ತತ್ವಪದ ಗಾಯಕ ದಾದಾಪೀರ್ ಮಂಜರ್ಲ ಇನ್ನಿಲ್ಲ !

ದಾದಾಪೀರ್ ಮಂಜರ್ಲ, ಹೈದರಬಾದ್ ಕರ್ನಾಟಕ ಭಾಗದ ಹೆಸರಾಂತ ತತ್ವಪದ ಗಾಯಕ. ಹಾರ್ಮೋನಿಯಂ ಹಿಡಿದು ಅವರು ತತ್ವಪದ ಹಾಡಿದರೆ ಘಜಲ್ ಗಾಯನದ ನೆನಪಾಗುತ್ತಿತ್ತು. ಉರ್ದು ಘಜಲ್ ಗಳ ಮಾರ್ದವ ದನಿಯನ್ನು ಕನ್ನಡದ ತತ್ವದ ನುಡಿಗೆ ಜೋಡಿಸಿದ ವಿಶಿಷ್ಟ ಗಾಯನ ಶೈಲಿ ಅವರದಾಗಿತ್ತು. ಗಾಯಕಿಯಲ್ಲಿ ಬಹುತೇಕ ಜನಪದ ಪ್ರಕಾರವಾಗಿಯೇ ಉಳಿದಿರುವ ತತ್ವಪದಗಳನ್ನು ಸುಗಮ ಸಂಗೀತ ಶೈಲಿಯಲ್ಲಿ ಹಾಡುವಿಕೆ ಅದು ದಾದಾಪೀರರಿಗೆ ಸಿದ್ಧಿಸಿತ್ತು. ಸು. ಐದು ವರ್ಷಗಳ ಹಿಂದೆ ತಿಂಥಿಣಿಯಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಮಾವೇಶದಲ್ಲಿ,ಹಾಗೂ ಬೆಂಗಳೂರಿನಲ್ಲಿ, ಸುಮಾರು ಮೂರು ವರ್ಷಗಳ ಹಿಂದೆ ಶಿವರಾತ್ರಿಯಂದು ರಾ. ಸಂ. ಕನಕದಾಸ ಅಧ್ಯಯನ ಮತ್ತು ಸಂ. ಸಂಸ್ಥೆ ಏರ್ಪಡಿಸಿದ್ದ ಅಹೋರಾತ್ರಿ ತತ್ವಪದ ಗಾಯನ ಕಾರ್ಯಕ್ರಮದಲ್ಲಿ ಅವರು ಹಾಡಿದ್ದರು.

ದಾದಾಪೀರ್ ಒಳ್ಳೆಯ ಹಾಡುಗಾರರಾಗಿ ಮಾತ್ರ ಉಳಿದರು. ತಕ್ಕ ಮಟ್ಟಿಗೆ ಹೆಸರು ಮಾಡಿದರು. ಆದರೆ ಅಂತಹ ದೊಡ್ಡ ಪ್ರಖ್ಯಾತಿಯನ್ನೇನು ಪಡೆಯಲಾಗಲಿಲ್ಲ. ಏಕೆಂದರೆ ಹಾಗೆ ಪ್ರಖ್ಯಾತಿ ಪಡೆಯಬೇಕು ಎಂದರೆ ‘ಏನು ಮಾಡಬೇಕು’ ಎಂಬುದು ಅವರಿಗೆ ಗೊತ್ತಿರಲಿಲ್ಲ. ಬೆಂಗಳೂರಿನಲ್ಲಿದ್ದು ಸ್ವಲ್ಪವೇ ವ್ಯವಹಾರಿಕ ಭಾಷೆ ಕಲಿತಿದ್ದರೂ ಸಾಕಿತ್ತು ಹೆಸರ ಜೊತೆಗೆ ಕಾಸನ್ನೂ ಚೆನ್ನಾಗೇ ಮಾಡಿಕೊಳ್ಳಬಹುದಿತ್ತು. ಕನಿಷ್ಟ ಪಕ್ಷ ಧಾರವಾಡದಲ್ಲಾದರೂ ಇದ್ದಿದ್ದರೂ ಸಾಕಿತ್ತು..ಈಗಿರುವುದಕ್ಕಿಂತ ಸಾಕಷ್ಟು ಹೆಚ್ಚೇ ‘ಮಹತ್ವ’ ಪಡೆಯುತ್ತಿದ್ದರು. ಆದರೆ ರಾಯಚೂರಿನಲ್ಲಿಯೇ ಉಳಿದರು. ನನಗೆ ತಿಳಿದಿರುವಂತೆ, ಇವರ ಹಾಡಿಕೆಯನ್ನು ಮೆಚ್ಚಿ, ಗುರುತಿಸುವ ಕಲ್ಬುರ್ಗಿಯ ಒಂದಿಬ್ಬರು ಸಾಹಿತಿ ಚಿಂತಕರ ಪ್ರಯತ್ನವೂ ಮುಖ್ಯವಾಗಿ ಅವರೊಮ್ಮೆ ರಾಜ್ಯೋತ್ಸವ ಪ್ರಶಸ್ತಿಯನ್ನೇನೋ ಪಡೆದರು, ಅಷ್ಟೇ. ಆದರೆ ಅವರ ನೆಮ್ಮದಿಯ ಬದುಕಿಗೆ ಬೇಕಿರುವಷ್ಟು ಹಣವನ್ನೂ ಅವರು ಗಳಿಸಿಕೊಳ್ಳಲಾಗಲಿಲ್ಲ. ದರ್ಗಾವೊಂದರ ಮುಜಾವರ ಮನೆತನದವರಾಗಿಯೂ ತತ್ಸಂಬಂಧಿ ಮೂಲಗಳಿಂದಲೂ ಅಷ್ಟಿಷ್ಟು ಬಿಡಿಗಾಸು ಹೊಂದಿಸಿಕೊಂಡಿದ್ದರು. ಹಾಗಂತ ವರ್ಣಿಸುವಷ್ಟು ಬಡತನದಲ್ಲೇನೂ ಬಾಳಲಿಲ್ಲ ನಿಜ. ಆದರೆ, ಎರಡೂ ಕಿಡ್ನಿ ಫೇಲಾದ ಬಳಿಕ ಉಲ್ಬಣಿಸಿದ ನಂತರ ಆಯುಷ್ಯವನ್ನು ಉಳಿಸಿಕೊಳ್ಳುವಷ್ಟು ಮೊತ್ತ ಅವರ ಖಾತೆಯಲ್ಲಿರಲಿಲ್ಲ ಎಂಬುದಂತೂ ನಿಜ. ಹಾಗಾದಾಗ ಏನಾಗುವುದೋ ಅದೇ ಆಯಿತು!

ಸುಮಾರು ಒಂದು ತಿಂಗಳ ಹಿಂದೆ, ಅವರಿನ್ನೂ ಅಂತಹ‌ ಸ್ಥಿತಿಯಲ್ಲಿ ಏನು ಮಾಡಬೇಕೆಂಬ ಪೇಚಾಟದಲ್ಲಿದ್ದಾಗಲೇ ನನಗೆ ತಿಳಿದದ್ದು. ಅಂತಹ ಹೊತ್ತು ನಾನದರೂ ಏನು ಮಾಡಲು ಸಾಧ್ಯವೋ ಅದನ್ನು ಮಾಡಿದೆ. ರಾಯಚೂರಿನ ಗೆಳೆಯರಾದ ಆಕಾಶವಾಣಿಯ ವೆಂಕಟೇಶ್, ಪ್ರಾಂಶುಪಾಲ ದಸ್ತಗಿರ್ ದಿನ್ನಿ, ಹೋರಾಟಗಾರ ರಜಾಕ್ ಉಸ್ತಾದ್ ಮೊದಲಾದವರೊಂದಿಗೆ ನಾವು ನೆರವಾಗಲೇ ಬೇಕಾದ ಪರಿಯ ಬಗ್ಗೆ ಮಾತನಾಡಿದ್ದು, ಅವರ ಕಾಯಿಲೆಯ ಹಸಿವಿಗೆ “ಅರೆಕಾಸಿನ ಮಜ್ಜಿಗೆ” ಗಿಂತಲೂ ಹೆಚ್ಚಾಗಲಿಲ್ಲ. ದಿನ್ನಿಯೂ ಅವರ ಮಟ್ಟಿಗಿನ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು. ಕೊನೆಗೆ ನೇರವಾಗಿ ದಾದಾಪೀರ್ ಅವರ ನಂಬರಿಗೇ ಮಾತನಾಡಿದೆ. ಅವರ ಧ್ವನಿಯಲ್ಲಾಗಲೇ ಕತ್ತಲಗುಹೆ ಹೊಕ್ಕುತ್ತಿರುವ ನಡುಕವನ್ನು ತೋರಿಸಿತ್ತು. ಆಕ್ಷಣ, ನನ್ನಲ್ಲಿ ನಿಟ್ಟುಸಿರಿಗಿಂತಲೂ ಹೆಚ್ಚಿನ ಮಾತಿರಲಿಲ್ಲ. ಸಾಂತ್ವಾನ, ಭರವಸೆಯ ನುಡಿ…ಏನಾಡಿದೆನೋ…ಆ ಹೊತ್ತಿಗೆ ಅವರಾಗಲೇ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದರು. ಅಷ್ಟೇ…!

ಈಗಷ್ಟೇ ನೋಡಿದೆ. ಫೇಸ್ ಬುಕ್ಕಿನ ತೆಲುಗು ಭಾಷಿಕ ಪೋಸ್ಟ್ ಒಂದರಲ್ಲಿ ಅವರ ಸಾವಿನ ಸಮಾಚಾರ! ಗೆಳೆಯ ವೆಂಕಟೇಶ್ ಅವರೊಂದಿಗೆ ಮಾತಾಡಿ ವಾರ್ತೆ ಹೌದೆಂದು ಖಚಿತಪಡಿಸಿಕೊಂಡೆ. ಮತ್ತೆ, ನನ್ನ ಬಗ್ಗೆ ನನ್ನ ಸಿಟ್ಟು, ಅಸಹಾಯಕ ಭಾವ…ಥತ್. ಇಷ್ಟು ಬರೆಯುವುದರ ಹೊರತು ಜೀವ ಉಳಿಸಿಕೊಳ್ಳಲಾದೀತೇ…? ದಾದಾಪೀರ್….!

– ಬಿ.ಪೀರ್ ಬಾಷ.

ಎರಡೂ ಕಿಡ್ನಿ ಫೇಲ್ ಆಗಿದ್ದರಿಂದ ದಾದಾಪೀರ್ ಮಂಜರ್ಲ ಸಾವನ್ನಪ್ಪಿದ್ಧಾರೆ

Please follow and like us:
error