ತೆಲಂಗಾಣದಿಂದ ಛತ್ತೀಸ್‌ಗಢಕ್ಕೆ ನಡೆದುಕೊಂಡೇ ತೆರಳಿ ಮನೆಯ ಸಮೀಪವೇ ಮೃತಪಟ್ಟ ಬಾಲಕಿ

ರಾಯಪುರ್ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಗ್ರಾಮದಲ್ಲಿನ ತನ್ನ ಮನೆಯಿಂದ ಎರಡು ತಿಂಗಳ ಹಿಂದೆ ತೆಲಂಗಾಣದ ಮೆಣಸಿನ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದ 12 ವರ್ಷದ ಬಾಲಕಿಯೊಬ್ಬಳು ಲಾಕ್​ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಹಿಂದಿರುಗುವ ಯತ್ನವಾಗಿ ಮೂರು ದಿನ ಪರ್ಯಂತ 150ಕ್ಕೂ ಹೆಚ್ಚು ಕಿಮೀ ದೂರ ಕ್ರಮಿಸಿ ಕೊನೆಗೆ ಮನೆ ತಲುಪಲು ಇನ್ನೇನು ಕೆಲವೇ ಕಿಲೋಮೀಟರ್ ಇದೆ ಎನ್ನುವಾಗ ತೀವ್ರ ಸುಸ್ತಿನಿಂದ ಕುಸಿದು ಸಾವನ್ನಪ್ಪಿದ್ದಾಳೆ ಎಂದು ndtv.com ವರದಿ ಮಾಡಿದೆ.

ತನ್ನ ಕುಟುಂಬಕ್ಕೆ ಆಧಾರವಾಗಲು ಮೆಣಸಿನ ತೋಟದಲ್ಲಿ ದುಡಿಯುತ್ತಿದ್ದ ಈ ಬಾಲಕಿ ತನ್ನ ಹೆತ್ತವರ ಏಕೈಕ ಪುತ್ರಿಯಾಗಿದ್ದಳು. ಎಪ್ರಿಲ್ 15ರಂದು 11 ಮಂದಿ ಇತರರೊಂದಿಗೆ ಮನೆಯತ್ತ ನಡೆದಿದ್ದ ಆಕೆ ಸತತ ಮೂರು ದಿನಗಳ ಕಾಲ ನಡೆದಿದ್ದಳು. ಮನೆ ತಲುಪಲು ಇನ್ನೇನು 14 ಕಿಮೀ ಇದೆ ಎನ್ನುವಾಗ ಹೊಟ್ಟೆಯಲ್ಲಿ ಕಾಣಿಸಿಕೊಂಡ ತೀವ್ರ ನೋವಿನಿಂದ ವಾಂತಿ ಮಾಡಿ ಆಕೆ ಕುಸಿದಿದ್ದಳು. ಆಕೆ ತೀವ್ರ ಡಿಹೈಡ್ರೇಶನ್‍ನಿಂದ ಬಳಲುತ್ತಿದ್ದಳಲ್ಲದೆ ಸಾಕಷ್ಟು ಆಹಾರವೂ ಸೇವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.  ಆಕೆಯ ಕೊರೋನ ವೈರಸ್ ಪರೀಕ್ಷೆ ನೆಗೆಟಿವ್ ಬಂದಿತ್ತು.

ಕೊನೆಗೆ ಆಕೆಯ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ಆಕೆಯ ಮನೆಗೆ ಸಾಗಿಸಲಾಯಿತು. ರಾಜ್ಯ ಸರಕಾರ ಆಕೆಯ ಕುಟುಂಬಕ್ಕೆ ರೂ. 1 ಲಕ್ಷ ಪರಿಹಾರಧನ ಘೋಷಿಸಿದೆ.

Please follow and like us:
error