ತುಂಗಭದ್ರಾ ಡ್ಯಾಮ್‌ನ ಸಮಸ್ಯೆ ಕುರಿತು ಸಿಂಧನೂರಿನಲ್ಲಿ ಬೃಹತ್ ಸಮಾವೇಶ -ವಿಠ್ಠಪ್ಪ ಗೋರಂಟ್ಲಿ

ಗಂಗಾವತಿ: ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಜೀವನಾಡಿಯಾದ ತುಂಗಭದ್ರಾ ಜಲಾಶಯದ ಹಲವಾರು ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳು ನಿರಂತರ ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದರಿಂದ ಈ ಬಾರಿ ಜಲಾಶಯಕ್ಕೆ ನೀರು ತುಂಬಿ ಹರಿದು ಸಮುದ್ರ ಸೇರಿದರೂ ಈ ಭಾಗದ ನೀರಾವರಿಗೆ ಮೊದಲನೆಯ ಬೆಳೆಗೆ ನೀರಿನ ಕೊರತೆಯಾಯಿತು. ಮುಂದಿನ ದಿನಮಾನಗಳಲ್ಲಿ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿಯಿಲ್ಲ.
ಇದಕ್ಕೆ ಕಾರಣ ಜಲಾಶಯದಲ್ಲಿ ೩೩ ಟಿ.ಎಂ.ಸಿ ಹೂಳು ತುಂಬಿರುವುದು ಒಂದಾದರೆ, ಬಲದಂಡೆ ಹಾಗೂ ಕಾರ್ಖಾನೆಗಳಿಗೆ ಅಕ್ರಮವಾಗಿ ಹೆಚ್ಚುವರಿ ನೀರು ಬಿಡುವುದು ಮತ್ತೊಂದು ಕಾರಣ. ತುಂಗಭದ್ರಾ ಬೋರ್ಡ್‌ಗೆ ತಟಸ್ಥ ರಾಜ್ಯದವರು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ನೇಮಕವಾಗಬೇಕೆನ್ನುವ ನಿಯಮವಿದ್ದರೂ ಅದಕ್ಕೆ ಮೊದಲಿನಿಂದಲೂ ಆಂಧ್ರದವರೇ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡುತ್ತಾ ಬರಲಾಗಿದೆ. ಅಲ್ಲದೆ ಪ್ರಮುಖ ಅಧಿಕಾರಿಗಳೂ ಆಂಧ್ರದವರೇ ಆಗಿರುವುದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಾ ಬಂದಿದೆ. ಇಂಥ ಹತ್ತಾರು ಗಂಭೀರ ಸಮಸ್ಯೆಗಳ ಬಗ್ಗೆ ಸಿಂಧನೂರಿನ ಸ್ತ್ರೀಶಕ್ತಿ ಭವನದಲ್ಲ ಸೋಮವಾರ ಫೆಬ್ರವರಿ ೧೧ ರಂದು ಬೃಹತ್ ಪ್ರತಿಭಟನಾ ಸಮಾವೇಶವನ್ನು ತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿ ಹಾಗೂ ಹಲವಾರು ರೈತ ಸಂಘಟನೆ, ಪ್ರಗತಿಪರ, ಕನ್ನಡಪರ ಸಂಘಟನೆಗಳು ಏರ್ಪಡಿಸಿವೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ನಾಗರಿಕರು ಭಾಗವಹಿಸಬೇಕೆಂದು ಭಾರಧ್ವಾಜ್ ಹಾಗೂ ವಿಠ್ಠಪ್ಪ ಗೋರಂಟ್ಲಿ ವಿನಂತಿಸಿದ್ದಾರೆ.

Please follow and like us:
error