ದಮ್ಮುಕಟ್ಟುವಿಕೆ, ಭಯ, ಏಕಾಕಿತನ ಕೊವಿಡ್ -19 ಸಾವು ಹೇಗಿರುತ್ತದೆ?

ಅಂಕಣಕಾರರು-ಸ್ಟೀವ್ ಲೋಪೆಜ್
ಕನ್ನಡಕ್ಕೆ: ರಾಜಾರಾಂ ತಲ್ಲೂರು
[ ಇಂದಿನ ಲಾಸ್ ಏಂಜಲ್ಸ್ ಟೈಮ್ಸ್ ನ ಅಂಕಣದ ಅನುವಾದ ಇದು. ಗಂಭೀರವಾದ ಕೊವಿಡ್ ಪ್ರಕರಣಗಳು ಹೇಗಿರುತ್ತವೆ ಎಂಬ ಚಿತ್ರಣ ನೀಡುವುದಕ್ಕಾಗಿ. ದಯವಿಟ್ಟು ಓದಿ. ಆದರೆ, ಓದುವ ಮೊದಲು ಗಮನಿಸಿ: ಈ ಲೇಖನದ ಉದ್ದೇಶ ನಿಮ್ಮನ್ನು ಭಯಬೀಳಿಸುವುದಲ್ಲ. ಕೊರೊನಾ ಸೋಂಕಿತರೆಲ್ಲ ಸಾಯುವುದಿಲ್ಲ. ಆದರೆ ಕೊರೊನಾಕ್ಕೆ ಸುಲಭತುತ್ತಾಗುವ ವಯಸ್ಕರು, ಬೊಜ್ಜು ದೇಹದವರು, ಮಧುಮೇಹ-ರಕ್ತದೊತ್ತಡದಂತಹ ದೇಹವ್ಯವಸ್ಥೆಯ ತೊಂದರೆಗಳಿರುವವರು, ಶ್ವಾಸಕೋಶಗಳ ದೀರ್ಘಕಾಲಿಕ ತೊಂದರೆ ಇರುವವರು, ಬೇರೆ ಗಂಭೀರ ಆರೋಗ್ಯ ಸಮಸ್ಯೆಗಳಿರುವವರು – ಇವರಲ್ಲಿ ನಿಮ್ಮ ಕುಟುಂಬಿಕರು, ಪ್ರೀತಿಪಾತ್ರರು ಇರಬಹುದು. ಅವರನ್ನು ಯಾಕೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು, ಅವರಿಗೆ ಸೋಂಕು ತಗುಲದಂತೆ ನಾವು ಏಕೆ ಎಚ್ಚರ ವಹಿಸಬೇಕು ಎಂಬುದಕ್ಕೆ ಇದು ಕಾರಣವಾದೀತು.]

 

ಅವರು ಅಂಗಲಾಚುತ್ತಾರೆ, ಎದೆಹೊಡೆದುಕೊಳ್ಳುತ್ತಾರೆ, ಅವರ ಕಣ್ಣುಗಳಲ್ಲಿ ಭಯ ಮರಗಟ್ಟಿರುತ್ತದೆ.

“ಹಾಸಿಗೆಯ ಮೇಲೆ ಕುಳಿತಲ್ಲೇ ಪೂರ್ಣ ವೇಗದಲ್ಲಿ ಮ್ಯಾರಥಾನ್ ಓಡುತ್ತಿರುವಂತೆ ದಮ್ಮು ಬಿಡುತ್ತಾರೆ.” ಎಂದು ವಿವರಿಸುತ್ತಾರೆ ಡಾ|ಅಡುಪಾ ರಾವ್, ಕೆಕ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಮತ್ತು ತುರ್ತು ಚಿಕಿತ್ಸಾ ಪರಿಣತ.

“ಅವರ ಉಸಿರಾಟ ಎಷ್ಟು ಆಳ ಮತ್ತು ವೇಗವಾಗಿರುತ್ತದೆಂದರೆ ಪ್ರತೀ ಉಸಿರಿಗೂ ಅವರು ಶ್ರಮ ಹಾಕಬೇಕಾಗುತ್ತದೆ. ಅದು ಬಹುತೇಕ ನೀರಿನಿಂದ ಹೊರಬಿದ್ದ ಚೆಮ್ಮೀನಿನ ತೊಳಲಾಟದಂತೆ. ಅವರಿಗೆ ಬೇಕಾದಷ್ಟು ಗಾಳಿ ಸಿಕ್ಕೇಇಲ್ಲ ಎನ್ನುವಂತೆ.”

ವೆರ್ದುಗೊ ಹಿಲ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಯ ನರ್ಸ್ ಮನ್ನಿ ಕೊಡದಾಡಿ ಅವರು, ತಾನು ಕಂಡದ್ದನ್ನು ಹೀಗೆ ವಿವರಿಸುತ್ತಾರೆ.
ರೋಗಿಗಳಿಗೆ “ನೀರಿನಡಿ ಉಸಿರಾಡಿದಂತೆ, ಅವರು ಆಳದಿಂದ ಮೇಲ್ಭಾಗಕ್ಕೆ ಈಜಿ ಬರುತ್ತಿರುತ್ತಾರೆ ಆದರೆ ನೀರಿನಿಂದ ಹೊರಗೆ ಮೂಗು ತರಲಾಗದ ಸ್ಥಿತಿ.” ಕಳೆದ ಹತ್ತು ವರ್ಷಗಳಿಂದ ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ಚಾಲಕರೂ ಆಗಿರುವ ಅವರು ಮನ್ನಿ, ಈ ವೈರಸ್ ಶತ್ರುವಿನಂತೆ ಮತ್ತು ಆಸ್ಪತ್ರೆಯೇ ಯುದ್ಧಭೂಮಿಯಂತೆ ಎಂದರು. ಇತ್ತೀಚೆಗೊಮ್ಮೆ ಒಂದೇ ಸಮನೆ ರೋಗಿಗಳು ಆಸ್ಪತ್ರೆಗೆ ಹರಿದು ಬಂದದ್ದನ್ನು ನೆನಪಿಸಿಕೊಂಡು, ಅವರು ಬಂದವರೆಲ್ಲ ಅಯೋಮಯ ಸ್ಥಿತಿಯಲ್ಲಿದ್ದರು. ಹೆಸರು-ವಿಳಾಸ ಹೇಳುವ ಸ್ಥಿತಿಯಲ್ಲೂ ಇರಲಿಲ್ಲ. ಕೆಲವು ದಿನ ಸತತವಾಗಿ ದೊಡ್ಡ ಸಂಖ್ಯೆಯಲ್ಲಿ ಬರುತ್ತಲೇ ಇರುತ್ತಾರೆ, ಕೆಲವರು ಅಲ್ಪಸ್ವಲ್ಪ ರೋಗಲಕ್ಷಣ ಪೀಡಿತರಾದರೆ ಮತ್ತೆ ಕೆಲವರು ರೋಗಲಕ್ಷಣಗಳೊಂದಿಗೆ ಭಯಗೊಂಡವರು.

“ಕೆಲವರು ಒದ್ದಾಡುತ್ತಾರೆ, ಹಾಸಿಗೆಯಿಂದ ಏಳಲು ಪ್ರಯತ್ನಿಸುತ್ತಾರೆ, ಮುಗಿಸಿ ಹೊರಡಬಯಸುತ್ತಾರೆ…. ಇನ್ನು ಕೆಲವರು ಸಹಾಯ ಮಾಡಿ, ಕಾಪಾಡಿ, ಉಸಿರಾಡಲಾಗುತ್ತಿಲ್ಲ. ನನ್ನನ್ನು ಈಗಲೇ ಉಳಿಸಿ.” ಎನ್ನುತ್ತಾರೆ. “ಕೆಲವರು ಶಬ್ದಗಳಲ್ಲಿ ಹೇಳಿದರೆ ಇನ್ನು ಕೆಲವರಿಗೆ ಅದೂ ಸಾಧ್ಯ ಆಗುವುದಿಲ್ಲ. ಅವರ ಒಂದು ಆರ್ತ ನೋಟವೇ ಸಾಕು. ನಮ್ಮ ಕೈಯಲ್ಲೇನೋ ಮ್ಯಾಜಿಕ್ ಔಷಧಿ ಇದೆ ಎಂಬಂತೆ ನಮ್ಮನ್ನು ಮುಟ್ಟಿ ಅಂಗಲಾಚಿ, ಕೊಡಲಿ ಎಂಬಂತೆ ಮುಖ ಮಾಡುತ್ತಾರೆ. ನಮಗೆ ಕೊಡಲು ಸಾಧ್ಯವಿದ್ದರೆ ಒಳ್ಳೆಯದಿತ್ತು” ಎಂದು ಮನ್ನಿ ನಿಟ್ಟುಸಿರುಬಿಡುತಾರೆ.

ಇದೆಲ್ಲ ಹೀಗಿರಬೇಕಾಗಿರಲಿಲ್ಲ. ರಾಷ್ಟ್ರೀಯ ನಾಯಕತ್ವದ ವೈಫಲ್ಯ, ಟೆಸ್ಟಿಂಗ್-ಟ್ರೇಸಿಂಗ್-ರಿಓಪನಿಂಗ್ ಕುರಿತು ಯದ್ವಾತದ್ವಾ ಸ್ಥಳೀಯ ಆಡಳಿತದ ತೀರ್ಮಾನಗಳು, ಮೂಲಭೂತವಾದ ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸದ ನಾಗರಿಕರು – ಈ ಎಲ್ಲ ಕಾರಣಗಳಿಂದಾಗಿ ಐದು ತಿಂಗಳ ಬಳಿಕ ಈಗ ಅಮೆರಿಕ ಬ್ರೆಜಿಲ್ ಗಿಂತ ದುಪ್ಪಟ್ಟು ಕೊವಿಡ್ -19 ಸಾವಿನ ಸಂಖ್ಯೆ ಹೊಂದಿದೆ.
ಬೇಸಿಗೆಯಲ್ಲಿ ವೈರಸ್ ಕಮ್ಮಿ ಆಗಬಹುದೆಂಬ ನಿರೀಕ್ಷೆ ಇತ್ತು. ಅದು ಸುಳ್ಳಾಗಿ ಪ್ರಕರಣಗಳು ಹೆಚ್ಚುತ್ತಿವೆ, ಕ್ಯಾಲಿಫೋರ್ನಿಯಾದಂತಹ ಕಡೆಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ (ಬೇಸಗೆಯಲ್ಲಿ ವೈರಸ್ ಸಾಯಲಿದೆ ಎಂದು ಪ್ರೆಸಿಡೆಂಟ್ ಟ್ರಂಪ್ ಹೇಳಿದ್ದು ನೆನಪಿದೆಯೆ?) ಇಷ್ಟಾದರೂ ಜನ ನಿಯಮಗಳನ್ನು ಪಾಲಿಸುತ್ತಿಲ್ಲ. ಮೊನ್ನೆಮೊನ್ನೆ ಆರೆಂಜ್ ಕೌಂಟಿಯಲ್ಲಿ ಶಿಕ್ಷಣ ಮಂಡಳಿ ಮಾಸ್ಕ್ – ಸಾಮಾಜಿಕ ಅಂತರ ಇಲ್ಲದೆ ಶಾಲೆಗಳನ್ನು ತೆರೆಯಲು ತೀರ್ಮಾನಿಸಿತು.

ನಮ್ಮ ಹತ್ತಿರದವರು ಗತಿಸಿದ್ದರೆ, ನಮ್ಮ ಆರೋಗ್ಯ ಕಾರ್ಯಕರ್ತರು-ವೈದ್ಯರು ಅಪಾಯಕ್ಕೀಡಾಗಲಿದ್ದಾರೆ ಎಂಬ ಅರಿವಿದ್ದರೆ ನಾವು ಹೀಗೆ ಮಾಡುತ್ತಿದ್ದೆವೆ? ಈ ನಿರ್ಲಕ್ಷ್ಯಕ್ಕೆ ಒಂದು ಮುಖ್ಯ ಕಾರಣ- ಪಾಸಿಟಿವ್ ಆದವರಲ್ಲಿ ಹೆಚ್ಚಿನವರು ಗುಣಮುಖರಾಗುತ್ತಿರುವುದು. ಇನ್ನಾದರೂ ಕೊರೊನಾ ಸಾವು ಹೇಗಿರುತ್ತದೆಂಬ ಕಲ್ಪನೆ ಬಂದ ಮೇಲೆ ನಾವು ಎಚ್ಚರಾಗುತ್ತೇವೆಯೆ?

ಹೇಳುವುದು ಕಷ್ಟ. ಆದರೆ ನಾನು ತುರ್ತು ಚಿಕಿತ್ಸಾ ಕೊಠಡಿಗಳಲ್ಲಿ, ಐಸಿಯುಗಳಲ್ಲಿ ಪ್ರತಿದಿನ ಏನಾಗುತ್ತಿದೆ ಎಂದು ವಿವರಿಸುವಂತೆ ವೈದ್ಯರನ್ನು ಆರೋಗ್ಯ ಸಿಬ್ಬಂದಿಗಳನ್ನು ಕೇಳಿದೆ. ಅದನ್ನೆಲ್ಲ ಅರಿತರೆ, ನೀವು ಈ ವೈರಸ್ ಸೋಂಕಿನ ಅನುಭವ ಪಡೆಯಲು ಮುಂದಾಗಲಾರಿರಿ.

“ನಮ್ಮ ದುರಾದೃಷ್ಟಕ್ಕೆ ಐಸಿಯು ಗಳಲ್ಲಿರುವ ರೋಗಿಗಳು ನಾವು ಇಚ್ಛಿಸಿದಂತೆ ಸುಧಾರಿಸಿಕೊಳ್ಳುತ್ತಿಲ್ಲ” ಎನ್ನುತ್ತಾರೆ ಡಾ|ರಾವ್.
ಅದೂ ಹೈ-ಡೋಸ್ ಆಕ್ಸಿಜನ್ ನೀಡಿದ ಬಳಿಕ, ವೆಂಟಿಲೇಟರ್ ಅಳವಡಿಸಿದ ಬಳಿಕ, ರಕ್ತ ತೆಳುಕಾರಕ ನೀಡಿ ದೇಹದಲ್ಲೆಲ್ಲ ನೋವುಂಟುಮಾಡುವ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆದ ಬಳಿಕ, ಶ್ವಾಸಕೋಶಗಳ ಉರಿಯೂತಗಳನ್ನು ಸ್ಟೀರಾಯ್ಡ್ ನೀಡಿ ತಗ್ಗಿಸಲು ಪ್ರಯತ್ನಿಸಿದ ಬಳಿಕ. ಗಂಭೀರ ಸ್ಥಿತಿಗೆ ಹೋದ ಪ್ರಕರಣಗಳಲ್ಲಿ ರೋಗಿಗೆ ಮತ್ತು ಬರಿಸುವ ಸೌಕರ್ಯವಾದರೂ ಇದೆ, ಉಳಿದವರಿಗೆ ಅದೂ ಇರುವುದಿಲ್ಲ ಅವರು ಸಂಕಟ ಅನುಭವಿಸಬೇಕು.

“ಇಡಿಯ ಕೊವಿಡ್ ಸಂಕಟದಲ್ಲಿ ಯಾರೂ ಬಾಯಿಬಿಟ್ಟು ಹೇಳದ ದುರಂತವೆಂದರೆ ವ್ಯಕ್ತಿಯ ಜೀವನದ ಅಂತ್ಯದಲ್ಲೂ ಮಾನವೀಯ ಬಾಂಧವ್ಯ ತೋರಿಸಲು ಸಾಧ್ಯ ಆಗದಿರುವ ಸ್ಥಿತಿ. ಸಾವಿನ ಮಂಚದಲ್ಲಿರುವಾಗ ರೋಗಿಯ ಜೊತೆಗಿರುವುದು ಹಿಂದೆಲ್ಲ ಸಾಧ್ಯವಾಗುತ್ತಿತ್ತು. ಈಗ ಅವರು ಏಕಾಕಿತನದಲ್ಲೇ ಸಾಯಬೇಕು.” ಎನ್ನುತ್ತಾರೆ ಡಾ|ರಾವ್.

ಒಂದು ಪ್ರಕರಣದಲ್ಲಿ ಡಾ| ರಾವ್ ಅವರ ಅವರ ಸಹೋದ್ಯೋಗಿ ವೈದ್ಯರೊಬ್ಬರ ತಂದೆ ಸ್ವತಃ ದಂತವೈದ್ಯರು ತೀರಿಕೊಂಡರು. ಆದರೆ ಮಗನಿಗೆ ತಂದೆಯ ಅಂತಿಮ ಕ್ಷಣಗಳಲ್ಲಿ ಒಟ್ಟಿಗಿರಲಾಗಲಿಲ್ಲ.
“ಕಳೆದ ವಾರ, ನಾನು ಕಿಡ್ನಿ ಕಸಿ ಆದ ರೋಗಿಯೊಬ್ಬರ ಗಂಟಲಿನೊಳಗೆ ವೆಂಟಿಲೇಟರ್ ನಳಿಕೆ ಇಳಿಸಬೇಕಿತ್ತು. ಆ ಕೊನೆಯ ಕ್ಷಣದಲ್ಲಿ ಆ ವ್ಯಕ್ತಿ ಬಾಗಿಲ ಸಂದಿಯಿಂದ ಇಣುಕುತ್ತಿದ್ದ ತನ್ನ ಪತ್ನಿಯನ್ನು ನೋಡಿದ ರೀತಿ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.’ಇದೇ ಕೊನೆಯ ಬಾರಿಗೆ’ ಎಂಬಂತಿತ್ತು ಆ ನೋಟ” ಎನ್ನುತ್ತಾರೆ ಡಾ|ರಾವ್.

ನಾನು ಡಾ| ರಾವ್ ಅವರನ್ನು ಭೇಟಿ ಮಾಡಿದ್ದು, ಅವರ 12 ತಾಸುಗಳ ಪಾಳಿಯ ಬಳಿಕ ಸಣ್ಣ ಬಿಡುವಿನಲ್ಲಿರುವಾಗ. ಆಗ ಅವರ ಯೂನಿಟ್ ನಲ್ಲಿ ಏಳು ಗಂಭೀರ ಸ್ಥಿತಿಯ ರೋಗಿಗಳು, ಅವರಲ್ಲೊಬ್ಬಾಕೆ ಎರಡು ತಿಂಗಳ ಬಾಣಂತಿ ಇದ್ದರು. ಆ ಬಾಣಂತಿಗೆ ಹೆರಿಗೆಯ ವೇಲೆ ಉಸಿರಾಟ ಕಷ್ಟವಾಗಿತ್ತು. ಅವರಲ್ಲಿ ಇಬ್ಬರು 20ರ ಆಸುಪಾಸಿನವರಾದರೆ ಉಳಿದವರು 30-60 ನಡುವಿನವರು. ಇವರಲ್ಲದೆ ಆರೇಳು ಮಂದಿ ಅಷ್ಟೇನೂ ತೀವ್ರವಲ್ಲದ ತೊಂದರೆಯವರೂ ಇದ್ದರು.

ಕೊವಿಡ್ ನಲ್ಲಿ ರೋಗಿಗಳ ಯಾತನೆ ಹೊಸ ಮಟ್ಟಕ್ಕೇರಿರುತ್ತದೆ ಎನ್ನುತ್ತಾರೆ ಕೆಕ್ ಆಸ್ಪತ್ರೆಯ ಶಾಮಕ ಚಿಕಿತ್ಸಾ ಪರಿಣತೆ ಡಾ|ಸುನೀತಾಪುರಿ. ರೋಗದ ಗುಣಲಕ್ಷಣಗಳು- ಚಿಕಿತ್ಸೆಯ ಲಾಭ-ಅಪಾಯಗಳ ಬಗ್ಗೆ ವಿವರಿಸುತ್ತಾ ಅವರು, ವೈದ್ಯರಿಗೂ ಈ ಕೊರೊನಾ ವೈರಸ್ ಬಗ್ಗೆ ಗೊತ್ತಿರುವುದು ಅತ್ಯಲ್ಪ. ಈ ಕಾರಣಕ್ಕಾದರೂ ಪರಿಸ್ಥಿತಿ ಕೈಮೀರುವ ಮೊದಲು ಜನರು ಎಚ್ಚರ ವಹಿಸಬೇಕೆನ್ನುತ್ತಾರವರು.
ಶಾಮಕ ಚಿಕಿತ್ಸೆ, ತೀವ್ರ ಸ್ಥಿತಿ ತಲುಪಿರುವ ರೋಗಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಆರಾಮ, ಡಿಗ್ನಿಟಿ ಒದಗಿಸಲು ಪ್ರಯತ್ನಿಸುತ್ತದೆ, ಆದರೂ ಕುಟುಂಬಿಕರಿಗೆ ರೋಗಿಯ ಬದುಕು ವಿಸ್ತರಿಸುತ್ತಿದೆಯೋ ಸಾವು ಉದ್ದಕ್ಕೆಳೆಯುತ್ತಿದೆಯೋ ಗೊತ್ತಾಗುವುದಿಲ್ಲ. ಕೆಲವು ಗಂಭೀರ ರೋಗಿಗಳನ್ನು ಹಾನಿಗೀಡಾದ ಶ್ವಾಸಕೋಶಗಳ ಸುಧಾರಣೆಗಾಗಿ ವಿಶೇಷ ಮಂಚದಲ್ಲಿ ಕವುಚಿ ಮಲಗಿಸಬೇಕಾಗುತ್ತದೆ. ಅದರ ಅಡ್ಡಪರಿಣಾಮಗಳೂ ಇರುತ್ತವೆ ಎನ್ನುತ್ತಾರೆ ಡಾ|ಪುರಿ.

“ಹಾಗೆ ಮಲಗಿಸಿದಾಗ, ದೇಹದ್ರವಗಳ ಒತ್ತಡದಿಂದಾಗಿ ಮುಖ ಮತ್ತು ದೇಹದ ಭಾಗಗಳು ಊದಿಕೊಳ್ಳಬಹುದು. ಆ ವಿಕಾರವನ್ನು ಒಳಗಿನ ಸಿಬ್ಬಂದಿಗಳಾಗಿ ನಮಗೂ ನೋಡಲು ಕಷ್ಟವಾಗುತ್ತದೆ” ಎಂದವರು ಸಂಕಟಪಟ್ಟರು.

ಹೃದಯ ಸ್ಥಗಿತಗೊಂಡ ಸ್ಥಿತಿಯಲ್ಲಿ ಮೂವತ್ತರ ಹರೆಯದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆತಂದ ಕಥೆಯನ್ನು ಆಂಬ್ಯುಲೆನ್ಸ್ ಚಾಲಕ ಮನ್ನಿ ಹಂಚಿಕೊಂಡರು. “ನಾವು ಉಸಿರಾಟ ಪುನಃಸ್ಥಾಪಿಸಲು ಸಿಪಿಆರ್ ಸಹಿತ ಎಲ್ಲಪ್ರಯತ್ನ ಮಾಡಿದರೂ ಬದುಕಿಸಿಕೊಳ್ಳಲಾಗಲಿಲ್ಲ. ನಮಗಿದೀಗ ಬಹುತೇಕ ಯುದ್ಧವೇ ಆಗಿದೆ. ನಮ್ಮ ಕಣ್ಣಿಗೆ ಕಾಣಿಸದ ವೈರಿಯ ಜೊತೆ ಯುದ್ಧ. ಎರಡನೇ ಮಹಾಯುದ್ಧ ಆಗಿದ್ದರೆ, ಬರುವ ಯುದ್ಧ ವಿಮಾನ ಕಾಣಿಸ್ತಿತ್ತು. ನಮ್ಮತ್ತ ಗುಮ್ಡೆಸೆಯುವ ಶತ್ರು ಸೈನಿಕರು ಕಣ್ಣಿಗೆ ಕಾಣಿಸುತ್ತಿದ್ದರು.ಈ ಯುದ್ಧದಲ್ಲಿ ಶತ್ರು ಕಣ್ಣಿಗೆ ಕಾಣಿಸುವುದಿಲ್ಲ. ದಾಳಿಯೂ ಅಚಾನಕ್ಕಾಗಿ ಸಂಭವಿಸುತ್ತದೆ. ಅದನ್ನೆದುರಿಸಲು ನಮ್ಮ ಬಳಿ ಇರುವುದು ಮಾಸ್ಕ್ ಮತ್ತು ಕೈ ತೊಳೆಯುವಿಕೆ ಮಾತ್ರ” ಎಂದರವರು.

“ನನಗೂ ಒಬ್ಬಳು ಮಗಳಿದ್ದಾಳೆ, ಆಕೆಗೆ ದೇಹದ ರೋಗನಿರೋಧಕ ವ್ಯವಸ್ಥೆಯ ತೊಂದರೆ ಇದೆ. ನನಗೆ ಈ ಸೋಂಕು ತಗುಲಬಾರದೆಂದಿಲ್ಲ. ನಾನು ಸೋಂಕನ್ನು ಆಕೆಗೆ ದಾಟಿಸುವ ಅಪಾಯ ಇದೆ. ಈ ಮಾನಸಿಕ ಒತ್ತಡಗಳನ್ನೆಲ್ಲ ನಾವು ಸಹೋದ್ಯೋಗಿಗಳ ಜೊತೆ ಹಂಚಿಕೊಂಡು ನಿರಾಳವಾಗಬೇಕು ಅಷ್ಟೇ.” ಎಂದ ಆಂಬ್ಯುಲೆನ್ಸ್ ಚಾಲಕ ಮನ್ನಿ ಅವರಲ್ಲಿ ಈವತ್ತು ಹೇಗನ್ನಿಸುತ್ತಿದೆ ಎಂದರೆ, ಅವರು “ಈವತ್ತು ನಾನು ಕಾರಲ್ಲಿ ಕುಳಿತು ಅತ್ತೇಬಿಟ್ಟೆ. ಇದು ಯಾವಾಗ ಮುಗಿಯತ್ತೋ ಗೊತ್ತಿಲ್ಲ. ನಾವು ಬದುಕಿನ ಅಂಚಿನಲ್ಲಿದ್ದೇವೆ ಅನ್ನಿಸ್ತಿದೆ” ಎಂದು ನಿಟ್ಟುಸಿರುಬಿಟ್ಟರು.

ಇತ್ತೀಚೆಗೆ ನಿಧನಹೊಂದಿದ ಮಹಿಳಾ ರೋಗಿಯೊಬ್ಬರ ಬಗ್ಗೆ ಹೇಳಿದ ಡಾ|ಪುರಿ, ಆಕೆಯ ಮಗಳು ಕಾಲೇಜು ವಿದ್ಯಾರ್ಥಿನಿ. ತಾನು ತನಗಾದ ನಷ್ಟದ ಬಗ್ಗೆ ಹೇಳಿದರೂ ಸಹಪಾಠಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದದ್ದನ್ನು ಉದಾಹರಿಸಿದರು. “ಎಳೆಯರು ಮಾಸ್ಕ್ ಧರಿಸುತ್ತಿಲ್ಲ. ರಸ್ತೆಯಲ್ಲಿ ಹಠಾತ್ ಕಾರ್ ಬಂದು ಗುದ್ದಿದ ಹಾಗೇ ನಮಗೆ ಕೊರೊನಾ ದಾಳಿ ಆಗಬಹುದು ಎಂಬುದನ್ನವರು ಮರೆಯುತ್ತಾರೆ. ಮಾಸ್ಕ್ ಎಂಬುದು ಸೀಟ್ ಬೆಲ್ಟ್ ಇದ್ದಂತೆ” ಎಂದರು.

ಸಿಸ್ಟಿಕ್ ಫೈಬ್ರೋಸಿಸ್ ಚಿಕಿತ್ಸಾ ಪರಿಣತೆಯೂ ಆಗಿರುವ ಡಾ|ಪುರಿ, ಆ ರೋಗದಲ್ಲಿ ಸಾವು ಬೇಗ ಬರುತ್ತದಾದರೂ, ಅದು ಬರುವ ಹೊತ್ತಿಗೆ ರೋಗಿ-ಮನೆಯವರು ಅದಕ್ಕೊಂದು ರೀತಿ ತಯಾರಾಗಿರುತ್ತಾರೆ. ಆದರೆ ಕೊರೊನಾ ಸಾವು ಮೈಮೇಲೆ ನೂರಾರು ಇಟ್ಟಿಗೆಗಳು ಧೊಪ್ಪೆಂದು ಬಿದ್ದಂತೆ. ಸಾವು ಹಠಾತ್ ಸಂಭವಿಸಿದಾಗ ಕುಟುಂಬ ಕೂಡ ಆಘಾತಕ್ಕೀಡಾಗುವುದು ಸಹಜ ಎಂದರು. “ಪ್ರತೀ ಬಾರಿ ಅದೇ ರೀತಿಯ ಮುಖಗಳು… ನಿರಾಕರಣೆಯ ಮುಖಗಳು. ಇದಾಗಲು( ಈ ಸಾವು ಸಂಭವಿಸಲು) ಸಾಧ್ಯವೇ ಇಲ್ಲ ಎಂಬ ಮುಖಗಳು… ನೀವೇನೋ ಹೇಳುತ್ತಿದ್ದೀರಿ ಅದು ನನ್ನ ಮೆದುಳಿನಲ್ಲಿ ದಾಖಲಾಗುತ್ತಿಲ್ಲ ಎಂಬಂತಹ ಮುಖಗಳು.” ಎಂದು ಆ ಸನ್ನಿವೇಶವನ್ನು ಡಾ|ಪುರಿ ವಿವರಿಸುತ್ತಾರೆ.

ಜಗನ್ಮಾರಿಯ ಆರಂಭದ ದಿನಗಳಲ್ಲಿ ಡಾ|ರಾವ್ ಮನೆಗೂ ಹೋಗುತ್ತಿರಲಿಲ್ಲ. ಕುಟುಂಬಕ್ಕೆ ಸೋಂಕು ತಗುಲೀತೆಂಬ ಭಯ. ಕೆಲಸದಿಂದ ದೂರ ಉಳಿಯಲು ಸಾಧ್ಯವೇ ಇಲ್ಲದ ಸ್ಥಿತಿ.
“ನಾನು ರೋಗಿಗಳ ಮನೆಗೆ ತೆರಳಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆರೈಕೆ ಮಾಡುತ್ತೇನೆಂಬುದು ವೈದ್ಯರ ಹಿಪೊಕ್ರಾಟಿಕ್ ಪ್ರತಿಜ್ಞೆಯ ಭಾಗ. ಆದರೆ ನಾವೀಗ ರಾಷ್ಟ್ರೀಯ ತುರ್ತುಸ್ಥಿತಿಯಲ್ಲಿದ್ದರೂ ಅದನ್ನು ಹಾಗೆ ಪರಿಗಣಿಸುತ್ತಿಲ್ಲ, ನಮಗೆ ಈ ಕಷ್ಟಕಾಲದಲ್ಲಿ ಅಗತ್ಯವಿದ್ದ ನಾಯಕತ್ವವೂ ಸಿಕ್ಕಿಲ್ಲ. “ನಮ್ಮ ಮುಕ್ತವಾಗಿರುವ ಹಕ್ಕುಗಳನ್ನು ನಾನು ಗೌರವಿಸುತ್ತೇನೆ, ಅದರ ಜೊತೆ ನಮಗೆ ಸಾಮಾಜಿಕ ಜವಾಬ್ದಾರಿಯೂ ಬೇಕು.”

ಮಾತು ಮುಗಿದ ಬಳಿಕ ಡಾ| ರಾವ್ ತನ್ನ ಪಾಳಿಗೆ ಹಿಂದಿರುಗಿದರು. ಸಂಕಟ ಇಳಿಗತಿಯಲ್ಲಿರಬೇಕಾಗಿದ್ದ ಈ ಬೇಸಗೆಯಲ್ಲಿ ನಮ್ಮ ಬದುಕು ತೂಗುಯ್ಯಾಲೆಯಲ್ಲಿದೆ.
#LivingWithCorona #COVID19

Please follow and like us:
error