ದೆಹಲಿಯಲ್ಲಿ ರೈತರ ಮೇಲೆ ಪೊಲೀಸರ ದಾಳಿ ಆರಂಭ: ಲಾಠೀಚಾರ್ಚ್, ಅಶ್ರುವಾಯು ಪ್ರಯೋಗ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ ಮೇಲೆ ಪೊಲೀಸರ ದಾಳಿ ಆರಂಭವಾಗಿದೆ. ಸಿಂಘು ಗಡಿಯಿಂದ ಹೊರಟಿದ್ದ ರೈತರ ಮೇಲೆ ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರ್ ನಲ್ಲಿ ಲಾಠೀಚಾರ್ಚ್ ನಡೆದಿದ್ದು, ಅಶ್ರುವಾಯು ಸಿಡಿಸಲಾಗಿದೆ. ಟಿಕ್ರಿ ಮತ್ತು ಗಾಜಿಪುರ್ ಗಡಿಗಳಲ್ಲಿಯೂ ಸಹ ಪೊಲೀಸ್ ಬ್ಯಾರಿಕೇಡ್ ಮುರಿಯಲು ಯತ್ನಿಸಿದ ರೈತರ ಮೇಲೆ ಲಾಠೀ ಚಾರ್ಚ್ ನಡೆಸಲಾಗಿದೆ.

ಸಿಂಘು ಗಡಿಯಲ್ಲಿ ಇಂದು ಬೆಳಿಗ್ಗೆಯೇ ಆರಂಭವಾದ ಟ್ರ್ಯಾಕ್ಟರ್ ಪರೇಡ್ ಸುಮಾರು 50 ಕಿ.ಮೀ ದೆಹಲಿ ಒಳಗೆ ತಲುಪಿದ್ದು ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರ್ ನಲ್ಲಿ ಅವನ್ನು ತಡೆಯಲಾಗಿದೆ. ದೊಡ್ಡ ದೊಡ್ಡ ಕಂಟೈನರ್‌ಗಳನ್ನು ಅಡ್ಡ ನಿಲ್ಲಿಸಲಾಗಿದೆ. ಜಲಫಿರಂಗಿಗಳು ನಿಂತಿದ್ದು, ಅವುಗಳನ್ನು ತಳ್ಳಿ ಮುನ್ನುಗ್ಗುಲು ರೈತರು ಯತ್ನಿಸುತ್ತಿದ್ದಾರೆ.

ರೈತರು ಶಾಂತಿಯುತವಾಗಿಯೇ ರ್ಯಾಲಿ ನಡೆಸುತ್ತಿದ್ದರೂ ಪೊಲೀಸರು ಅವಕಾಶ ನೀಡುತ್ತಿಲ್ಲ. ಮಧ್ಯಾಹ್ನ 12 ಗಂಟೆ ನಂತರವೇ ಟ್ರ್ಯಾಕ್ಟರ್ ಪರೇಡ್ ನಡೆಸಿ ಎಂದು ಪೊಲೀಸರು ಹಠ ಹಿಡಿದಿದ್ದಾರೆ. ಆದರೆ ಪಟ್ಟುಬಿಡದ ರೈತರು ಬೆಳಿಗ್ಗೆ 8 ಗಂಟೆಯಿಂದಲೇ ಪರೇಡ್ ಆರಂಭಿಸಿದ್ದಾರೆ. ಲಕ್ಷಾಂತರ ಟ್ರ್ಯಾಕ್ಟರ್‌ಗಳು ಆಗಮಿಸಿರುವ ಕಾರಣ ಎಲ್ಲಾ ಟ್ರ್ಯಾಕ್ಟರ್‌ಗಳು ರ್ಯಾಲಿಯಲ್ಲಿ ಭಾಗವಹಿಸುವುದಕ್ಕೆ ಸುಮಾರು 72 ಗಂಟೆ ಬೇಕಾಗುತ್ತದೆ ಎಂದು ರೈತರು ಘೋಷಿಸಿದ್ದಾರೆ.

ಕರ್ನಲ್‌ನಲ್ಲಿ ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದು, ಪೊಲೀಸರು ಲಾಠೀ ಚಾರ್ಜ್ ಮಾಡಿದ್ದಾರೆ. ಒಟ್ಟಿನಲ್ಲೆ ಎಲ್ಲಾ ಕಡೆ ಪೊಲೀಸರು ದಾಳಿಗಿಳಿದಿರುವುದು ರೈತರನ್ನು ಕೆರಳಿಸಿದೆ. ಕೆಲವೆಡೆ ರೈತರು ಪೊಲೀಸರ ಜಲಫಿರಂಗಿಗಳನ್ನು ವಶಕ್ಕೆ ಪಡೆದಿದ್ದಾರೆ.

Please follow and like us:
error