ಠಾಣಾಧಿಕಾರಿಯ ಖುರ್ಚಿಯಲ್ಲಿ ಕುಳಿತಿದ್ದ ರಾಧೆ ಮಾ ವಿರುದ್ಧ ದೂರು ದಾಖಲು

ಹೊಸದಿಲ್ಲಿ,ಅ.8: ಪೂರ್ವ ದಿಲ್ಲಿಯ ವಿವೇಕ ವಿಹಾರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ಖುರ್ಚಿಯಲ್ಲಿ ಕುಳಿತುಕೊಂಡಿದ್ದಕ್ಕಾಗಿ ಮತ್ತು ಪೊಲೀಸ್ ಸಮುದಾಯವನ್ನು ಅವಮಾನಿಸಿದ್ದಕ್ಕಾಗಿ ದಿಲ್ಲಿಯ ವಕೀಲ ಗೌರವ ಗುಲಾಟಿ ಅವರು ಸ್ವಯಂಘೋಷಿತ ದೇವಮಹಿಳೆ ರಾಧೆ ಮಾ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಿದ್ದಾರೆ. 

ರಾಧೆ ಮಾ ಅವರ ನಡವಳಿಕೆ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗೌರವವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಗುಲಾಟಿ ಹೇಳಿದ್ದಾರೆ.

ಠಾಣಾಧಿಕಾರಿ ಸಂಜಯ ಶರ್ಮಾರ ವೃತ್ತಿಪರವಲ್ಲದ ವರ್ತನೆಯ ಕುರಿತು ವಿಚಾರಣೆ ಗಾಗಿ ಅ.5ರಂದು ಆದೇಶಿಸಲಾಗಿತ್ತು ಮತ್ತು ವಿಚಾರಣೆ ಪೂರ್ಣಗೊಳ್ಳುವವರೆಗೆ ಜಿಲ್ಲಾ ಪೊಲೀಸ್ ಲೈನ್ಸ್‌ನಲ್ಲಿ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು.

ಸೆ.28ರಂದು ತೆಗೆದಿದ್ದೆನ್ನಲಾದ ಛಾಯಾಚಿತ್ರವೊಂದು ರಾಧೆ ಮಾ ಶರ್ಮಾರ ಖುರ್ಚಿಯಲ್ಲಿ ಕುಳಿತುಕೊಂಡಿದ್ದನ್ನು ಮತ್ತು ಶರ್ಮಾ ಎರಡೂ ಕೈಗಳನ್ನು ಜೋಡಿಸಿ ಆಕೆಯ ಪಕ್ಕ ವಿನೀತರಾಗಿ ನಿಂತುಕೊಂಡಿದ್ದನ್ನು ತೋರಿಸಿತ್ತು.

ಶರ್ಮಾರನ್ನು ಅಮಾನತುಗೊಳಿಸಲಾಗಿದೆ,ಆದರೆ ರಾಧೆ ಮಾ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಿಲ್ಲ ಎಂದು ಗುಲಾಟಿ ದೂರಿನಲ್ಲಿ ಹೇಳಿದ್ದಾರೆ.

Please follow and like us:
error