ತ್ರಿವರ್ಣ ಧ್ವಜ ಹರಿದು ಹಾಕಿ “ಮೈ ಪಕ್ಕಾ ಮುಸಲ್ಮಾನ್ ಹೂಂ” ಎಂದ ಬಾಲಕ ಮುಸ್ಲಿಂ ಅಲ್ಲ -ವೈರಲ್ ವೀಡಿಯೋದ ಹಿಂದಿನ ಸತ್ಯ

ತ್ರಿವರ್ಣ ಧ್ವಜ ಹರಿದು ಹಾಕಿ “ಮೈ ಪಕ್ಕಾ ಮುಸಲ್ಮಾನ್ ಹೂಂ” ಎಂದ ಬಾಲಕ ಮುಸ್ಲಿಂ ಅಲ್ಲ

ಇಲ್ಲಿದೆ ವೈರಲ್ ವೀಡಿಯೋದ ಹಿಂದಿನ ಸತ್ಯ

ಹೊಸದಿಲ್ಲಿ, ಆ.: ಬಾಲಕನೊಬ್ಬ ಭಾರತದ ರಾಷ್ಟ್ರಧ್ವಜವನ್ನು ಹರಿದು “ಪಕ್ಕಾ ಮುಸಲ್ಮಾನ್ ಹೂಂ” ಎಂದು ಹೇಳುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ. @AnuMishraBJP ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಈ ವೀಡಿಯೋ ಪೋಸ್ಟ್ ಮಾಡಲ್ಪಟ್ಟಿದ್ದು, @sardanarohit @KapilMishra_IND @TajinderBagga ಅವರನ್ನೂ  ಟ್ಯಾಗ್ ಮಾಡಿ “ಭಾರತದ ರಾಷ್ಟ್ರಧ್ವಜವನ್ನು ಹರಿದು ಎಸೆದು ಈ ಬಾಲಕ ‘ನಾನೊಬ್ಬ ನಿಜವಾದ ಮುಸ್ಲಿಂ’ ಎನ್ನುತ್ತಿದ್ದಾನೆ, ಇಂತಹ ಮನಃಸ್ಥಿತಿ ಎಲ್ಲಿ ಹುಟ್ಟುತ್ತದೆ ?” ಎಂಬರ್ಥ ನೀಡುವ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಅನ್ನು 2,100ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದ್ದು, 2300ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಇದೇ ವೀಡಿಯೋದ ಇನ್ನೊಂದು ಅವತರಣಿಕೆಯನ್ನು ಸಬ್-ಟೈಟಲ್ ಗಳೊಂದಿಗೆ  @pokerhash ಎಂಬ ಟ್ವಿಟರಿಗ ಪೋಸ್ಟ್ ಮಾಡಿದ್ದು, ಈ ವೀಡಿಯೋವನ್ನು 20,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೋದಲ್ಲಿ ಜನರು ಆ ಹುಡುಗನನ್ನು ಹೊಡೆಯುತ್ತಿರುವ ಹಾಗೂ ನಿಂದಿಸುತ್ತಿರುವ ದೃಶ್ಯವಿದ್ದು ಬಾಲಕನಿಗೆ ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿರುವುದು ಕಾಣಿಸುತ್ತದೆ.

ಸುದರ್ಶನ್ ನ್ಯೂಸ್ ಇದರ ಸಿಎಂಡಿ ಹಾಗೂ ಮುಖ್ಯ ಸಂಪಾದಕ ಸುರೇಶ್ ಚವ್ಹಂಕೆ ಕೂಡ ಇದೇ ಘಟನೆಯ ಇನ್ನೂ ದೀರ್ಘಾವಧಿಯ ವೀಡಿಯೋ ಪೋಸ್ಟ್ ಮಾಡಿದ್ದು ಅದರಲ್ಲಿ ಬಾಲಕನಿಂದ ಬಲವಂತವಾಗಿ ಕ್ಷಮೆ ಕೇಳುವಂತೆ ಮಾಡಿ “ಪಕ್ಕಾ ಹಿಂದೂ ಹೂಂ” ಎಂದು ಹೇಳುವಂತೆ ಮಾಡಲಾಗಿದೆ. ಈ ಟ್ವೀಟ್ ಗೆ 1,200ಕ್ಕೂ ಅಧಿಕ ರಿಟ್ವೀಟ್ ಗಳಾಗಿದ್ದು 2,200ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಎಸ್.ಕೆ. ಚೌಧುರಿ ಎಂಬ ಫೇಸ್ ಬುಕ್ ಖಾತೆದಾರ ಕೂಡ ಎರಡೂ ವೀಡಿಯೋಗಳನ್ನು ಶೇರ್ ಮಾಡಿದ್ದು ಇದನ್ನು 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ. ನಕಲಿ ಸುದ್ದಿಗಳ ತಾಣ ‘ದೈನಿಕ್ ಭಾರತ್’ ಕೂಡ ಇದೇ ವಿಚಾರದ ಬಗ್ಗೆ ಆಗಸ್ಟ್ 20,2018ರಂದು ಒಂದು ಲೇಖನ ಪ್ರಕಟಿಸಿತ್ತು.

ನಿಜವೇನು ?

ಈ ಘಟನೆ ಗುಜರಾತ್ ರಾಜ್ಯದ ಸೂರತ್ ನಲ್ಲಿ ನಡೆದಿತ್ತು. ಆಗಸ್ಟ್ 20, 2018ರಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿನ ಲೇಖನವೊಂದರಲ್ಲಿ ಹೀಗೆ ಬರೆಯಲಾಗಿತ್ತು. “ತಾನು ಅಲ್ಪಸಂಖ್ಯಾತ ಸಮುದಾಯದವನೆಂದು ಹೇಳಿಕೊಳ್ಳುತ್ತಿರುವ ಬಾಲಕನೊಬ್ಬ ವೀಡಿಯೋದಲ್ಲಿ ಕಾಗದದಿಂದ ಮಾಡಲ್ಪಟ್ಟಿದ್ದ ರಾಷ್ಟ್ರಧ್ವಜವನ್ನು ಹರಿಯುತ್ತಿರುವುದು ಕಾಣಿಸುತ್ತದೆ. ಪೊಲೀಸರು ಬಾಲಕನನ್ನು ಹಾಗೂ ಇನ್ನೊಬ್ಬ ಹದಿಹರೆಯದವನನ್ನು ಅಮ್ರೋಲಿಯಲ್ಲಿ ಪತ್ತೆ ಹಚ್ಚಿ ಅವರನ್ನು ಅವರ ಕುಟುಂಬ ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ಬರಹೇಳಿದ್ದರು” ಎಂದು ವರದಿಯಲ್ಲಿತ್ತು.

altnews.inಗೆ ಈ ಬಗ್ಗೆ ಮಾಹಿತಿ ನೀಡಿದ ಅಮ್ರೋಲಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಜಿ.ಎ. ಪಟೇಲ್ “ಇಬ್ಬರು ಬಾಲಕರೂ ಸ್ನೇಹಿತರಾಗಿದ್ದು ಹಿಂದೂಗಳಾಗಿದ್ದಾರೆ. ತಮ್ಮ ಬಾಲಿಶ ವರ್ತನೆಗೆ ಇಬ್ಬರೂ ಕ್ಷಮೆ ಯಾಚಿಸಿದ್ದಾರೆ” ಎಂದಿದ್ದಾರೆ.

ವಾಸ್ತವವೇನೆಂದರೆ ಇಬ್ಬರು ಬಾಲಕರೂ ಹಿಂದೂಗಳಾಗಿದ್ದು ರಾಷ್ಟ್ರಧ್ವಜವನ್ನು ಹರಿದು ತಾವು ಮುಸಲ್ಮಾನರೆಂಬಂತೆ ಬಿಂಬಿಸಿದ್ದಾರೆ. ಸಣ್ಣ ಪ್ರಾಯದ ಹುಡುಗರೂ ಇಂತಹ ಕೃತ್ಯವೆಸಗುತ್ತಿರುವುದನ್ನು ನೋಡಿದರೆ ಭಾರತೀಯ ಸಮಾಜ ಎಷ್ಟರ ಮಟ್ಟಿಗೆ ಧಾರ್ಮಿಕ ಧ್ರುವೀಕರಣಗೊಂಡಿದೆ ಎಂಬುದನ್ನು ಅದು ಸೂಚಿಸುತ್ತದೆ.

Viral video: Boy tears up Indian flag and says “Pakka Musalman Hoon”. What’s the truth?

Viral video: Boy tears up Indian flag and says “Pakka Musalman Hoon”. What’s the truth?