‘ಝೀ ನ್ಯೂಸ್’ ಮುಖ್ಯ ಸಂಪಾದಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಂಸದೆ ಮಹುವಾ ಮೊಯಿತ್ರ

ಹೊಸದಿಲ್ಲಿ : ತೃಣಮೂಲ ಸಂಸದೆ ಮಹುವಾ ಮೊಯಿತ್ರ ಹಾಗೂ ಝೀ ನ್ಯೂಸ್ ವಾಹಿನಿಯ ಮುಖ್ಯ ಸಂಪಾದಕ ಸುಧೀರ್ ಚೌಧರಿ ನಡುವಿನ  ಸಂಘರ್ಷಕ್ಕೆ ಹೊಸ ತಿರುವು ದೊರಕಿದ್ದು ಸಂಸದೆ ಇದೀಗ ಝೀ ನ್ಯೂಸ್ ಮುಖ್ಯ ಸಂಪಾದಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಜೂ. 25ರಂದು ಮೊಯಿತ್ರ ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಫ್ಯಾಸಿಸಂನ ಏಳು ಲಕ್ಷಣಗಳನ್ನು ವಿವರಿಸಿ ಅದು ಭಾರತಕ್ಕೂ ಹೇಗೆ ಅನ್ವಯಿಸುತ್ತದೆ ಎಂದು ಹೇಳಿದ್ದರಲ್ಲದೆ ಈ ಭಾಷಣ ಸಾಕಷ್ಟು ಮಂದಿಯ ಗಮನ ಕೂಡ ಸೆಳೆದಿತ್ತು.

ಆದರೆ ಮೊಯಿತ್ರ ಅವರ ಭಾಷಣವು ವಾಷಿಂಗ್ಟನ್ ಮಂತ್ಲಿಯಲ್ಲಿ ಜನವರಿ 2017ರಲ್ಲಿ ಪ್ರಕಟವಾದ ಮಾರ್ಟಿನ್ ಲಾಂಗ್ ಮ್ಯಾನ್ ಅವರ  ಲೇಖನವೊಂದರ ಕೃತಿ ಚೌರ್ಯವಾಗಿದೆ ಎಂದು  ಜು.4ರಂದು ಸುಧೀರ್ ಚೌಧರಿ ತಮ್ಮ ಪ್ರೈಮ್ ಟೈಮ್ ಶೋದಲ್ಲಿ ಆರೋಪಿಸಿದ್ದರು.

ಮೊಯಿತ್ರ ಅವರ ಭಾಷಣವು ಅಮೆರಿಕಾದ ಹೊಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂನಲ್ಲಿನ ಹೊಲೋಕಾಸ್ಟ್ ಪೋಸ್ಟರ್ ನಿಂದ ಪ್ರಭಾವಿತವಾಗಿತ್ತು ಎಂದು ಅವರ ವಕೀಲೆ ಶದಾನ್ ಫರಾಸತ್ ಹೇಳಿದ್ದರು. ತಮ್ಮ ಭಾಷಣದಲ್ಲಿ ಉಲ್ಲೇಖಿಸಲಾದ ಅಂಶಗಳ ಮೂಲವನ್ನು ಮೊಯಿತ್ರ ಸ್ಪಷ್ಟವಾಗಿ ಭಾಷಣದಲ್ಲಿ ಹೇಳಿದ್ದರೆಂದೂ ವಕೀಲರು ತಿಳಿಸಿದ್ದರು.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಮೊಯಿತ್ರ ಪ್ರಕರಣದ ವಿಚಾರಣೆಯನ್ನು ಜು. 20ಕ್ಕೆ ನಿಗದಿ ಪಡಿಸಿದ್ದಾರೆ.

ಮೊಯಿತ್ರ ಅವರ ವಿರುದ್ಧ ಕೃತಿ ಚೌರ್ಯದ ಸುಳ್ಳು ಆರೋಪ ಹೊರಿಸಲಾಗಿದೆಯೆಂದು ಕೃತಿಯ ಲೇಖಕ ಮಾರ್ಟಿನ್ ಲಾಂಗ್ ಮ್ಯಾನ್ ಕೂಡ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

 

Please follow and like us:
error