ಆಲಿಘರ್ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ‘ಜೈ ಶ್ರೀ ರಾಮ್’ ಘೋಷಣೆ ಕೂಗುತ್ತಿದ್ದರು : ಸತ್ಯಶೋಧನಾ ವರದಿ

ಲಕ್ನೋ: ಕಳೆದ ವಾರ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸ್ ಕಾರ್ಯಾಚರಣೆಯ ಕುರಿತಂತೆ ಮಾಜಿ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್, ಶಿಕ್ಷಣತಜ್ಞೆ ನಂದಿನಿ ಸುಂದರ್, ಹಕ್ಕು ಕಾರ್ಯಕರ್ತ ಜಾನ್ ದಯಾಳ್, ಸಾಹಿತಿ ನತಾಶ ಬಧ್ವರ್ ಸಹಿತ 13 ಮಂದಿಯ ಸತ್ಯಶೋಧನಾ ತಂಡ ಸಿದ್ಧಪಡಿಸಿರುವ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ.

ಪೊಲೀಸರು ಕಾರ್ಯಾಚರಣೆಯ ವೇಳೆ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಾ ಹಾಗೂ ವಾಹನಗಳಿಗೆ ಹಾನಿಗೈಯ್ಯುತ್ತಾ   ‘ಜೈಶ್ರೀ ರಾಮ್’ ಘೋಷಣೆ ಕೂಗುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಉಗ್ರನಿಗ್ರಹ ಕಾರ್ಯಾಚರಣೆ ಅಥವಾ ಯುದ್ಧದಂತಹ ಸಂದರ್ಭಗಳಲ್ಲಿ ಬಳಸುವ ಸ್ಟನ್ ಗ್ರೆನೇಡ್ ಗಳನ್ನು ಕ್ಯಾಂಪಸ್ ನಲ್ಲಿ ಪೊಲೀಸರು ಬಳಸಿದ್ದರು ಹಾಗೂ ಸಾಕಷ್ಟು ಮಾನವ ಹಕ್ಕು ಉಲ್ಲಂಘನೆಗಳು ನಡೆದಿವೆ ಎಂದು ವರದಿ ಹೇಳಿದೆ. ಕ್ಯಾಂಪಸ್ ಮತ್ತು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶ ಪೊಲೀಸರ ದೌರ್ಜನ್ಯದಿಂದ ರಕ್ಷಿಸಲು ವಿವಿ ಆಡಳಿತ ವಿಫಲವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಘಟನೆ ನಡೆದಾಗ ಕ್ಯಾಂಪಸ್ಸಿನಲ್ಲಿ ಉಪಸ್ಥಿತರಿದ್ದ ಹಾಗೂ ತಮ್ಮ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರರನ್ನು ಸಂಪರ್ಕಿಸಿ ಸತ್ಯಶೋಧನಾ ತಂಡ ಈ `ದಿ ಸೀಜ್ ಆಫ್ ಆಲಿಘರ್ ಮುಸ್ಲಿಂ ಯುನಿವರ್ಸಿಟಿ’ ಎಂಬ ಶೀರ್ಷಿಕೆಯ ಈ ವರದಿ ಸಿದ್ಧಫಡಿಸಿದೆ.

ಅಶ್ರುವಾಯು ಗುಂಡು ಎಂದು ತಪ್ಪಾಗಿ ತಿಳಿದು ಸ್ಟನ್ ಗ್ರೆನೇಡನ್ನು ಕೈಗೆತ್ತಿಕೊಂಡ ವಿದ್ಯಾರ್ಥಿಯೊಬ್ಬ ತನ್ನ ಕೈ ಕಳೆದುಕೊಂಡಿದ್ದರೂ ಈ ಶಸ್ತ್ರವನ್ನು ಪೊಲೀಸರು ಬಳಸಿದ್ದನ್ನು ವಿವಿ ಆಡಳಿತ ಸಮರ್ಥಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. “ಕಾರ್ಯಾಚರಣೆಯ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ಆತಂಕವಾದಿ ಎಂದೂ ಬಣ್ಣಿಸಿದ್ದರು, ವಿವಿ ಉಪಕುಲಪತಿ  ಪೊಲೀಸ್ ಪಡೆಗಳನ್ನು ವಿವಿಗೆ ಬರ ಹೇಳಿದ್ದರು, ಆದರೆ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸೈನಿಕರು ನಂತರ ಗೇಟುಗಳನ್ನು ಒಡೆದಿದ್ದರೇ ಎಂಬುದು ತಿಳಿದಿಲ್ಲ” ಎಂದು ವರದಿಯಲ್ಲಿ ಉಲ್ಲೇಖಗೊಂಡಿದೆ.

ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಆಲಿಘರ್ ವಿವಿಯಲ್ಲಿ ಡಿಸೆಂಬರ್ 15ರಂದು ಪ್ರತಿಭಟಿಸಲು ಸೇರಿದ್ದ ಸಂದರ್ಭ ಘಟನೆ ನಡೆದಿತ್ತು.

Please follow and like us:
error