ಟ್ರಂಪಾಪತಿಗಳು ಸೋತರೆ ನನಗೇಕೆ ಖುಷಿ ಆಗಬೇಕು?-ರಾಜಾರಾಂ ತಲ್ಲೂರ್

“ಸಾರ್ವಜನಿಕ ಲಜ್ಜೆ” ಎಂಬುದೊಂದಿದೆ. ಮನುಷ್ಯ ಎಷ್ಟೇ ಕೆಟ್ಟಾಕೊಳಕನಾಗಿದ್ದರೂ ಈ ಸಾರ್ವಜನಿಕ ಲಜ್ಜೆಗೆ ಭಯಪಡುವ ತನಕ ಅವನನ್ನು ಸಹಿಸಿಕೊಳ್ಳಬಹುದು. ಆರಂಭದಿಂದಲೇ ಅದನ್ನು ಮೀರಿ ವರ್ತಿಸುವುದನ್ನೇ ತನ್ನ ಹೆಚ್ಚುಗಾರಿಕೆ ಎಂದು ಪ್ರದರ್ಶಿಸುತ್ತಾ ಬಂದ ವ್ಯಕ್ತಿ ಆತ. ಉಳಿದ ಜಗತ್ತಿಗೆ ಕಾರ್ಪೋರೇಟ್ ಗಳ ಏಜಂಟರಂತೆ ವರ್ತಿಸುವ ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಭಾರತಕ್ಕೇನೂ ಲಾಭ ಇಲ್ಲದಿದ್ದರೂ, ಹೊಸ ಫ್ಯಾಷನ್ನಿಗೆ “ಅಮೆರಿಕದ” ಕಡೆ ನೋಡುವುದು ಅಭಿವೃದ್ಧಿಶೀಲ ದೇಶಗಳ ಸಂಪ್ರದಾಯ.
ಮಹಿಳೆಯರ ಬಗ್ಗೆ “They let you do it. You can do anything. Grab ’em by the pussy.” ಎಂದ ವ್ಯಕ್ತಿಯೊಬ್ಬನನ್ನು ಅಮೆರಿಕದ ಜನ ಅಧ್ಯಕ್ಷನನ್ನಾಗಿ ಆರಿಸಿದ್ದಾರೆ ಎಂದಾಗಲೇ ಅಚ್ಚರಿ ಆಗಿತ್ತು. ಮನುಷ್ಯನನ್ನು ಆತ ಕುಳಿತ ಸ್ಥಾನ ಸುಧಾರಿಸೀತು ಅಂದುಕೊಂಡರೆ, ಆತ ದಂಡಿಗೆ ಹತ್ತಿ ಅದಕ್ಕಿಂತ ಕೆಟ್ಟದಾಗಿ ವರ್ತಿಸಿದ.
ಈ ವ್ಯಕ್ತಿಯ ಉಬ್ಬಾಳುತನವನ್ನು ಅನುಸರಿಸುವ ಒಂದಿಷ್ಟು ನಾಯಕರೂ ಜಗತ್ತಿನಾದ್ಯಂತ ಕಾಣಿಸಿಕೊಂಡರು ಮತ್ತು “ಅವರ” ಡೆಮಾಕ್ರಸಿಯೇ “ಸರ್ವಾಧಿಕಾರ” ಅನ್ನಿಸತೊಡಗಿತು. ಟ್ರಂಪಾಪತಿಗಳು ಈ ಚುನಾವಣೆಯಲ್ಲೂ ಗೆದ್ದುಬಿಟ್ಟಿದ್ದರೆ (ನೆನಪಿಡಿ- ಬೈದನ್ ಗೆದ್ದದ್ದು ಫೊಟೋಫಿನಿಷ್ ಸ್ಪರ್ಧೆಯನ್ನು) ಜಗತ್ತಿನ “ಡೆಮಾಕ್ರಾಟಿಕ್ ಮೌಲ್ಯಗಳು” ಉಬ್ಬಾಳುತನದ ಎದುರು ಅಪ್ರಸ್ತುತಗೊಳ್ಳುವ ಸಾಧ್ಯತೆಗಳಿದ್ದವು.
ಮನುಷ್ಯ ಎಲ್ಲೆಗಳನ್ನು ಮೀರಬೇಕು, “ಅನಿಕೇತನ” ಆಗಬೇಕು ಎಂಬ ಜಾಗತಿಕ ಮೌಲ್ಯವನ್ನು ನಿರಾಕರಿಸಿ, “ಅಮೆರಿಕ ಫರ್ಸ್ಟ್” ಎಂಬ ಕ್ಯಾರಟ್ ನೇತಾಡಿಸಿ ಪಡೆದ ಗೆಲುವು ಅಮೆರಿಕದಲ್ಲಿ ಏನು ಮಾಡಿತು ಎಂಬುದಕ್ಕಿಂತಲೂ, ಜಗತ್ತಿನ ಹಲವೆಡೆ “ಮೊದಲು ನಾವು ಬಳಿಕ ಉಳಿದವರು” ಎಂಬ ರಿವರ್ಸ್ ಗೇರಿನ, ವಿಭಾಜಕ ಚಿಂತನೆಗೆ ಹಾದಿಮಾಡಿಕೊಟ್ಟಿತು ಎಂಬುದನ್ನು ಮರೆಯದಿರೋಣ.
ಮನುಷ್ಯ ತಾನು ಸರಿ ಇಲ್ಲಎಂಬುದನ್ನು ಮರೆತು ತನ್ನ ಸುತ್ತ ಇರುವ ವ್ಯವಸ್ಥೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಪ್ರಜಾತಾಂತ್ರಿಕ ಮೌಲ್ಯಗಳನ್ನು ಮರೆತು ಉಡಾಫೆ, ಲಜ್ಜೆ ರಾಹಿತ್ಯ, ಹಸಿಸುಳ್ಳು ಮತ್ತು ಒಡೆದಾಳುವ ಮನಸ್ಸುಗಳನ್ನು ಬೆಂಬಲಿಸುವ ಸ್ಥಿತಿ ಎಗ್ಗಿಲ್ಲದೆ ಮುಂದುವರಿದಿದ್ದರೆ, ಅಂತಹ ಇನ್ನಷ್ಟು ನಾಯಕರು ಜಗತ್ತಿನೆಲ್ಲೆಡೆ ಹೊಟ್ಟಿಕೊಳ್ಳುತ್ತಿದ್ದರು; ಜಗತ್ತು ಇನ್ನಷ್ಟು ಅಸಹನೀಯ ಆಗುತ್ತಿತ್ತು. ಅದಕ್ಕೊಂದು ಅರ್ಧ ವಿರಾಮ ಬಿದ್ದಿದೆ. ಜಗತ್ತಿನಾದ್ಯಂತ ತಲೆಯೆತ್ತಿರುವ ಇಂತಹ ಕೆಲವು ಬೆರಳೆಣಿಕೆಯ ಆಡಳಿತಗಾರ ಬೀಜಗಳಿಗೆ ಇದೊಂದು ಎಚ್ಚರಿಕೆಯ ಗಂಟೆ ಆಗಲಿದೆ.
ಆ ಕಾರಣಕ್ಕೆ ಇದು “ಸದ್ಧರ್ಮ ವಿಜಯವು!”
Please follow and like us:
error