ಜಿಲ್ಲೆಯಲ್ಲಿ ಹೆಚ್ಚಿದ ಕರೋನಾ ಸಾವುಗಳು : ಶಾಸಕರೆ, ಸಂಸದರೇ, ಸಚಿವರೆ ಬೇಗ ಎಚ್ಚೆತ್ತುಕೊಳ್ಳಿ !

ಸಚಿವರು, ಶಾಸಕರು,ಅಧಿಕಾರಿಗಳು ಗುಣಮುಖರಾದವರು, ಜನಸಾಮಾನ್ಯರ ಗೋಳು ಕೇಳುವವರ್ಯಾರು ?

ಕನ್ನಡನೆಟ್ ನ್ಯೂಸ್ ಕೊಪ್ಪಳ : ಜಿಲ್ಲೆಯಲ್ಲಿ  ಕರೋನಾ ಟೆಸ್ಟಿಂಗ್ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಗತಿಯಾದರೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಇದುವರೆಗೆ ಒಟ್ಟು 3819 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ 2542 ಜನರು ಗುಣಮುಖರಾಗಿ ಡಿಸ್ಚಾರ್ಜ ಆಗಿದ್ದಾರೆ. ನಿನ್ನೆಯ ವರದಿಯಂತೆ 85 ಜನ ಸಾವನ್ನಪ್ಪಿದ್ಧಾರೆ. ಇಂದು ಕೊಪ್ಪಳ ನಗರದ ಇಬ್ಬರು ಮಾಜಿ ನಗರಸಭಾ ಸದಸ್ಯರಾದ ಬಾಳಪ್ಪ ಬಾರಕೇರ, ಸುರೇಶ ಗಿರಣಿ, ನಿವೇದಿತಾ ಶಾಲೆಯ ವೆಂಕಟೇಶ ಪುಲಸ್ಕರ್ ಸೇರಿದಂತೆ ಹಲವರು ಮೃತಪಟ್ಟಿದ್ಧಾರೆ. ಮೃತಪಟ್ಟವರಲ್ಲಿ ಬಹಳಷ್ಟು ಜನರ ಸಾವಿಗೆ ಕಾರಣ ಹೃದಯಾಘಾತ ಎನ್ನಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಚಿಕಿತ್ಸೆ ಕೈಗೆಟುಕದಂತಾಗಿದೆ. ವಿಐಪಿಗಳು, ಜನಸಾಮಾನ್ಯರು , ಬಡವ ಬಲ್ಲಿದ ಎನ್ನುವ ಯಾವುದೇ ಬೇಧಬಾವವಿಲ್ಲದಂತೆ ಜನ ಆಸ್ಪತ್ರೆಗಳಲ್ಲಿ ಸಾಯುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಇದೆ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಿದ್ಧಾರೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದರ ಹೊರತಾಗಿಯೂ ಸಹ ಹಾರ್ಟಸ್ಪೇಷಲಿಸ್ಟ್ ಗಳು ಹಾಗೂ ಇತರೆ ವಿಶೇಷ ತಜ್ಞರ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಮೊನ್ನೆ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪ ಬಂದಾಗ ವೈದ್ಯರ ಕೊರತೆ ನಿಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸೂಚಿಸಿದ್ದರು.  ಉತ್ತಮ ತಜ್ಞವೈದ್ಯರ ಕೊರತೆಯಿಂದ ಸಾವು ಸಂಭವಿಸುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸುತ್ತಿವೆ. ಈಗಾಗಲೇ 85ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ತಜ್ಞವೈದ್ಯರನ್ನು ಕರೆತರುವ  ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ. ಶಾಸಕರೆ, ಸಂಸದರೇ, ಸಚಿವರೆ ಬೇಗ ಎಚ್ಚೆತ್ತುಕೊಳ್ಳಿ ಸಾವುಗಳನ್ನು ತಪ್ಪಿಸಿ ಎಂದು ಜನಸಾಮಾನ್ಯರು ಕೈಮುಗಿಯುವಂತಾಗಿದೆ.

Please follow and like us:
error