ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಆಚರಿಸುತ್ತೇವೆ: ಬಿಜೆಪಿ ಯುವ ಮೋರ್ಚಾ ನಾಯಕ

 ಶರತ್ ಬಚ್ಚೇಗೌಡ

ಬೆಂಗಳೂರು,  : ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ, ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಜಯಂತಿಯನ್ನು ನಾವೇ ಮುಂದೆ ನಿಂತು ಆಚರಿಸುತ್ತೇವೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಹಿಂದೆ ಸಿದ್ದರಾಮಯ್ಯ ಸರಕಾರ ಆಚರಣೆಗೆ ತಂದಿದ್ದ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಇತ್ತೀಚೆಗೆ ಹೊಸಕೋಟೆಯಲ್ಲಿ ದರ್ಗಾವೊಂದರ ಉರೂಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶರತ್ ಬಚ್ಚೇಗೌಡ, ಹಲವು ಬಾರಿ ನನಗೆ ಟಿಪ್ಪು ಜಯಂತಿ ಆಚರಣೆ ಮಾಡದಂತೆ ಸಾಕಷ್ಟು ಜನ ಹೇಳಿದ್ದಾರೆ. ಆದರೆ, ಈ ಬಾರಿ ನಾವೇ ಟಿಪ್ಪು ಜಯಂತಿಯನ್ನು ಮುಂದೆ ನಿಂತು ಆಚರಣೆ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ಶರತ್ ಬಚ್ಚೇಗೌಡ ನೀಡಿದ ಹೇಳಿಕೆಯಿಂದ ಅಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಅಲ್ಲದೇ, ಇದೇ ವೇಳೆ ಯುವಕನೊಬ್ಬ ವೇದಿಕೆ ಮೇಲೆ ಬಂದು ಶರತ್ ಬಚ್ಚೇಗೌಡ ಮೇಲೆ ನೋಟುಗಳನ್ನು ಸುರಿಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ಗೆ ಬಿಜೆಪಿ ಟಿಕೆಟ್ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಶರತ್ ಬಚ್ಚೇಗೌಡಗೆ ರಾಜ್ಯ ವಸತಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ಎಂಟಿಬಿ ನಾಗರಾಜ್ ಎದುರು ಪರಾಭವಗೊಂಡಿರುವ ಶರತ್ ಬಚ್ಚೇಗೌಡ, ವಸತಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದರು. ಅಲ್ಲದೇ, ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.

ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರ ಮತಗಳ ಮೇಲೆ ಕಣ್ಣಿಟ್ಟು ಶರತ್ ಬಚ್ಚೇಗೌಡ, ಟಿಪ್ಪು ಜಯಂತಿ ಆಚರಣೆಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಪಾಳಯಕ್ಕೆ ಜಿಗಿಯಲು ಸಿದ್ಧವಾಗಿರುವ ಎಂಟಿಬಿ ನಾಗರಾಜ್‌ಗೆ ಶರತ್ ಬಚ್ಚೇಗೌಡರ ಈ ನಡೆಯಿಂದ ಹಿನ್ನಡೆಯಾದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

Please follow and like us:
error