ಟ್ರ್ಯಾಕ್ಟರ್​ ಪರೇಡ್​ಗೆ ಪೊಲೀಸ್​ ಅಡ್ಡಿ; ಗಡಿಗಳಲ್ಲೇ ದಿಟ್ಟ ಹೋರಾಟ ಆರಂಭಿಸಿದ ರೈತರು!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ 2 ತಿಂಗಳಿನಿಂದ ದೆಹಲಿಯ ಸಿಂಗು ಗಡಿಯಲ್ಲಿ ಭಾರತದ ರೈತರು ಅಹಿಂಸಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ ಗಣರಾಜ್ಯ ದಿನವಾದ ಇಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಯನ್ನು ಆಯೋಜಿಸಲಾಗಿದೆ. ದೆಹಲಿಯ ಈ ರೈತ ಹೋರಾಟವನ್ನು ಬೆಂಬಲಿಸಿ ಕರ್ನಾಟಕದಲ್ಲೂ ವಿವಿಧ ರೈತ ಸಂಘಟನೆಗಳು “ಬೆಂಗಳೂರಿಗೆ ಟ್ರ್ಯಾಕ್ಟರ್​ ಚಲೋ” ಹೋರಾಟಕ್ಕೆ ಕರೆ ನೀಡಿದ್ದವು.

ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ನಡೆಸಿದ್ದ ರೈತ ಮುಖಂಡರು ಟ್ರ್ಯಾಕ್ಟರ್​ ರ‍್ಯಾಲಿ ನಡೆಸಿಯೇ ಸಿದ್ದ ಎಂದು ಖಡಕ್ ಆಗಿ ತಿಳಿಸಿದ್ದರು. ಅಲ್ಲದೆ ಟ್ರ್ಯಾಕ್ಟರ್​ ರ‍್ಯಾಲಿಗೆ ಅನುಮತಿ ನೀಡುವಂತೆ ಪೊಲೀಸ್​ ಆಯುಕ್ತರಿಗೂ ಮನವಿ ನೀಡಿದ್ದರು. ಆದರೆ, ಒಂದೆಡೆ ಪೊಲೀಸರು ಶಾಂತಿಯುವ ರ‍್ಯಾಲಿಗೆ ಅನುಮತಿ ನೀಡಿದ್ದರೆ, ಮತ್ತೊಂದೆಡೆ ಸರ್ಕಾರ ಯಾವುದೇ ಕಾರಣಕ್ಕೂ ಟ್ರ್ಯಾಕ್ಟರ್​ ರ‍್ಯಾಲಿಗೆ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಸರ್ಕಾರ ಮತ್ತು ಪೊಲೀಸರ ನಡುವಿನ ಸಮನ್ವಯತೆ ಹಳ್ಳ ಹಿಡಿದಿರುವ ಪರಿಣಾಮ ಇಂದು ರಾಜ್ಯದ ಮೂಲೆ ಮೂಲೆಯಿಂದ ಬೆಂಗಳೂರಿನ ಕಡೆಗೆ ಟ್ರ್ಯಾಕ್ಟರ್​ ರ‍್ಯಾಲಿ ಹೊರಟಿದ್ದ ರೈತ ಹೋರಾಟಗಾರರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಬೆಂಗಳೂರಿನ ವಿವಿಧ ಗಡಿ ಭಾಗಗಳಿಂದ ರೈತರು ನಗರವನ್ನು ಪ್ರವೇಶಿಸಲು ಮುಂದಾಗಿದ್ದಾರೆ. ಆದರೆ, ಇದೀಗ ಪೊಲೀಸರು ಅಲ್ಲೇ ಹೋರಾಟಗಾರರನ್ನು ತಡೆದು ನಿಲ್ಲಿಸಿದ್ದಾರೆ. ಆದರೆ, ರೈತ ಹೋರಾಟಗಾರರು ಮಾತ್ರ ರ‍್ಯಾಲಿ ನಡೆಸಿಯೇ ಸಿದ್ಧ ಎಂದು ಪಣ ತೊಟ್ಟಂತಿದೆ.

 

5 ಭಾಗಗಳಿಂದ ರಾಜಧಾನಿ ಪ್ರವೇಶಿಸಲಿದೆ ರೈತರ ಟ್ರ್ಯಾಕ್ಟರ್​ ರ‍್ಯಾಲಿ

 

ಕೃಷಿ ಕಾಯ್ದೆಯನ್ನು ವಿರೋಧಿಸಿರುವ ರೈತರು ಈಗಾಗಲೇ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್​ಗೆ ಮೆರವಣಿಗೆ ಹೊರಟಿದ್ದಾರೆ. ಆದರೆ, ಬೆಂಗಳೂರಿನ ನೆರೆಯ ಜಿಲ್ಲೆಗಳಾದ ತುಮಕೂರು, ಕೋಲಾರ, ಮೈಸೂರು, ಮಂಡ್ಯ, ಕೊಡಗು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಜಿಲ್ಲೆಗಳಿಂದ ರೈತರು ಟ್ರ್ಯಾಕ್ಟರ್​ ಸಮೇತ ಬೆಂಗಳೂರಿಗೆ ಆಗಮಿಸಿದ್ದಾರೆ.

ಬಿಡದಿ, ನಲಮಂಗಲ, ನಂದಿಕ್ರಾಸ್, ಹೊಸಕೋಟೆ ಸೇರಿದಂತೆ ಬೆಂಗಳೂರಿನ ವಿವಿಧ ಗಡಿಗಳ ಮೂಲಕ ರಾಜಧಾನಿಯನ್ನು ಪ್ರವೇಶಿಸುವುದು ರೈತ ಹೋರಾಟಗಾರರ ಉದ್ದೇಶ. ಆದರೆ, ಸೋಮವಾರ ರ‍್ಯಾಲಿಗೆ ಅನುಮತಿ ನೀಡಿದ್ದ ಪೊಲೀಸರು ಇಂದು ರಾಜಧಾನಿಯ ಎಲ್ಲಾ ಗಡಿಗಳನ್ನೂ ಬಂದ್​ ಮಾಡಿದ್ದಾರೆ. ರೈತ ಹೋರಾಟಗಾರರನ್ನು ಟ್ರ್ಯಾಕ್ಟರ್​ ಸಮೇತ ಅಲ್ಲಲ್ಲೆ ತಡೆದು ನಿಲ್ಲಿಸುತ್ತಿದ್ದಾರೆ.

 

ಅಲ್ಲದೆ, ಹೊಸಕೋಟೆ ಟೋಲ್ ಮುಂಭಾಗದಲ್ಲಿ ಸಿಐಟಿಯು ಕಾರ್ಯಕರ್ತರು ಜಮಾಯಿಸಿದ್ದಾರೆ. ಆದರೆ, ಅವರನ್ನೂ ಸಹ ತಡೆದು ನಿಲ್ಲಿಸಲಾಗಿದೆ. ಪರಿಣಾಮ ಸಿಐಟಿಯು ಕಾರ್ಯಕರ್ತರು ಮತ್ತು ರೈತ ಹೋರಾಟಗಾರರು ರಾಷ್ಟ್ರ ಧ್ವಜ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲೂ ಸಹ ರೈತರ ಟ್ರಾಕ್ಟರ್ ಗಳಿಗೆ ಪೊಲೀಸರು ತಡೆದಿದ್ದಾರೆ.

 

ಈ ನಡುವೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಮತ್ತು ರೈತ ಹೋರಾಟಗಾರರು ಮಾದಾವರದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಅಲ್ಲದೆ, ಮಾದಾವರದಲ್ಲಿ ಭಾರತದ ಧ್ವಜಗಳನ್ನು ಹಿಡಿದು ಪರೇಡ್ ನಡೆಸುವ ಮೂಲಕ ಎಲ್ಲಾ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್​ ಟ್ರ್ಯಾಕ್ಟರ್​ ಸಮೇತ ಬೆಂಗಳೂರಿಗೆ ಪ್ರವೇಶಿಸುವುದಾಗಿಯೂ ತಿಳಿಸಿದ್ದಾರೆ. ಈ ರ‍್ಯಾಲಿಯಲ್ಲಿ ರೈತರ ಜೊತೆಗೆ ಕಾರ್ಮಿಕರು, ದೆಲಿತರು, ಮಹಿಳೆಯರೂ ಸಹ ಭಾಗವಹಿಸಲಿದ್ದಾರೆ. ಈಗಾಗಲೇ ಅನೇಕರು ತಂಡೋಪ ತಂಡವಾಗಿ ನಂದಿಕ್ರಾಸ್ ಬಳಿ ಜಮಾವಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

naanugouri

Please follow and like us:
error