ಡಾ. ರಹಮತ್ ತರೀಕೆರೆಯವರ ಸಾಹಿತ್ಯ : ಅನುಸಂಧಾನದ ನೆಲೆಗಳು -ಡಾ. ಆನಂದ್ ಋಗ್ವೇದಿ

ಗುರುಗಳಿಗೆ ಹುಟ್ಟುಹಬ್ಬದ ಶುಭಾಶಯಗಳು….

ನಾಡ ಸುತ್ತಾಟದಿಂದ ಪಡೆಯುವುದೇನು? ”

– ಡಾ. ರಹಮತ್ ತರೀಕೆರೆಯವರ ಸಾಹಿತ್ಯವನ್ನು ಅನುಲಕ್ಷಿಸಿ.

ಕನ್ನಡ ನಾಡಿನ ಜನ ಸಂಸ್ಕøತಿಯಲ್ಲಿ ‘ಸೀಮೆ’ ಮತ್ತು ‘ನಾಡು’ ಪರಿಕಲ್ಪನೆ ವಿಶಿಷ್ಟವಾದುದು. ಬಹುತೇಕ ಪ್ರಾಕೃತಿಕ ವಿಶಿಷ್ಟತೆ ಮತ್ತು ಪ್ರಾದೇಶಿಕ ಪ್ರತ್ಯೇಕತೆಯ ನೆಲೆಯಿಂದಲೇ ಗುರುತಿಸಲ್ಪಡುತ್ತಿದ್ದ ಈ ಸೀಮೆ ಮತ್ತು ನಾಡುಗಳನ್ನು ನಂತರದ ದಿನಗಳಲ್ಲಿ ಗುರುತಿಸುವ ರೀತಿ ಬದಲಾದಂತೆ ಕಾಣುತ್ತಿದೆ. ಹಾಗೆಂದೇ ಆಯಾ ಸೀಮೆಗಳನ್ನು ಮತ್ತು ನಾಡನ್ನು ರಾಜಕೀಯವಾಗಿ ಗಡಿ ರೇಖೆಗಳಿಂದ ಕಟ್ಟಿ ನಿರ್ದಿಷ್ಟಪಡಿಸಿದ ರಾಜತ್ವದ ನೆಲೆಯಿಂದಲೇ ಗುರುತಿಸುವ ಪರಿಕ್ರಮ ಶುರುವಾದಂತೆ ಭಾಸವಾಗುತ್ತದೆ. ತುಳುನಾಡು, ವೈನಾಡು, ಸೀರ್ ನಾಡು ಮೊದಲಾದ ಗುರುತಿಸುವಿಕೆಗಳಿಂದ ಭಿನ್ನವಾಗಿ – ಮುಂಬೈ ಕರ್ನಾಟಕ, ಹೈದ್ರಬಾದ್ ಕರ್ನಾಟಕ ಎಂದೇ ಗುರುತಿಸಲ್ಪಡುತ್ತಿವೆ. ರಾಯಲ್ ಸೀಮೆ, ಎರೆ ಸೀಮೆ ಎಂದೆಲ್ಲಾ ಗುರುತಿಸಲ್ಪಟ್ಟ ಭೂ ಪ್ರದೇಶಗಳು ಇಂದು ನಕ್ಷೆಯಲ್ಲಿ ಬೇರೆ ಬೇರೆ ಹೆಸರನ್ನು ಧರಿಸಿವೆ. ಅಂತಹ ಎಲ್ಲಾ ಒಳನಾಡ ಪ್ರದೇಶಗಳಿಗೆ ತಮ್ಮದೇ ಆದ ಚರಿತ್ರೆಯಿದೆ, ಭೂತಕಾಲದ ನೆನಪುಗಳಿವೆ, ಪಳೆಯುಳಿಕೆಗಳ ನಡುವೆಯೇ ಅರಳಿ ನಿಂತ ವರ್ತಮಾನದ ಬದುಕಿದೆ. ‘ಈ ನಾಡು‘ ಆಳಿದವರ ಆಂತರಿಕ ಕಚ್ಚಾಟ ಮತ್ತು ಪರಕೀಯರ ಕುಟಿಲತೆಯಿಂದ ಒಂದೊಮ್ಮೆ ದಾಸ್ಯಕ್ಕೆ ಈಡಾದದ್ದು, ತನ್ನ ಸೀಮೆಗಳೆಲ್ಲಾ ಸ್ವಾತಂತ್ರ್ಯ ಪಡೆಯುವ ಹುಮ್ಮಸ್ಸಿನಲ್ಲಿ ತಮ್ಮನ್ನು ಆಳಿದವರ ‘ಗತ ವೈಭವದ’ ಚರಿತ್ರೆಯನ್ನೇ ಆವಾಹಿಸಿಕೊಂಡಿದೆ. ಈ ಚರಿತ್ರೆ ನೀಡುವ ; ‘ಗತ ವೈಭವ’ದ ಭಾವುಕತೆ, ತನ್ನನ್ನು ಆಳಿದವರ ಕುರಿತೇ ಮೂಡುವ ಆರಾಧನಾ ಭಾವದಿಂದಾಗಿ ‘ನಾಡಿನ’ ಭೂತ ಕಾಲವೆಂದರೆ ರಾಜ ಮನೆತನಗಳ ಏಳು ಬೀಳಿನ ಹೆಜ್ಜೆ ಗುರುತುಗಳಷ್ಟೇ – ಎಂದು ಭಾವಿಸಿದೆ. ಹಾಗೆ ಚರಿತ್ರೆಯನ್ನು ಕಟ್ಟಿಕೊಟ್ಟವರು ಅದರ ಸಾಂಸ್ಕøತಿಕ ನಿರ್ವಚನ ಮಾಡತೊಡಗಿದ್ದರೆ, ಅಂತಹ ಸಂಸ್ಕøತಿಯ ರಕ್ಷಕರು ವೀರಾವೇಶದಿಂದ ಭೂತದ ಕಿರೀಟತೊಟ್ಟು ವರ್ತಮಾನದಲ್ಲಿ ವಿಜೃಂಭಿಸತೊಡಗಿದ್ದಾರೆ.

ಹಾಗೆ ಕಂಡರಿಸಲ್ಪಟ್ಟ ‘ನಾಡು’ ಯಾರದು? ರಾಜತ್ವದಿಂದ ಮೆರೆದು ಆಳಿ ಆರ್ಭಟಿಸಿ ನಶಿಸಿ ಹೋದವರದ್ದಾದರೆ – ‘ನಮ್ಮ ನಾಡು’ ಯಾವುದು? ಹಾಗೆ ಪ್ರಶ್ನಿಸಿಕೊಳ್ಳುತ್ತಲೇ ಜನರ ನಾಡನ್ನು, ಅದರ ಸಾಸ್ಕøತಿಕ ಸ್ವರೂಪವನ್ನು ಶೋಧಿಸಲು ಹಲವರು ತೊಡಗಿಸಿಕೊಂಡಿದ್ದಾರೆ. ಅಂತಹವರಲ್ಲಿ ಡಾ. ರಹಮತ್ ತರೀಕೆರೆಯವರು ಮುಖ್ಯರು.

ಡಾ. ರಹಮತ್ ತರೀಕೆರೆಯವರು ‘ನಾಡು’ ಪರಿಕಲ್ಪನೆಯನ್ನು ‘ಕಲ್ಪಿತ’ ಮತ್ತು ‘ಒಪ್ಪಿತ’ ನೆಲೆಗಳ ಬದಲಾಗಿ ‘ಕಟ್ಟಿಕೊಳ್ಳುವ’ ಮೂಲಕವೇ ಕಂಡರಿಸಲು ಬಯಸುವಂತಹವರು. ನಡೆದಷ್ಟೂ ವಿಸ್ತಾರವಾಗುವ ಈ ನೆಲ, ಅಲೆದಷ್ಟೂ ಆಪ್ತವಾಗುವ ವಲಯ, ತಿರುಗಾಡಿದಷ್ಟೂ ತನ್ನ ತಿಳಿವನ್ನ ನಡವಳಿಕೆಗಳನ್ನ ಬಿಚ್ಚಿಕೊಳ್ಳುವ ಈ ನೆಲದ ಬಗ್ಗೆ ಅವರಿಗೆ ಅಪರಿಮಿತ ಕುತೂಹಲ. ಆ ಕುತೂಹಲವೇ ತಿರುಗಾಟಕ್ಕೆ ಹಚ್ಚಿದಂತಿದೆ. ಹಾಗೆಂದೇ ಡಾ. ರಹಮತ್ ತರೀಕೆರೆಯವರು ಸಾಹಿತ್ಯದ ಅಧ್ಯಾಪಕರಾಗಿ – ಕೃತಿಯಿಂದ ಪಠ್ಯದೆಡೆಗೆ, ಸಾಮಾಜಿಕ ಅಧ್ಯಯನಕಾರರಾಗಿ – ಪ್ರದೇಶದಿಂದ ಪ್ರದೇಶಕ್ಕೆ, ಸಹಜ ಕುತೂಹಲದ ಯಾತ್ರಿಯಂತೆ ಸಂಸ್ಕøತಿಯಿಂದ ಸಂಸ್ಕøತಿಗೆ ಸುತ್ತಾಡುತ್ತಿದ್ದಾರೆ ಎನ್ನಿಸುತ್ತದೆ. ಅವರ ಎಲ್ಲಾ ಬರಹಗಳಲ್ಲಿ ಈ ಸುತ್ತಾಟ ‘ಅಲೆಮಾರಿತನ’ದ ವ್ಯಾಪ್ತಿಯನ್ನು ಹಿಗ್ಗಿಸಿದೆ, ವಿಶೇಷ ಭಿತ್ತಿಯನ್ನು ನಿರ್ಮಿಸಿದೆ.

ತನ್ನ ಇರುವಿಕೆಗಿಂತ ಭಿನ್ನವಾದ ಮತ್ತೊಂದು ಇರುವಿಕೆಯನ್ನ, ಅದರ ವಿಶೇಷತೆಯನ್ನ, ಸಾಂಸ್ಕøತಿಕ ವಿಶಿಷ್ಟತೆಯನ್ನು ಒಪ್ಪುವ, ಗೌರವಿಸುವ ಮತ್ತು ಆ ಮೂಲಕವೇ ಭಿನ್ನತೆಯನ್ನು ಪರೀಕ್ಷಿಸಲೆಂದು ಶೋಧಕ್ಕೆ ತೊಡಗುವ ಉತ್ಸುಕತೆ ಇಲ್ಲದೆ ಯಾರೂ ತಿರುಗಾಡಲಾರರು. ಆ ತಿರುಗಾಟವನ್ನು ಸುತ್ತಾಟದಂತೆ ತಮ್ಮ ಸ್ಥಾಯಿಭಾವ ಆಗಿಸಿಕೊಳ್ಳಲಾರರು. ಈ ರೀತಿ ಭಿನ್ನತೆಯನ್ನು ಗೌರವಿಸುವ ಮತ್ತು ಶೋಧದ ಮೂಲಕ ಭಿನ್ನತೆಯ ಸ್ವರೂಪವನ್ನು ಅರಿಯುವ, ಚಿಂತಿಸಿ ನಿಕಷಕ್ಕೆ ಒಡ್ಡುವ ಕ್ರಮ ಡಾ. ರಹಮತ್ ತರೀಕೆರೆಯವರ ಬರಹಗಳನ್ನು ರೂಪಿಸಿದೆ, ಅವರ ಚಿಂತನೆಯನ್ನ ಒಂದು ಅನನ್ಯ ಕಥನದ ಮಾದರಿಗೆ ನಿಲುಕುವಂತೆ ಮಾಡಿದೆ. ಈ ನಿಲುಕಿನಲ್ಲೇ ಡಾ. ರಹಮತ್ ತರೀಕೆರೆಯವರ ಸಾಹಿತ್ಯ ಕೃತಿಗಳ ವಿಮರ್ಶೆ, ಸಾಂಸ್ಕøತಿಕ ಪಠ್ಯವಾಗಿ ‘ಸೂಫಿ’ ಮತ್ತು ‘ನಾಥ ಪಂಥ’ಗಳ ನಿರ್ವಚನ, ಸಾಮಾಜಿಕ ಅಧ್ಯಯನದ ಭಾಗವಾಗಿ ಒಡಮೂಡಿರುವ ‘ಧರ್ಮ ಪರೀಕ್ಷೆ’ಯಂತಹ ವಿಶ್ಲೇಷಣೆ, ಪ್ರವಾಸಿಯಾಗಿ ‘ಅಂಡಮಾನ್’ ಮತ್ತು ‘ಕದಳಿ ಹೊಕ್ಕು ಬಂದೆ’ – ಕೃತಿಗಳಾಗಿ ಲಭ್ಯವಾಗಿವೆ. ಈ ಅಲೆದಾಟದ ಗಾಳಿಯ ದಿಕ್ಕು ಬಲ್ಲವರಿಗೆ ‘ಮರದೊಳಗಣ ಕಿಚ್ಚು’ ಕೂಡಾ ಗೊತ್ತು! ಹಲವು ಸಂಸ್ಕøತಿಗಳೊಂದಿಗೆ ಒಡನಾಡಿ ಹೊಕ್ಕು ಬಂದವರಿಗೆ ಪ್ರತಿಯೊಂದು ಸಂಸ್ಕøತಿಯೊಳಗಣ ‘ಪ್ರತಿ ಸಂಸ್ಕøತಿ’ ಪರಿಚಿತ!!

ಡಾ. ರಹಮತ್ ತರೀಕೆರೆಯವರ ‘ಚಿಂತನೆಯ ಪಾಡು’ ಅಂತಹದು. ಸಾಹಿತ್ಯ ಕೃತಿಯೊಂದನ್ನು ವಿಶ್ಲೇಷಿಸಲು, ವಿಮರ್ಶಿಸಲು ಕೈಗೆತ್ತಿಕೊಂಡೇ ಅದರ ಒಳ ಹೂರಣ, ಹೊರ ಆವರಣವನ್ನ ಏಕಕಾಲಕ್ಕೆ ದರ್ಶಿಸಬಲ್ಲ ಪರಿ ಅದು. ಪೂರ್ವಾಗ್ರಹಗಳಿಲ್ಲದ, ಪಾಂಡಿತ್ಯದ ಪರಿಪ್ರ್ಯೇಕ್ಷವನ್ನೊಲ್ಲದ ಈ ಲಹರಿ – ಸುತ್ತಾಡುತ್ತಾ ಕೃತಿಯನ್ನು ಪರಿಚಯಿಸುವ, ಪರಿಶೀಲಿಸುವ ಪರಿ – ಒಂದು ಪರೀಕ್ಷೆ. ಅದು ಕೃತಿಯ ಪರೀಕ್ಷೆ, ಕೃತಿ ಒಳಗೊಂಡ ಪರಿಸರದ, ಸಂಸ್ಕøತಿಯ ಮತ್ತು ತಾತ್ವಿಕತೆಯ ಪರೀಕ್ಷೆ. ಅದು ನಿಜವಾದ ‘ಧರ್ಮ ಪರೀಕ್ಷೆ’ ಕೂಡಾ.

ಬೆಳಗೆರೆ ಕೃಷ್ಣ ಶಾಸ್ತ್ರಿಯವರ ಪ್ರಸಿದ್ಧ ಕೃತಿ ‘ಯೇಗ್ದಾಗೆಲ್ಲಾ ಐತೆ’ ಪುಸ್ತಕವನ್ನು ಪರಿಶೀಲಿಸುತ್ತಾ ಡಾ. ರಹಮತ್ ತರೀಕೆರೆಯವರು, ಆ ಕೃತಿ ಒಳಗೊಂಡ ಮುಕುಂದೂರು ಸ್ವಾಮಿಗಳ ಚರ್ಯೆ ಮತ್ತು ಚರಿತ್ರೆಯನ್ನು ಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಈ ಪರಿಶೀಲನೆಯು ಜನತೆಯ ನಡುವೆಯೇ ಸಾಮರಸ್ಯದಿಂದ ಭಕ್ತಿಯ ಅನುರಕ್ತಿಯಿಂದ, ಭವದ ವಿರಕ್ತಿಯಿಂದ ಸಂತರಂತೆ ಬಾಳಿ ಬದುಕಿದ ಚೇತನಗಳ ಅನನ್ಯತೆಯನ್ನು ಗುರುತಿಸುತ್ತದೆ. ಅಸಾದೃಶ ಪವಾಡದಂತೆ ಕಾಣುವ ಅವರೆಲ್ಲರ ವರ್ತನೆಗಳ ಹಿಂದಿರುವ ಸಹಜ ಮುಗ್ಧತೆಯನ್ನು, ಪ್ರಾಪಂಚಿಕ ಲಾಲಸೆಯಿಲ್ಲದ ಅವರ ಅಮಾಯಕತೆಯನ್ನು ಕಾಣಿಸಿ, ‘ಅವಧೂತ’ತನದ ದರ್ಶನ ಒಡಮೂಡಿಸುತ್ತದೆ. ‘ಸೂಫಿ’ ಪರಂಪರೆಯನ್ನು ಬಲ್ಲ, ‘ನಾಥ’ರನ್ನು ಕಂಡ ಈ ದರ್ಶನಕ್ಕೆ ‘ಅವಧೂತ’ರ ಪರಿಚಯ ಮತ್ತು ಸಮುದಾಯಗಳೊಂದಿಗಿನ ಅವರ ಸಖ್ಯ ಮಹತ್ವದ್ದೆನಿಸುತ್ತದೆ. ‘ಚಿಂತನೆಯ ಪಾಡು’ವಿನ ಈ ತಾತ್ವಿಕ ಎಳೆಗಳು ಪರಿಕಲ್ಪಿಸಿದ ‘ಪ್ರತಿ ಸಂಸ್ಕøತಿ’ಯ ನಂಬುಗೆ ಮತ್ತು ನೆಲೆಗಳೇ ಕೃತಿಯೊಂದರ ವ್ಯಕ್ತಿತ್ವದಲ್ಲಿ ಅಡಗಿದ್ದನ್ನ ಶೋಧಿಸಿ, ನೆಲದ ನಡವಳಿಕೆಗಳನ್ನ ಮಹತ್ತೀಕರಿಸಲು ಸಾಧ್ಯವಾಗಿಸಿವೆ.

ಡಾ. ರಹಮತ್ ತರೀಕೆರೆಯವರ ಜನಪ್ರಿಯ ಅಂಕಣದ ಶೀರ್ಷಿಕೆಯೇ “ನಡೆದಷ್ಟೂ ನಾಡು”. ಹೆಸರೇ ಸೂಚಿಸುವಂತೆ ಅಲೆಮಾರಿತನದಿಂದ ಸ್ವತಃ ನಡೆದೇ ಕಟ್ಟಿಕೊಂಡ ನಾಡು, ಮತ್ತು ಕಲ್ಪಿತ ಚರಿತ್ರೆಯನ್ನು ಒಪ್ಪಲಾಗದೇ ಆ ನಾಡನ್ನು ಅದರ ಎಲ್ಲಾ ಪಲ್ಲಟಗಳೊಂದಿಗೆ ಅರಿಯುವ ವರ್ತಮಾನ – ಆ ‘ಅಲೆಮಾರಿತನ’ವನ್ನೇ ಒಂದು ಮೌಲ್ಯವಾಗಿ ರೂಪಿಸಿದೆ. ಜಂಗಮರ ತಿರುಗಾಟ, ಸೂಫಿಗಳ ಅಲೆದಾಟ, ನಾಥರ ಪರ್ಯಟನೆ, ಅವಧೂತರ ಪರಿವ್ರಾಜಕತೆಯನ್ನ ಪ್ರತಿಬಿಂಬಿಸುವ ಈ ಅಲೆಮಾರಿತನ ಆ ಕಾರಣಕ್ಕೇ ಒಂದು ಸಾಧನೆಯೂ ಹೌದು, ಮಿತಿಯೂ ಹೌದು. ಪ್ರವಾಸ ಕಥನಗಳಿಗಾಗಿ ಪ್ರಖ್ಯಾತರಾದ ಲೇಖಕ ವಿ.ಎಸ್. ನೈಪಾಲ್‍ರಂತೆ ಒಂದು ನಾಡಿನ ವರ್ತಮಾನವನ್ನು ಅದರ ಚರಿತ್ರೆಯ ಸಾವಿರಾರು ದಂಗೆ ಮತ್ತು ಗುಣವಾಗದ ಗಾಯಗಳ ಮೂಲಕ ಗ್ರಹಿಸದ ಡಾ. ರಹಮತ್ ತರೀಕೆರೆಯವರು ಚರಿತ್ರೆಯ ಅಂಶಗಳನ್ನು ಗಮನಿಸುವುದು ವರ್ತಮಾನದ ಬಿಕ್ಕಟ್ಟಿನ ಮೂಲ ಹುಡುಕುವುದಕ್ಕೆ. ಹಾಗೆಂದೇ ‘ಮಳಖೇಡ’ದಂತಹ ಪ್ರಾಚೀನ ರಾಜಧಾನಿಯಾಗಿದ್ದ ಊರಿಗೆ ಹೋದಾಗಲೂ, ದಾರಿ ಮುಕ್ತಾಯವಾಗುವ ‘ಮೇಲುಕೋಟೆ’ಯಂತಹ ಊರನ್ನು ಹೊಕ್ಕಾಗಲೂ ಅವರಿಗೆ ಊರ ವರ್ತಮಾನ, ಅದರ ಚಲನರಹಿತ ಸ್ಥಿತಿ – ಕೇವಲ ಸಮಾಜ ಅಧ್ಯಯನಕಾರರಿಗೆ ಕಾಣುವಂತೆ ಕಾಣದೇ – ಸಾಹಿತ್ಯದ ಮತ್ತು ಸಂಸ್ಕøತಿಯ ಚಿಂತಕರಿಗೆ ‘ಯದುಗಿರಿಯ ವಿಕಾಸವಾಗದ ಮೌನ’ದಂತೆ ಕಂಡುಬಂದಿದೆ.

ಒಳನಾಡ ಈ ‘ಪ್ರವಾಸ’ಗಳಲ್ಲಿ ಪ್ರದೇಶದ ಪ್ರೇಕ್ಷಣೀಯತೆ ಮುಖ್ಯವಾಗುವುದಿಲ್ಲ, ಬದಲಿಗೆ ಆ ಪ್ರದೇಶಗಳ ಅಪೇಕ್ಷೆ ಮತ್ತು ನಿರಾಸೆ ದಾಖಲಾಗುತ್ತಾ ಬಂದಿದೆ. ‘ಕೊಟ್ಟೂರಿನ ರೈಲು’ ಕಥನವೂ ಈ ತೆರನಾದ ಪ್ರವಾಸದಿಂದಲೇ ಮೂಡಿರುವಂತಹದು. ನಿರಂತರ ಅಲೆದಾಡುವ ಪ್ರವಾಸಿಗೆ ಸಹಜವಾದ ಕುತೂಹಲದಂತೆ, ಅಪರಿಚಿತವಾದುದನ್ನು ಅರಿಯುವ ಉತ್ಸುಕತೆಯಂತೆಯೇ, ಕಂಡದ್ದನ್ನೆಲ್ಲ ಯಾವ ಪೂರ್ವಾಗ್ರಹವಿಲ್ಲದೇ ಸ್ವೀಕರಿಸಿ ವಿಶ್ಲೇಷಿಸುವ ಒಂದು ಸಹಜ ಮುಗ್ಧತೆಯು ಪ್ರಾಪ್ತವಾಗುತ್ತದೆ. ಅಂತಹ ಮುಗ್ಧತೆ; ಬರಹದಲ್ಲಿ ತನ್ನ ರಾಜಕೀಯ ನಿಲುವು, ತಾತ್ವಿಕ ನೆಲೆಗಳನ್ನು ಹೇರದೆಯೂ ಸಹಜತೆಯಿಂದ ತನ್ನತನವನ್ನ ಪ್ರಕಟಿಸಲು ಸಶಕ್ತವಾದುದು. ಎಂದೇ ದಾರಿಹೋಕನಂತೆ ಬರಿಯೆ ಕಣ್ಣು ಹಾಯಿಸದೇ ಎಲ್ಲವನ್ನೂ ನಿರುಕಿಸುವ, ನಿಟ್ಟಿಸಿದ್ದನ್ನು ನೇರವಾಗಿ ದಾಟಿಸುವ ಪರಿಕ್ರಮ ಇಂತಹ ‘ಪ್ರವಾಸ’ ಕಥನಗಳಲ್ಲಿ ಸಾಧ್ಯವಾಗಿದೆ.

ಆದರೂ ಈ ಮುಗ್ಧತೆಯೂ ತೊಡಕಾಗುವ ಪರಿಯೂ ಈ ಬರಹಗಳಲ್ಲಿ ದಾಖಲಾಗದೇ ಉಳಿಯುವಂತಿಲ್ಲ. ಅಲೆದಾಡುವ ಪರಿಸರಗಳ ಕುರಿತು ಪೂರ್ವಾಗ್ರಹಪೀಡಿತವಲ್ಲದೆಯೂ ಅಪರಿಚಿತತೆಯನ್ನು ಹೊಂದಿರುವುದು ಶಕ್ಯ. ಬಿಜಾಪುರ ಸೀಮೆಯ ಬಡ ಮುಸ್ಲಿಂ ಹೆಣ್ಣುಮಗಳು ‘ಅಮೀರ್ ಬಾಯಿ ಕರ್ನಾಟಕಿ’ ಸ್ವತಃ ಪ್ರತಿಭೆ ಮತ್ತು ಪರಿಶ್ರಮದಿಂದ ನಟಿಯಾಗಿ, ಗಾಯಕಿಯಾಗಿ ಮುಂಬೈ ಕಲಾಲೋಕದಲ್ಲಿ ಬೆಳಗಿದ್ದನ್ನು ಬೆರಗಿನಿಂದ ಪರಿಭಾವಿಸುವಾಗ – ಈ ಪರಿಸರದಲ್ಲಿ ‘ಪ್ರವಾಸ’ ಮಾಡುತ್ತಾ ಲೇಖಕರು ಮುಗ್ಧರಾಗುತ್ತಾರೆ. ತಮ್ಮ ಗ್ರಹಿಕೆಗಳನ್ನು ದಾಟಿಸುತ್ತಾ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುವ ಲೇಖಕರು ಅಮೀರ್ ಬಾಯಿ, ಗೋಹರಾ ಬಾಯಿ ಮೊದಲಾದವರ ಮಾನಸಿಕ ಲೋಕವನ್ನು ಪ್ರಶ್ನಾತೀತವಾಗಿ ಮೆಚ್ಚಿಬಿಡುತ್ತಾರೆ. ಅಲೆಮಾರಿತನ ಒದಗಿಸುವ ಮುಗ್ಧತೆಯ ಅಪಾಯ ಇದು. ಅಪರಿಚಿತ ಪ್ರದೇಶಗಳನ್ನು ಪೂರ್ವ ನಿಶ್ಚಿತ ದೃಷ್ಟಿಕೋನವಿಲ್ಲದೇ, ಮುಗ್ಧತೆಯಿಂದಲೇ ಪ್ರವೇಶಿಸಿದಂತೆ ಅಪರಿಚಿತ ಮಾನಸ ಲೋಕಗಳನ್ನು ಪ್ರವೇಶಿಸಲಾಗದು. ಹಾಗೆಂದೇ ಮರಾಠಿ ರಂಗಭೂಮಿಯಲ್ಲಿ ಗೋಹರಾಬಾಯಿಯವರ ಕುರಿತು ಮಡುಗಟ್ಟಿಕೊಂಡಿರುವ ಅಸಮಧಾನವನ್ನು ಗ್ರಹಿಸಿಯೂ, ಗಂಧರ್ವರೊಂದಿಗಿನ ಅವರ ಸಖ್ಯವನ್ನು ಪ್ರಶ್ನಾತೀತವಾಗಿ ಮೆಚ್ಚುವ ಈ ಮುಗ್ಧತೆ, ಅಮಾಯಕತೆಯಂತೆಯೂ ಭಾಸವಾಗುತ್ತದೆ.

ಈ ಅಮಾಯಕತೆಯು ಕೇವಲ ಮುಗ್ಧತೆಯ ಪರಿಣಾಮವೇ? ಅಥವಾ ಆ ಮೂಲಕ ವೈಚಾರಿಕ ಮನಸ್ಸೊಂದು ಹೊಸ ಭಾಷ್ಯವನ್ನು ಬಯಸುತ್ತಿದೆಯೇ? ಪ್ರಾಯಶಃ ಡಾ. ರಹಮತ್ ತರೀಕೆರೆಯವರು ಅಮೀರ್ ಬಾಯಿ ಕರ್ನಾಟಕಿಯವರ ಜೀವನ ಚಿತ್ರ ಬರೆಯುತ್ತಾ ಮಾನುಷವಾದ ಮತ್ತು ಸಂವೇದನಾಶೀಲವಾದ ಹೊಸತೊಂದು ಬದುಕಿನ ಕ್ರಮವನ್ನು ಪರಿಶೋಧಿಸುತ್ತಿದ್ದಾರೆ ಎಂದೆನಿಸುತ್ತದೆ. ಈ ಪರಿಶೋಧ ಕೇವಲ ಭಾಷ್ಯ ರೂಪದ್ದಲ್ಲ, ಅದು ಮೂಲ ವ್ಯಾಕರಣವನ್ನು ಕಂಡು ಹಿಡಿಯುವ ರೀತಿಯದ್ದು. ನಿಜ, ತಮ್ಮೆಲ್ಲಾ ಅಲೆದಾಟ ತಿರುಗಾಟ, ಚಿಂತನೆಯ ಪಾಡಿನ ಪರಿಪಾಠಗಳಲ್ಲಿ ಮತ್ತು ಶೋಧದಲ್ಲಿ ಅವರು ಜಾಗತಿಕವಾದ ಮಾನವೀಯ ಅಂತಃಕರಣದ ವ್ಯಾಕರಣಕ್ಕಾಗಿ ಹುಡುಕಾಡುತ್ತಿದ್ದಾರೆ. ಆ ವ್ಯಾಕರಣ ರೂಪಿಸುವ / ರೂಪಿಸಿರಬಹುದಾದ ಭಾಷೆಯ ಬಗೆಗೆ ಸದಾ ಕುತೂಹಲಿತರಾಗಿರುವ ಡಾ. ರಹಮತ್ ತರೀಕೆರೆಯವರು ಹಾಗೆಂದೇ ಸಹಜ ಮುಗ್ಧತೆ ಪಡೆದವರು. ಈ ಭಾಷೆ ಜಗತ್ತಿನ ಎಲ್ಲಾ ಮಾನವ ಜೀವಿಗಳನ್ನು ದೇಶ-ಭಾಷೆ-ಧರ್ಮಗಳ ಗಡಿರೇಖೆಗಳಿಂದ ಮುಕ್ತಗೊಳಿಸಿ, ಆತಂರ್ಯದ ತಿಳಿವಿನ ಜಲದಲ್ಲಿ ತೊಳೆದು ಶುದ್ಧವಾಗಿಸಿ ಬೆಸೆಯುವಂತಹುದು. ಅಂತಹ ಭಾಷೆಯ ಪಡಿನೆಳಲನ್ನು ಸಾಹಿತ್ಯದಲ್ಲಿ, ಸಾಮಾಜಿಕ ಜೀವನದ ಪಠ್ಯಗಳಲ್ಲಿ, ತಿರುಗಾಟದಿಂದ ಮರು ಸೃಷ್ಟಿಸಿಕೊಂಡ ಆಕರಗಳಲ್ಲಿ ಡಾ. ರಹಮತ್ ತರೀಕೆರೆಯವರು ಶೋಧಿಸುತ್ತಿದ್ದಾರೆ. ಅಲೆದಷ್ಟೂ ಸಿಗುವ ‘ನಾಡು’ ಈ ಭಾಷೆಯ ವಲಯವಾಗಬೇಕು, ತಿರುಗಾಟದ ಸತ್ಯ ಈ ನೆಲೆಯ ಸಾತತ್ಯವಾಗಬೇಕು ಎಂದು ಅವರು ಬಯಸಿದ್ದಾರೆ.

ಈ ನಾಡಿನ ‘ಸುತ್ತಾಟ’ ಡಾ. ರಹಮತ್ ತರೀಕೆರೆಯವರಲ್ಲಿ ಹಾಗೊಂದು ವಿಶ್ವಾತ್ಮಕ ವ್ಯಾಕರಣದ ಭಾಷೆಯನ್ನು ಪರಿಶೋಧಿಸಲು ಪ್ರೇರೇಪಿಸಿದೆ. ಅವರ ಎಲ್ಲಾ ಕೃತಿ, ಬರಹಗಳು ಆ ಭಾಷೆಯನ್ನು ಓದಿ ಅರಿಯಲು ವರ್ಣಮಾಲೆಯನ್ನು ರೂಪಿಸ ಹೊರಟಿವೆ. ಭಾಷೆಯ, ವ್ಯಾಕರಣದ ಎಲ್ಲಾ ಆಯಾಮಗಳು ಪರಿಶೋಧಿತವಾಗಬೇಕಾದುದು ಡಾ. ರಹಮತ್ ತರೀಕೆರೆಯವರ ಆಶಯ. ಅದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ. ‘ಜಂಗಮತ್ವ’ವನ್ನು ಒಪ್ಪಿಕೊಂಡ ಶರಣ ಸಾಹಿತ್ಯವನ್ನು ಅಡಿಪಾಯವಾಗಿ ಪಡೆದ ಕನ್ನಡ ಸಾಹಿತ್ಯದ ವರ್ತಮಾನದ ಅಪೇಕ್ಷೆಯಾದ ಈ ‘ಭಾಷೆ’ಯನ್ನು ನಿಲುಕಿಸಿ ನಿರ್ವಚಿಸುವಂತಾಗುವುದೇ. . . . . ಡಾ. ರಹಮತ್ ತರೀಕೆರೆಯವರನ್ನು ಒಳಗೊಂಡು ಎಲ್ಲಾ ಪರಿವ್ರಾಜಕರಿಗೆ ‘ನಾಡು’ ನೀಡಬಹುದಾದ ಉಡುಗೊರೆ.

( ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮುಧೋಳದಲ್ಲಿ ಸೆಪ್ಟೆಂಬರ್ 23, 2011 ರಂದು ಏರ್ಪಡಿಸಿದ್ದ
‘ಡಾ. ರಹಮತ್ ತರೀಕೆರೆಯವರ ಸಾಹಿತ್ಯ : ಅನುಸಂಧಾನದ ನೆಲೆಗಳು’ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ )

_ ಡಾ. ಆನಂದ್ ಋಗ್ವೇದಿ