ಡಿಜಿಟಲ್ ಕರೆನ್ಸಿಯ ಯುಗ ಆರಂಭವಾಗಿದೆ: ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ

ಧರ್ಮಸ್ಥಳ, ಅ.29: ದೇಶದ ಕರೆನ್ಸಿ ಪದ್ಧತಿ ವಿವಿಧ ಕಾಲದಲ್ಲಿ ಬದಲಾವಣೆ ಕಂಡಿದ್ದು, ಈಗೇನಿದ್ದರೂ ಡಿಜಿಟಲ್ ಯುಗ. ಅದರಲ್ಲೇ ವ್ಯವಹಾರ ಮುಂದುವರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. 

ಉಜಿರೆ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಟೇಡಿಯಂನಲ್ಲಿ ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 12 ಲಕ್ಷ ಸ್ವಸಹಾಯ ಸಂಘದ ಸದಸ್ಯರಿಗೆ ರೂಪೇ ಕಾರ್ಡ್ ವಿತರಣೆ, ತಂತ್ರಾಂಶ ಆಧಾರಿತ ಸ್ವಸಹಾಯ ಸಂಘ ನಿರ್ವಹಣೆ ಒಪ್ಪಂದ ವಿನಿಮಯ ಮತ್ತು ‘ಭೂಮಿ ತಾಯಿಯನ್ನು ರಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಅಭಿಯಾನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನೋಟು ಅಮಾನ್ಯೀಕರಣದ ನಂತರ ನಡೆದ ಸಂಸತ್ ಅಧಿವೇಶನದಲ್ಲಿ ತಮ್ಮನ್ನು ತಾವು ಬಹಳ ದೊಡ್ಡ ಅರ್ಥಿಕ ತಜ್ಞರು ಎಂದೆನಿಸಿಕೊಂಡವರು ದೇಶದಲ್ಲಿ ನಗದುರಹಿತ ವ್ಯವಹಾರ ಸಾಧ್ಯವೇ ಇಲ್ಲ,‌ ದೇಶದಲ್ಲಿ ಬಡತನ,‌ ಅನಕ್ಷರತೆ ಇದೆ ಎಂದು ವಾದಿಸಿದ್ದರು. ಇಲ್ಲಿ ಡಾ.ವೀರೇಂದ್ರ ಹೆಗ್ಗಡೆ 12 ಲಕ್ಷ ಮಂದಿಗೆ‌ ರುಪೇ ಕಾರ್ಡ್ ನೀಡುವ ಮೂಲಕ ಪಾರ್ಲಿಮೆಂಟ್ ಪ್ರಶ್ನೆಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದರು.

ದೇಶದಲ್ಲಿ ಜೆಮ್ ಎಂಬ ಆನ್‌ಲೈನ್ ಪೋರ್ಟಲ್ ಆರಂಭಿಸಿದ್ದು,‌ ಇದರಲ್ಲಿ ಸರಕಾರ ತನಗೆ ಬೇಕಾದ‌ ವಸ್ತುಗಳ ಬೇಡಿಕೆ ಸಲ್ಲಿಸುತ್ತದೆ. ವಿವಿಧ ವಸ್ತುಗಳ ಉತ್ಪಾದಕರು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಲ್ಲಿ ನೇರ ವ್ಯವಹಾರ, ಉತ್ತಮ ಮಾರುಕಟ್ಟೆ ಸಿಗುತ್ತದೆ. ದೇಶದ 15 ರಾಜ್ಯಗಳು ಜೆಮ್ ಜತೆ ಒಪ್ಪಂದ ಮಾಡಿಕೊಂಡಿದ್ದು,‌ ಕರ್ನಾಟಕ ಸರಕಾರ ಕೂಡಾ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜಗತ್ತಿನ ಎಲ್ಲ ರಾಷ್ಟ್ರಗಳೂ ಕೌಶಲ್ಯಕ್ಜೆ ಆದ್ಯತೆ ನೀಡುತ್ತಿವೆ. ಅದರ ಮೂಲಕ ಉದ್ಯೋಗ, ದೇಶ ಕಟ್ಟುವ ಕೆಲಸ ನಡೆಯುತ್ತಿವೆ. ಇದಕ್ಕೆ ನಮ್ಮ ದೇಶದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನುಡಿದರು.

ಸಮುದ್ರ ಕಳೆ ಗಿಡ ಬೆಳೆಸಿ: ಮಂಗಳೂರು ಸಮುದ್ರ ಕಿನಾರೆಯ ಮೀನುಗಾರರು ಸಮುದ್ರ ಕಳೆ ಗಿಡ ಬೆಳೆಸಬೇಕಿದ್ದು, ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು  ಹೇಳಿದರು.

ಒಂದು ಬುಟ್ಟಿಯಲ್ಲಿ ಬೇರು ಹಾಕಿ ನೀರಿನಲ್ಲಿ 45 ದಿನದಲ್ಲಿ ಬೆಳೆದು ಫಸಲು ಬರುತ್ತದೆ. ಅದನ್ನು ತಂದು ಕೃಷಿಗೆ ಗೊಬ್ಬರ ರೂಪದಲ್ಲಿ ಬಳಸಿದರೆ ಅದರ ಜಿನುಗುವ ನೀರಿನಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದನ್ನು ಸರಕಾರದ ಮುಂದೆ ಇಡಲಿಲ್ಲ. ಅಲ್ಲಿ ಹೇಳಿದರೆ ಹಲವು ನೆಪ ಹೇಳುತ್ತಾರೆ. ಧರ್ಮಸ್ಥಳದ ಮೇಲಿನ ನಂಬಿಕೆಯಿಂದ ಇಲ್ಲಿ ಹೇಳಿದ್ದು, ಈ ಪ್ರಯೋಗ ಮಾಡಿ ಎಂದು ಡಾ.ಹೆಗ್ಗಡೆ ಅವರಿಗೆ ಮೋದಿ ಸಲಹೆ ಮಾಡಿದರು.

 ನಮ್ಮ ರೈತರು 2020ಕ್ಕೆ ಶೇ.50ರಷ್ಟು ಯೂರಿಯಾ ಕಡಿಮೆ ಮಾಡುತ್ತೇವೆ ಎಂದು ಸಂಕಲ್ಪ ಮಾಡಬೇಕು. ಅದರಿಂದ ಉತ್ಪಾದನೆ ಕಡಿಮೆ ಆಗುವುದಿಲ್ಲ, ಹಣ ಉಳಿತಾಯ ಆಗಲಿದೆ. ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದು ಮೋದಿ ಸಲಹೆ ಮಾಡಿದರು.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಆಗಮಿಸಿ ದೇವರ ದರ್ಶನ ಮಾಡಿದರು.

ಸಮಾರಂಭದಲ್ಲಿ ಕೇಂದ್ರ ಅಂಕಿ ಮತ್ತು ಕಾರ್ಯಕ್ರಮ ಅನುಷ್ಠಾನ ಡಿ.ವಿ.ಸದಾನಂದ ಗೌಡ, ರಾಸಾಯನಿಕ, ರಸಗೊಬ್ಬರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಸಂಸದರಾದ ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್‌ ಕಟೀಲು, ಶಾಸಕ ವಸಂತ ಬಂಗೇರ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ ಸ್ವಾಗತಿಸಿದರು. ಡಾ.ಯಶೋವರ್ಮ ಕಾರ್ಯಕ್ರಮ ನಿರೂಪಿಸಿದರು.

ಡಿಜಿಟಲ್ ಇಂಡಿಯಾಗೆ ಕೊಡುಗೆ ನೀಡುತ್ತಿರುವ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಸ್ವಸಹಾಯ ಸಂಘದ ಮಹಿಳೆಯರನ್ನು ಅವರು ಇದೇ ಸಂದರ್ಭ ಅಭಿನಂದಿಸಿದರು.

ಪ್ರಧಾನಿಗೆ ಸನ್ಮಾನ

ಇದಕ್ಕೂ ಮೊದಲು ಪ್ರಧಾನಿ ಮೋದಿಯವರನ್ನು  ಡಾ.ವೀರೇಂದ್ರ ಹೆಗ್ಗಡೆಯವ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಡಾ.ವೀರೇಂದ್ರ ಹೆಗ್ಗಡೆಯವರನ್ನುಪ್ರಧಾನಿ ಶಾಲು ಹೊದಿಸಿ ಗೌರವಿಸಿದರು.

ರುಪೇ ಕಾರ್ಡ್ ವಿತರಣೆ

 ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ರುಪೇ ಕಾರ್ಡ್ ವಿತರಣೆ ನಡೆಯಿತು. ಯೋಜನೆಯ ಸದಸ್ಯರಾಗಿರುವ ಜಮೀಲಾ ಬಾನು, ಶಾಲಿನಿ ಎಂಬ ಇಬ್ಬರಿಗೆ ಸಾಂಕೇತಿಕ ರುಪೇ ಕಾರ್ಡ್ ಗಳನ್ನು ಪ್ರಧಾನಿ ಮೋದಿ ವಿತರಿಸಿದರು.

Please follow and like us:
error