ಡಿಜಿಟಲ್ ಕ್ಷ-ಕಿರಣ ಕೊಠಡಿ ಮತ್ತು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಉದ್ಘಾಟನೆ

ಕ್ಷಯ ರೋಗ ನಿಯಂತ್ರಣಕ್ಕೆ ಸಹಾಯವಾಣಿ ಸಹಕಾರಿ : ಕರಡಿ ಸಂಗಣ್ಣ
ಕೊಪ್ಪಳ  ಕ್ಷಯ ರೋಗವು ಮುಖ್ಯವಾಗಿ ಅಪೌಷ್ಟಿಕತೆ ಹಾಗೂ ಮದ್ಯಪಾನ, ದೂಮಪಾನದಿಂದ ಬರುತ್ತದೆ.  ಇದರ ನಿಯಂತ್ರಣಕ್ಕೆ ಡಿಜಿಟಲ್ ಕ್ಷ-ಕಿರಣ ಕೊಠಡಿ ಮತ್ತು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಸಹಕಾರಿ ಆಗಲಿವೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್.ಟಿ.ಇ.ಪಿ ವಿಭಾಗ ಹಾಗೂ ಕೆ.ಎಚ್.ಪಿ.ಟಿ ವಿಭಾಗಗಳ ಸಹಯೋಗದಲ್ಲಿ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರ (ಜ.04) ಹಮ್ಮಿಕೊಂಡಿದ್ದ ಡಿಜಿಟಲ್ ಕ್ಷ-ಕಿರಣ ಕೊಠಡಿ ಮತ್ತು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಕ್ಷ-ಕಿರಣ ಕೊಠಡಿ ಮತ್ತು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಉದ್ಘಾಟನಾ ಕಾರ್ಯಕ್ರಮ ಜೀವನದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಕ್ಷಯರೋಗ ನಿಯಂತ್ರಣ ಮಾಡಲು ಖಾಸಗಿ ವೈದ್ಯರು ಬಹಳಷ್ಟು ಸಹಕಾರ ನೀಡಿರುವುದು ಅಭಿನಂದನೀಯ.  ಕ್ಷಯರೋಗ ಪತ್ತೆಗೆ ಬೇಕಾಗುವ ಎಲ್ಲಾ ಉಪಕರಣಗಳನ್ನು ಹೊಂದಿದ ರಾಜ್ಯದ 6ನೇ ಜಿಲ್ಲೆ ಕೊಪ್ಪಳ.  ಇದಕ್ಕೆ ಕಾರಣ ಕರ್ತವ್ಯನಿಷ್ಠೆಯಾಗಿದೆ.  ಇದೇ ರೀತಿಯಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಜನಪ್ರತಿನಿಧಿಗಳು ಸೇವಾ ಮನೋಭಾವ ಹೊಂದಬೇಕು ಎಂದು ಸಲಹೆ ನೀಡಿದರು.
ಕ್ಷಯ ರೋಗವು ಮುಖ್ಯವಾಗಿ ಅಪೌಷ್ಟಿಕತೆ ಹಾಗೂ ಮದ್ಯಪಾನ, ದೂಮಪಾನದಿಂದ ಬರುತ್ತದೆ.  ಇದರ ನಿಯಂತ್ರಣಕ್ಕೆ ಡಿಜಿಟಲ್ ಕ್ಷ-ಕಿರಣ ಕೊಠಡಿ ಮತ್ತು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಸಹಕಾರಿ ಆಗಲಿವೆ. ವೈದ್ಯೋ ನಾರಾಯಣೋ ಭವ ಎಂದು ಕರೆಯುತ್ತೇವೆ.  ಅಂದರೆ ವೈದ್ಯರು ದೇವರ ಸಮಾನರಾಗಿದ್ದಾರೆ ಎಂದರ್ಥ.  ಕೊರೊನಾ ಸಮಯದಲ್ಲಿ ಇಡೀ ಜಗತ್ತು ವೈದ್ಯರನ್ನು ವಾರಿಯರ್ಸ್ ಎಂದು ಕರೆಯಿತು.  ಈ ಸಮಯದಲ್ಲಿ ಆಶಾ ಕಾರ್ಯಕರ್ತೆಯರೂ ಕೂಡಾ ಬಹಳಷ್ಟು ಕಾರ್ಯ ಮಾಡಿದ್ದಾರೆ.  ಮನೆ-ಮನೆಗೆ ತೆರಳಿ ಕೊರೊನಾ ಪತ್ತೆ, ಜಾಗೃತಿ ಸೇರಿದಂತೆ ವಿವಿಧ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ.  ಹಾಗಾಗಿ ಇವರಿಗೆ ನಾವೆಲ್ಲರೂ ಋಣಿಯಾಗಿದ್ದೇವೆ.  ಸಧ್ಯ ದೇಶದ ಎರಡು ಕಂಪನಿಗಳಿಗೆ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಗೆ ಅನುಮತಿ ಸಿಕ್ಕಿದೆ.  ಇದರಿಂದ ಸಾರ್ವಜನಿಕರಲ್ಲಿ ಆಶಾ ಭಾವನೆ ಮೂಡಿದೆ.  ಆದರ್ಶ ರಾಷ್ಟ್ರ ಆಗಬೇಕಾದರೆ ವೈದ್ಯರು ಸಹಕಾರ ಮುಖ್ಯವಾಗಿದೆ ಎಂದರು.
ಟ್ವಾಯ್ಸ್ ಕಾರ್ಖಾನೆಯ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬರುತ್ತಿದ್ದಾರೆ. ಸಿಂಗಟಾಲೂರು, ಕೊಪ್ಪಳ ಏತ ನೀರಾವರಿ ಯೋಜನೆಗಳು ಕೂಡಾ ಅನುಣ್ಠಾನಗೊಂಡಿವೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಬೀನಾ ಗೌಸ್ ಅವರು ಆರೋಗ್ಯ ಚೇತನ ಕ್ಷಯರೋಗ ಸಹಾಯವಾಣಿ ಉದ್ಘಾಟಿಸಿದರು.  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ್ ಅವರು ಭೋಲಾ ಕಾಲೆಂಡರ್ ಬಿಡುಗಡೆಗೊಳಿಸಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಕಾರಿ ಡಾ. ಟಿ.ಲಿಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಸ್ವಾಗತಿಸಿದರು.  ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎಂ.ಜಿ. ಮಹೇಶ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ಎಚ್.ಪಿ.ಟಿಯ ಸಿ.ಇ.ಒ. ಮೋಹನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಇರ್ಫಾನಾ ಅಂಜುಮ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಜುಮ್ಮಣ್ಣನವರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಜಂಬಯ್ಯ, ಉಪವಿಭಾಗಾಧಿಕಾರಿ ಡಾ. ಈಶ್ವರ ಸವಡಿ, ಬಳ್ಳಾರಿ ಟಿಬಿ ಅಧಿಕಾರಿ ಡಾ.ಇಂದ್ರಾಣಿ ಇದ್ದರು.  ಅತ್ಯುತ್ತಮ ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಖಾಸಗಿ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಮಾಜ ಸೇವಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Please follow and like us:
error