ಜೈಪುರ: ತಾಯಿ ಅಗಲಿಕೆ ನಡುವೆಯೂ ಕೊರೋನ ರೋಗಿಗಳ ಸೇವೆ !

ಜೈಪುರ: ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದೇ ಕೊರೋನ ರೋಗಿಗಳ ಸೇವೆ ಮುಂದುವರಿಸಿದ ಇಲ್ಲಿನ ಎಸ್‌ಎಂಎಸ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಯೊಬ್ಬರ ಸೇವಾ ಮನೋಭಾವ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಆಸ್ಪತ್ರೆಯ ತೀವ್ರ ನಿಗಾ ಘಟಕದ ಜವಾಬ್ದಾರಿ ಹೊಂದಿದ್ದ ರಾಮಮೂರ್ತಿ ಮೀನಾ ಎಂಬುವವರು ರೋಗಿಗಳ ಸೇವೆಯ ನಡುವೆಯೇ ಅಲ್ಪ ಬಿಡುವು ಮಾಡಿಕೊಂಡು ತಾಯಿಯ ಅಂತ್ಯಸಂಸ್ಕಾರವನ್ನು ವೀಡಿಯೊ ಕಾಲ್ ಮೂಲಕ ನೋಡಿದರು.

ಅವರ ತಾಯಿ ಭೋಲಿ ದೇವಿ ಮಾ. 30ರಂದು 93ನೇ ವಯಸ್ಸಿನಲ್ಲಿ ಮೃತಪಟ್ಟರು. ಆದರೆ ಕೋವಿಡ್-19 ಸೋಂಕಿತರ ಆರೈಕೆಯಲ್ಲಿದ್ದ ರಾಮಮೂರ್ತಿ ಪಾಲಿಗೆ ಕರ್ತವ್ಯವೇ ಪ್ರಮುಖವಾಯಿತು. ತಾಯಿಯ ಅಗಲಿಕೆಯ ದುಃಖ, ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ಒರಸಿಕೊಂಡೇ ರೋಗಗಳ ಆರೈಕೆ ಮುಂದುವರಿಸಿದರು. ತಾಯಿಯ ಅಂತ್ಯಸಂಸ್ಕಾರ ನೆರವೇರಿಸುವಂತೆ ಸಹೋದರನಿಗೆ ಹೇಳಿ ತಮ್ಮ ಕರ್ತವ್ಯ ಮುಂದುವರಿಸಿದರು.

ನನ್ನ ತಾಯಿ ಕೊನೆಯುಸಿರೆಳೆದರು; ಆದರೆ ಜೀವಂತವಾಗಿದ್ದು, ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವವರಿಗೆ ನನ್ನ ಅಗತ್ಯತೆ ಆ ಸಂದರ್ಭದಲ್ಲಿ ಹೆಚ್ಚು ಇತ್ತು. ಆದ್ದರಿಂದ ಕೋವಿಡ್-19 ರೋಗಿಗಳ ಆರೈಕೆಯನ್ನೇ ಆಯ್ಕೆ ಮಾಡಿಕೊಂಡೆ ಎಂದು ಮೀನಾ ವಿವರಿಸಿದರು.

ರೋಗಿಗಳನ್ನು ಬಿಟ್ಟು ಹೋಗುವಂತಿಲ್ಲ. ನಾವೆಲ್ಲ ಈ ಸೋಂಕಿನ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದ್ದೇವೆ. ಪತ್ನಿ ಹಾಗೂ ಮಕ್ಕಳು ಕರೌಲಿ ಜಿಲ್ಲೆಯ ಗ್ರಾಮದಲ್ಲಿದ್ದಾರೆ. ನನ್ನ ತಂದೆ ಹಾಗೂ ಮೂವರು ಸಹೋದರರು, ಕೊರೋನ ರೋಗಿಗಳ ಸೇವೆಯನ್ನೇ ಮುಂದುವರಿಸು ಎಂದು ಬೆಂಬಲಿಸಿದರು. ಕೆಲಸ ಮಾಡುವ ಧೈರ್ಯ ತುಂಬಿದರು ಎಂದು ಮೀನಾ ನೆನಪಿಸಿಕೊಂಡರು.

ಇದು ಕರ್ತವ್ಯದ ಬಗೆಗಿನ ಬದ್ಧತೆ. ಮೀನಾ ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗಲು ಬಯಸಿದ್ದರೆ, ಆಡಳಿತಯಂತ್ರ ಅದಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಹಲವು ಮಂದಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿದ್ದ ಹಿನ್ನೆಲೆಯಲ್ಲಿ ಅವರು ಐಸಿಯು ಬಿಟ್ಟು ಕದಲಲಿಲ್ಲ. ಅವರಿಗೆ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂಬ ದುಃಖ ನಮಗಿದೆ. ಆದರೆ ಅವರು ಇಡೀ ದೇಶದ ವೈದ್ಯಕೀಯ ಸಿಬ್ಬಂದಿಗೆ ಸ್ಫೂರ್ತಿ. ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಆಲ್ ರಾಜಸ್ಥಾನ ನರ್ಸಿಂಗ್ ಅಸೋಶಿಯೇಶನ್ ಅಧ್ಯಕ್ಷ ರಾಜೇಂದ್ರ ರಾಣ ಮೆಚ್ಚುಗೆ ಸೂಚಿಸಿದ್ದಾರೆ.

Please follow and like us:
error