಲ್ಲ? ಸೈನ್ಯವನ್ನು ಏಕೆ ನಿಯೋಜಿಸಲಾಗಿಲ್ಲ? ದೆಹಲಿ ಪೊಲೀಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿಗಳ ಹೆಚ್ಚುವರಿ ನಿಯೋಜನೆಯು ಸಹ ಸಾಕಷ್ಟು ಅಸಮರ್ಪಕವಾಗಿದೆ…

ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೇ ನೇರಹೊಣೆ ಎಂದು ಸತ್ಯಶೋಧನ ಸಮಿತಿಯ ವರದಿ ಹೇಳಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್) ಬಿಡುಗಡೆಗೊಳಿಸಿರುವ ಸತ್ಯಶೋಧನಾ ವರದಿಯು, ಈ ವರ್ಷದ ಫೆಬ್ರವರಿಯಲ್ಲಿ 53 ಮಂದಿಯನ್ನು ಬಲಿ ಪಡೆದ ಈಶಾನ್ಯ ದಿಲ್ಲಿ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಣೆಗಾರರನ್ನಾಗಿಸಿದೆ. ಹಿಂಸೆ ಉಲ್ಬಣಗೊಳ್ಳಲು ಹಾಗೂ ಈ ಕುರಿತಾದ ಪೊಲೀಸ್ ತನಿಖೆ ಪೂರ್ವಾಗ್ರಹಪೀಡಿತವಾಗಲು ಕೂಡ ಶಾ ಅವರೇ ಕಾರಣ ಎಂದು ಈ ವರದಿ ಆರೋಪಿಸಿದೆ.

“ಮಾರ್ಚ್ 11, 2020 ರಂದು, ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಶಾ ಸಂಸತ್ತಿಗೆ ಮಾಹಿತಿ ನೀಡಿದ್ದರು. ಫೆಬ್ರವರಿ 24 ರಿಂದ ಹಿಂಸಾಚಾರ ಉಲ್ಬಣಗೊಂಡಾಗ ಕರ್ಫ್ಯೂ ಏಕೆ ವಿಧಿಸಲಾಗಿಲ್ಲ? ಸೈನ್ಯವನ್ನು ಏಕೆ ನಿಯೋಜಿಸಲಾಗಿಲ್ಲ? ಎಂಬುದು ಪ್ರಶ್ನೆ. ದೆಹಲಿ ಪೊಲೀಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿಗಳ ಹೆಚ್ಚುವರಿ ನಿಯೋಜನೆಯು ಸಹ ಸಾಕಷ್ಟು ಅಸಮರ್ಪಕವಾಗಿದೆ” ಎಂದು ವರದಿಯಲ್ಲಿ ವಿವರಿಸಲಾಗಿದೆ.

“ಕಮ್ಯುನಲ್ ವಯೋಲೆನ್ಸ್‌ ಇನ್ ನಾರ್ತ್ ಈಸ್ಟ್ ಡೆಲ್ಲಿ, ಫೆಬ್ರವರಿ 2020” ಎಂಬ ಶೀರ್ಷಿಕೆಯ ಈ ಸತ್ಯಶೋಧನಾ ವರದಿ ತಿಳಿಸಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

“ಈ ಮತೀಯ ಹಿಂಸಾಚಾರವನ್ನು ದಿಲ್ಲಿ ಹಿಂಸಾಚಾರ ಎಂದು ವರ್ಣಿಸುವುದು ತಪ್ಪು. ಎರಡೂ ಕಡೆಯವರೂ ಸಮಭಾಗಿಯಾಗಿ ನಡೆಸಿದ ಹಿಂಸಾಚಾರ ಎಂದು ಹೇಳಬಹುದು. ಆದರೆ ಇಲ್ಲಿ ಹಿಂದುತ್ವ ಗುಂಪುಗಳು ದಾಳಿ ನಡೆಸಿದರೆ ಇನ್ನೊಂದು ಸಮುದಾಯ ತನ್ನನ್ನು ದಾಳಿಗಳಿಂದ ರಕ್ಷಿಸಿಕೊಳ್ಳಲು ಯತ್ನಿಸಿದೆ. ಪೊಲೀಸರು ಹಿಂದುತ್ವ ಗುಂಪುಗಳ ಪರ ಇದ್ದರೆಂಬುದಕ್ಕೆ ಎಲ್ಲಾ ಕಡೆಗಳ ವೀಡಿಯೋ ಆಧಾರಗಳಿವೆ” ಎಂದು ವರದಿಯಲ್ಲಿ ವಿವರಿಸಲಾಗಿದೆ.

“ಬಿಜೆಪಿ ನಾಯಕರುಗಳಾದ ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕೂರ್ ಅವರ ಪ್ರಚೋದನಾತ್ಮಕ ಭಾಷಣಗಳು ಹಾಗೂ ಫೆಬ್ರವರಿ 21ರ ಶಿವರಾತ್ರಿ ಮೆರವಣಿಗೆಗಳ ವೇಳೆಯ ಪ್ರಚೋದನಾತ್ಮಕ ಘೋಷಣೆಗಳು ಕೂಡ ಹಿಂಸೆಗೆ ಕಾರಣವಾಯಿತು” ಎಂದು ಹೇಳಿದೆ. ಸಂತ್ರಸ್ತರಿಗೆ ಭಾಗಶಃ ಪರಿಹಾರ ನೀಡುವಲ್ಲಿನ ವಿಳಂಬಕ್ಕೆ ದೆಹಲಿಯ ಆಮ್ ಆದ್ಮಿ ಸರಕಾರವನ್ನೂ ದೂಷಿಸಿದ್ದು, ಘಟನೆ ಕುರಿತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಬೇಕೆಂದೂ ವರದಿಯಲ್ಲಿ ಆಗ್ರಹಿಸಲಾಗಿದೆ.

ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದಲ್ಲಿ 40 ಮುಸ್ಲಿಂ ಮತ್ತು 13 ಹಿಂದೂಗಳು ಸೇರಿದಂತೆ 53 ಜನರು ಕೊಲ್ಲಲ್ಪಟ್ಟಿದ್ದಾರೆ.

Courtesy : Naanugouri.com

Please follow and like us:
error